ನವಲಗುಂದ: ಒಕ್ಕಲುತನವನ್ನೇ ನಂಬಿ ಬದುಕುತ್ತಿರುವ ಪಂಚಮಸಾಲಿ ಸಮಾಜ ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡಬೇಕಾದ ಅನಿವಾರ್ಯತೆ ಇದ್ದು, ಪಾಲಕರು ಸಾಲ ಮಾಡಿಯಾದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪ್ರಸ್ತುತ ಕೃಷಿಯನ್ನೇ ನಂಬಿ ಬದುಕುವು ಕಷ್ಟವಾಗುತ್ತಿದೆ. ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆಯಾದಲ್ಲಿ ಉನ್ನತ ವ್ಯಾಸಂಗ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲು ಸಿದ್ದನಿದ್ದು, ಸಮಾಜ ಬಾಂಧವರು ಶಿಕ್ಷಣದೊಂದಿಗೆ ತಮ್ಮ ಮಕ್ಕಳಿಗೆ ಸಂಸ್ಕಾರಯುತ ಜೀವನ ಕಲಿಸಬೇಕು ಎಂದರು.
ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ ಸಮಾಜದಲ್ಲಿ ಐಎಎಸ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ₹1 ಲಕ್ಷ ಸಹಾಯಧನ ನೀಡುವುದಾಗಿ ವಾಗ್ದಾನ ಮಾಡಿದರು.ಸಮಾರಂಭವನ್ನು ಉದ್ಘಾಟಿಸಿ ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವರ ಮಾತನಾಡಿದರು. ತಾಲೂಕು ಅಧ್ಯಕ್ಷ ಶಂಕರಗೌಡ ಬಾಳನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶಾಂತಾದೇವಿ ನಿಡವಣಿ, ಎಂ.ಎಸ್. ರೋಣದ, ನಾಗನಗೌಡ ಪಾಟೀಲ, ಅಡಿವೆಪ್ಪ ಮನಮಿ, ನಿಂಗಣ್ಣ ಕರಿಕಟ್ಟಿ, ಸದುಗೌಡ ಪಾಟೀಲ್ ಮತ್ತಿರರಿದ್ದರು.