ಕನ್ನಡಪ್ರಭ ವಾರ್ತೆ ಬೇತಮಂಗಲ
ನಂತರ ಅವರು ಮಾತನಾಡಿ, ಬಲುವನಹಳ್ಳಿ ಸರ್ಕಾರಿ ಶಾಲಾ ಕಟ್ಟಡವು ಹಳೆಯದಾಗಿದ್ದ ಕಾರಣ ನೂತನವಾಗಿ ಹೊಸ ಕಟ್ಟಡ ನಿರ್ಮಿಸಿ ಇತ್ತೀಚೆಗಷ್ಟೇ ಉದ್ಘಾಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಾಗಿದೆ ಎಂದರು.
ಕ್ಯಾಸಂಬಳ್ಳಿ ಸಿಆರ್‌ಪಿ ರಾಮಮೂರ್ತಿ ಮಾತನಾಡಿ, ಈ ಸಾಲಿನ ಕಲಿಕಾ ಹಬ್ಬದಲ್ಲಿ ವಿಶೇಷವಾಗಿ ನಾಲ್ಕು ಅಂಶಗಳನ್ನು ಸೇರ್ಪಡೆ ಮಾಡಿದೆ, ಇದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿದಂತಾಗುತ್ತದೆ ಎಂದರು. ಮಕ್ಕಳು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅವರ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ಕಲಿಕಾ ಹಬ್ಬ ಶಾಲಾ ಶಿಕ್ಷಣದಲ್ಲಿ ಹೊಸ ಕ್ರಾಂತಿ ತಂದಿದೆ ಎಂದರು.ಈ ಬಾರಿಯ ಕಲಿಕಾ ಹಬ್ಬವನ್ನು ನಾಲ್ಕು ವಿಭಿನ್ನ ಆಯಾಮಗಳಲ್ಲಿ ವಿಂಗಡಿಸಲಾಗಿದ್ದು, ಮಕ್ಕಳಿಗೆ ಹಂತ-ಹಂತವಾಗಿ ತರಬೇತಿ ನೀಡಲಾಯಿತು.
ಚಿತ್ತಾರ ಮೂಲೆ (ಕಲೆ ಮತ್ತು ಕರಕುಶಲ):ಶಾಲೆಯ ಮಕ್ಕಳು ಬಣ್ಣಗಳ ಲೋಕದಲ್ಲಿ ವಿಹರಿಸಿದರು. ತ್ಯಾಜ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಕಾಗದದ ವಿನ್ಯಾಸಗಳು ಮತ್ತು ಚಿತ್ರಕಲೆಯ ಮೂಲಕ ತಮ್ಮ ಕಲ್ಪನಾ ಶಕ್ತಿಯನ್ನು ಪ್ರದರ್ಶಿಸಿದರು.
ಆಟ- ಪಾಠ ಮೂಲೆ:ಜಾನಪದ ಕಲೆಗಳಿಗೆ ಒತ್ತು ನೀಡುವ ಉದ್ದೇಶದಿಂದ ಕೋಲಾಟ, ಜಾನಪದ ನೃತ್ಯ ಮತ್ತು ಸ್ಥಳೀಯ ಆಟಗಳ ಮೂಲಕ ಮನೋರಂಜನೆಯೊಂದಿಗೆ ಸಂಸ್ಕೃತಿಯ ಅರಿವು ಮೂಡಿಸಲಾಯಿತು.
ವಿಜ್ಞಾನ ಮತ್ತು ಗಣಿತ ಮೂಲೆ:ಕ್ಲಿಷ್ಟಕರ ವಿಜ್ಞಾನದ ತತ್ವಗಳನ್ನು ಮತ್ತು ಗಣಿತದ ಸೂತ್ರಗಳನ್ನು ಆಟಿಕೆಗಳ ಮೂಲಕ ಸುಲಭವಾಗಿ ಅರ್ಥಮಾಡಿಕೊಳ್ಳುವ ತಂತ್ರಗಳನ್ನು ಮಕ್ಕಳಿಗೆ ಕಲಿಸಲಾಯಿತು.
ಭಾಷಾ ಸಂಭ್ರಮ:ಕಥೆ ಕಟ್ಟುವುದು, ಕವಿತೆ ವಾಚನ ಮತ್ತು ನಾಟಕದ ಮೂಲಕ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು.
ಸಂಪನ್ಮೂಲ ವ್ಯಕ್ತಿಗಳ ಶ್ರಮ:ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿ ನಾಯ್ಡು, ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಒಂದೇ ಸೂರಿನಡಿ ಸೇರಿ ಜ್ಞಾನ ವಿನಿಮಯ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಪ್ರತಿಯೊಂದು ಮಗುವೂ ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗಿದೆ. ಈ ಕಲಿಕಾ ಹಬ್ಬವು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸಾಮಾಜಿಕ ಸಾಮರಸ್ಯ ಬೆಳೆಸುತ್ತದೆ ಎಂದರು.
ಸಮುದಾಯದ ಸಹಭಾಗಿತ್ವ:ಬಳುವನಹಳ್ಳಿ ಶಾಲೆಯ ಶಿಕ್ಷಕ ವೃಂದ ಮತ್ತು ಎಸ್‌ಡಿಎಂಸಿ ಸದಸ್ಯರು ಹಬ್ಬಕ್ಕೆ ಆಗಮಿಸಿದ ಎಲ್ಲರಿಗೂ ಸುಸಜ್ಜಿತ ವ್ಯವಸ್ಥೆ ಮಾಡಿದ್ದರು. ಗ್ರಾಮದ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಸೃಜನಶೀಲತೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ವಿವಿಧ ಶಾಲೆಗಳಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳು ತಮ್ಮ ಸ್ವಂತ ಕೈಯಿಂದ ಸಿದ್ಧಪಡಿಸಿದ ವಸ್ತುಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ನೌಕರ ಸಂಘದ ಕೃಷ್ಣಮೂರ್ತಿ, ಶ್ರೀನಿವಾಸ್, ರವಿಚಂದ್ರನಾಯ್ಡು, ಗಿರೀಶ್, ಶ್ರೀನಿವಾಸ್ ಮೂರ್ತಿ, ಪ್ರೌಢಶಾಲಾ ಮುಖಶಿಕ್ಷಕ ಮಂಜುನಾಥ್, ಗ್ರಾಪಂ ಸದಸ್ಯರಾದ ಅಪ್ಪಿ, ಗಂಗಾಧರ್ ಇದ್ದರು.