ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಶಾಲೆಯಲ್ಲಿ ಈಚೆಗೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದು ಮಕ್ಕಳು ಅಸ್ವಸ್ಥಗೊಂಡ ಪ್ರಕರಣದಿಂದ ಬಿಸಿಯೂಟ ಸ್ಥಗಿತಗೊಳಿಸಲಾಗಿದ್ದು, ಮರು ಪ್ರಾರಂಭಿಸುವ ಕುರಿತು ಪಾಲಕ, ಪೋಷಕರ ಸಮಾಲೋಚನೆ ಸಭೆ ನಡೆಸಲಾಯಿತು.ಪೋಷಕರಾದ ನಾಗೇಂದ್ರ, ಸ್ವಾಮಿ, ಎಚ್.ಹುಚ್ಚಪ್ಪ, ಜಡೆಪ್ಪ, ದೊಡ್ಡಪ್ಪ ಮಾತನಾಡಿ, ಅಡುಗೆದಾರರ ನಿರ್ಲಕ್ಷದಿಂದ ನ.12ರ ಮಧ್ಯಾಹ್ನ ಹಲ್ಲಿ ಬಿದ್ದಿದ್ದ ಬಿಸಿ ಊಟವನ್ನು ಸೇವಿಸಿ 56ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದ ಘಟನೆ ಸಂಭವಿಸಿತ್ತು. ಕಳೆದ ಮೂರು ವರ್ಷದ ಹಿಂದೆಯೂ ಇಂತದ್ದೇ ಒಂದು ಘಟನೆ ಸಂಭವಿಸಿತ್ತು. ಅಲ್ಲದೇ ಕೆಲ ತಿಂಗಳು ಗಳ ಹಿಂದೆ ಅಡುಗೆ ಕೋಣೆಯಲ್ಲಿ ಕುಕ್ಕರ್ ಸ್ಫೋಟಗೊಂಡು ಅಡುಗೆ ಮಾಡುವವರು ಗಾಯಗೊಂಡಿದ್ದರು. ಈ ತರಹದ ಘಟನೆಗಳಿಂದ ಪೋಷಕರಲ್ಲಿ ಭಯದ ವಾತಾವರಣ ಉಂಟಾಗಿದ್ದು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸಬೇಕು. ಶಾಲೆಯಲ್ಲಿನ ಅಡುಗೆದಾರರನ್ನು ಬದಲಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಸಿಯೂಟ ಸಹಾಯಕ ನಿರ್ದೇಶಕ ಶಿವನನಾಯ್ಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ್, ಸಿ.ಆರ್.ಪಿ ಗಳಾದ ಕೆ.ದೊಡ್ಡಬಸಪ್ಪ, ಹನುಮಂತಪ್ಪ, ಮುಖ್ಯಶಿಕ್ಷಕ ವಿ.ಆರ್. ಮೂರ್ತಿ, ಎಚ್.ಪಿ.ಸೋಮಶೇಖರ ಸೇರಿದಂತೆ ಶಾಲಾ ಸಿಬ್ಬಂದಿ, ಪೋಷಕರಿದ್ದರು.