ಎಲೈಟ್ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ

KannadaprabhaNewsNetwork |  
Published : Jun 26, 2026, 01:45 AM IST
25ಎಚ್ಎಸ್ಎನ್6 : ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. | Kannada Prabha

ಸಾರಾಂಶ

ಎಲೈಟ್ ಶಾಲೆಯ ವಿದ್ಯಾರ್ಥಿಗಳು ಶಿಸ್ತು, ಏಕತೆ ಹಾಗೂ ನಾಯಕತ್ವದ ಮಹತ್ವವನ್ನು ಪ್ರದರ್ಶಿಸಿದರು. ಶಾಲೆಯ ವಿವಿಧ ವರ್ಣತಂಡಗಳ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಹೆಜ್ಜೆ ಹಾಕಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಆಯ್ಕೆಯಾದ ನಾಯಕಿಯಾಗಿ ಕು. ಸಾರಿಕಾ ಸಿ.ಕೆ. ಹಾಗೂ ಉಪನಾಯಕನಾಗಿ ಚಿ. ವರುಣ್ ಜಿ.ಬಿ. ಅವರು ಅಧಿಕೃತವಾಗಿ ನಾಯಕತ್ವದ ಹೊಣೆಗಾರಿಕೆಯನ್ನು ಸ್ವೀಕರಿಸಿದರು. ನೂತನ ನಾಯಕರಿಗೆ ಬ್ಯಾಡ್ಜ್‌ಗಳನ್ನು ತೊಡಿಸಿ, ಕರ್ತವ್ಯ ನಿರ್ವಹಣೆಗೆ ಶುಭ ಹಾರೈಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವು ಗುರುವಾರ ವಿಜೃಂಭಣೆಯಿಂದ ನಡೆಯಿತು. ಶಾಲೆಯ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿಯ ಪ್ರಜ್ಞೆ ಹಾಗೂ ಶಿಸ್ತಿನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಶಿಸ್ತು, ಏಕತೆ ಹಾಗೂ ನಾಯಕತ್ವದ ಮಹತ್ವವನ್ನು ಪ್ರದರ್ಶಿಸಿದರು. ಶಾಲೆಯ ವಿವಿಧ ವರ್ಣತಂಡಗಳ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಹೆಜ್ಜೆ ಹಾಕಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಆಯ್ಕೆಯಾದ ನಾಯಕಿಯಾಗಿ ಕು. ಸಾರಿಕಾ ಸಿ.ಕೆ. ಹಾಗೂ ಉಪನಾಯಕನಾಗಿ ಚಿ. ವರುಣ್ ಜಿ.ಬಿ. ಅವರು ಅಧಿಕೃತವಾಗಿ ನಾಯಕತ್ವದ ಹೊಣೆಗಾರಿಕೆಯನ್ನು ಸ್ವೀಕರಿಸಿದರು. ನೂತನ ನಾಯಕರಿಗೆ ಬ್ಯಾಡ್ಜ್‌ಗಳನ್ನು ತೊಡಿಸಿ, ಕರ್ತವ್ಯ ನಿರ್ವಹಣೆಗೆ ಶುಭ ಹಾರೈಸಲಾಯಿತು.

ಇದೇ ವೇಳೆ ಕೆ.ಸಿ.ಪಿ. ಗ್ರೂಪ್ಸ್‌ನ ವ್ಯವಸ್ಥಾಪಕರು ಹಾಗೂ ಶಾಲೆಯ ಕಾರ್ಯದರ್ಶಿಗಳಾದ ಹೆಚ್.ಪಿ. ಕಿರಣ್ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ‘ಮೈಸೂರು ವಿಭಾಗದ ಜನಮೆಚ್ಚಿದ ನಾಯಕ-೨೦೨೫’ ಪ್ರಶಸ್ತಿಗೆ ಭಾಜನರಾಗಿರುವ ಅವರನ್ನು ಇದೇ ವೇಳೆ ಶಾಲಾ ಕುಟುಂಬದ ವತಿಯಿಂದ ಅಭಿನಂದಿಸಲಾಗಿದೆ. ನಾಯಕತ್ವ ಎನ್ನುವುದು ಕೇವಲ ಹುದ್ದೆಯಲ್ಲ, ಅದು ಜವಾಬ್ದಾರಿ. ಪ್ರತಿಯೊಬ್ಬ ನಾಯಕರು ಶಿಸ್ತು, ಸಮಯಪ್ರಜ್ಞೆ, ಉತ್ತಮ ಭಾಷಾ ಕೌಶಲ್ಯ, ಸೌಜನ್ಯಯುತ ನಡವಳಿಕೆ ಹಾಗೂ ಶೈಕ್ಷಣಿಕ ಸಾಧನೆಯಲ್ಲಿ ಇತರರಿಗೆ ಮಾದರಿಯಾಗಬೇಕು. ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಪಾಠಿಗಳನ್ನು ಮುನ್ನಡೆಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಲೆಯ ಖಜಾಂಚಿ ಸಪ್ನ ಕಿರಣ್ ಮಾತನಾಡಿ, ವಿದ್ಯಾರ್ಥಿ ನಾಯಕರು ಶಾಲೆಯ ಇತರ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾಗಿ ನಡೆದುಕೊಳ್ಳಬೇಕು. ಶಾಲೆಯ ನಿಯಮಗಳು ಹಾಗೂ ಶಿಸ್ತನ್ನು ಪಾಲಿಸುವ ಮೂಲಕ ಉತ್ತಮ ನಾಯಕತ್ವವನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಆಯ್ಕೆಯಾದ ವಿವಿಧ ಹುದ್ದೆಗಳ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ವಿತರಿಸಿ ಶುಭಕೋರಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಇದೇ ಸಂದರ್ಭದಲ್ಲಿ ಶಾಲೆಯ ವಿವಿಧ ವರ್ಣತಂಡಗಳ ನಾಯಕರಿಗೆ ಬಾವುಟಗಳನ್ನು ವಿತರಿಸಿ ಅವರ ಜವಾಬ್ದಾರಿಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪದಗ್ರಹಣ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಯನ್ಸ್ ಸಂಸ್ಥೆಗೆ ಪ್ರಚಾರ ವಾಹನ ಹಸ್ತಾಂತರ
ಸರ್ಕಾರಿ ಶಾಲಾ ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕೆ ಆಗ್ರಹ