- ಕಂದಾಯ ಅಧಿಕಾರಿಗಳೇ ಶಾಮೀಲು: ಪ್ರತಿಭಟನೆಯಲ್ಲಿ ಬಸವರಾಜ ನಾಯ್ಕ್ ಆರೋಪ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಸಾಗರಪೇಟೆ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದು, ಇದರಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಬಸವಾಪಟ್ಟಣ ಗ್ರಾಮದ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಮಾಜಿ ಶಾಸಕ ಬಸವರಾಜ ನಾಯ್ಕ್ ಈ ಸಂದರ್ಭ ಮಾತನಾಡಿ, ಗುಡ್ಡದ ಮಣ್ಣು ಲೂಟಿಯಾಗುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸುಮ್ಮನೆ ಇದ್ಧಾರೆ. ಕಂದಾಯ ಇಲಾಖೆ ಅಧಿಕೃತ ಆದೇಶ ನೀಡಿರುವುದು ಕೋಟ್ಯಂತರ ರು. ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ.ಜಿ.ಸಚೀನ್ ಮಾತನಾಡಿ, ನೈಸರ್ಗಿಕ ಸಂಪನ್ಮೂಲ ಮಣ್ಣು ಸಕಲ ಜೀವರಾಶಿಗಳ ಸ್ವತ್ತಾಗಿದೆ. ಇದರ ದುರ್ಬಳಕೆಯ ಕಾರ್ಯ ನಡೆಯುತ್ತಿದೆ. ಮಣ್ಣಿನ ಸಾಗಾಣಿಕೆಗಾಗಿ ನೂರಾರು ಮರ-ಗಿಡಗಳನ್ನು ಕಡಿದು ಹಾಕಿ, ಗುಡ್ಡಗಳನ್ನು ಸವರಿ ನಾಶ ಮಾಡುವ ಕೃತ್ಯದ ವಿರುದ್ಧ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ಆದರೆ, ಇಲಾಖೆಯೇ ಈ ಅಕ್ರಮ ಮಾಡಿಸುತ್ತಿರುವುದು ಎಷ್ಟು ಸರಿ?. ಈ ಬಗ್ಗೆ ಜಿಲ್ಲಾಡಳಿತ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಿ ಕೋಟ್ಯಂತರ ರು. ಲೂಟಿ ಮಾಡಿದವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಹಾಲೇಶ್ ನಾಯ್ಕ್, ಗಣೇಶ್ ನಾಯ್ಕ್, ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು.
-25ಕೆಸಿಎನ್ಜಿ2: