ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾನೂನುಬಾಹಿರ, ಶಿಕ್ಷಾರ್ಹ ಅಪರಾಧವಾದ ಬಾಲ್ಯ ವಿವಾಹ ನಡೆಯದಂತೆ ಪೋಷಕರು ಪ್ರತಿಜ್ಞೆ ಮಾಡಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಸುಮಾರಾಣಿ ಹೇಳಿದರು.ತಾಲೂಕಿನ ಜಕ್ಕನಹಳ್ಳಿಯ ನಾ.ಚ.ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೇಲುಕೋಟೆ ಯೋಜನಾ ಕಚೇರಿಯ ವತಿಯಿಂದ ಜ್ಞಾನವಿಕಾಶ ಕಾರ್ಯಕ್ರಮದಡಿ ನಡೆದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ಬಾಲ್ಯವಿವಾಹ ಮಾಡುವುದಿಲ್ಲ ಎಂದು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕು. ಎಲ್ಲಿಯೇ ಬಾಲ್ಯವಿವಾಹ ನಡೆದರು ಅದನ್ನು ತಡೆಗಟ್ಟುವ ಕೆಲಸ ಮಾಡಬೇಕು ಎಂದರು.ಸಾರ್ವಜನಿಕ ಸ್ಥಳ, ಬಸ್, ರಸ್ತೆಗಳಲ್ಲಿ ಹೆಚ್ಚು ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರು ರಸ್ತೆಯಲ್ಲಿ ಓಡಾಡುವ ವೇಳೆ ಜಾಗೃತಿರಾಗಬೇಕು. ಬ್ಯಾಂಕ್ ಗಳಲ್ಲಿ ವ್ಯವಹಾರ ನಡೆಸುವ ವೇಳೆ ಎಟಿಎಂ ನಂಬರ್, ಪಿನ್ ನಂಬರ್ ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡಬಾರದು. ಮನೆಗಳ ಬಳಿ ಚಿನ್ನಾಭರಣ ಪಾಲಿಸ್ ಮಾಡುವ ನೆಪದಲ್ಲಿ ಬಂದು ಕಳ್ಳತನ ಮಾಡುವ ಪ್ರಕರಣಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆ ಮಹಿಳೆಯ ಸುರಕ್ಷತೆಗಾಗಿ ಕಾವೇರಿ ಪೊಲೀಸ್ ಪಡೆ ರಚಿಸಿದ್ದಾರೆ. ಮಹಿಳೆಯರು ಸಮಸ್ಯೆ, ತೊಂದರೆ ಬಂದ ವೇಳೆ ಕಾವೇರಿ ಪಡೆಗೆ ಮಾಹಿತಿ ನೀಡಬಹುದು. ಬೈಕ್ ಚಾಲಕರು ಹೆಲ್ಮೆಟ್ ಧರಿಸಬೇಕು ಎಂದರು.ಧರ್ಮಸ್ಥಳ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಸಮಾಜದಲ್ಲಿ ಮಹಿಳೆಯರೇ ಹೆಚ್ಚಾಗಿ ಶೋಷಣೆ, ದೌರ್ಜನಕ್ಕೆ ಒಳಗಾಗುತ್ತಿರುವುದರಿಂದ ಧರ್ಮಸ್ಥಳ ಸಂಸ್ಥೆ ಮಹಿಳೆಯರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಎಂದರು.
ಇದೇ ವೇಳೆ ನಿತ್ಯ ಜೀವನದಲ್ಲಿ ಮಹಿಳಾ ಪರ ಕಾನೂನು ವಿಷಯ ಕುರಿತು ವಕೀಲೆ ಮೈನಾವತಿ, ಬಾಲ್ಯ ವಿವಾಹ, ಮೂಢನಂಬಿಕೆ ವಿರುದ್ಧ ನಿಲುವು ವಿಷಯ ಕುರಿತು ವೈದ್ಯೆ ಡಾ.ವರ್ಷ ಹೂಗಾರ್ ಮಾಹಿತಿ ನೀಡಿದರು. ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಮುರುಳಿಧರ್, ತಾಲೂಕು ಯೋಜನಾಧಿಕಾರಿ ಸರೋಜ, ಜಿಲ್ಲಾ ಜನಜಾಗೃತಿ ಯೋಜನೆ ಉಪಾಧ್ಯಕ್ಷ ಅಶ್ವಥ್ ಕುಮಾರೇಗೌಡ, ಸದಸ್ಯರಾದ ಧನಂಜಯ್, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಜೆ.ಪಿ.ಶಿವಶಂಕರ್, ಕನಕಲಕ್ಷ್ಮಿ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.