ವಿಜಯ ಶಾಲೆಯಲ್ಲಿ ನಡೆದ ವಿಜಯ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತ, ಶಾಲೆಯಲ್ಲಿ ತಿಳಿಸುವ ಪುಸ್ತಕ ಜ್ಞಾನದ ಜೊತೆಗೆ ಪೋಷಕರು ಸಹ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬರುವಂತೆ ತಿಳಿಸಬೇಕು. ಮಕ್ಕಳಲ್ಲಿ ಕೃಷಿಗೆ ಸಂಬಂಧಿಸಿದ ಅರಿವು ಮೂಡಿಸಲು ಸರ್ಕಾರ ಕೃಷಿ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ಚಿಕ್ಕಂದಿನಿಂದಲೆ ಮೊಬೈಲ್ ಮತ್ತು ಕಂಪ್ಯೂಟರ್ ಬದಲಾಗಿ ಕೃಷಿಯ ಜೊತೆಗೆ ಸ್ವ ಉದ್ಯೋಗವನ್ನು ನಿರ್ಮಿಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಕೃಷಿ ಕ್ರಾಂತಿಯ ಅರಿವು ಮೂಡಿಸುವ ಅಗತ್ಯವಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಪ್ರಗತಿಪರ ರೈತರೂ ಆದ ಡಾ. ಎಂ.ಸಿ ರಂಗಸ್ವಾಮಿಯವರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹಾಸನ
ಮಕ್ಕಳಿಗೆ ಕೃಷಿ ಮತ್ತು ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸಿ ಶಾಲಾ ಹಂತದಲ್ಲಿಯೇ ಅವರಿಗೆ ಕೃಷಿ ಕ್ರಾಂತಿಯ ಅರಿವು ಮೂಡಿಸುವ ಅಗತ್ಯವಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಪ್ರಗತಿಪರ ರೈತರೂ ಆದ ಡಾ. ಎಂ.ಸಿ ರಂಗಸ್ವಾಮಿಯವರು ಅಭಿಪ್ರಾಯಪಟ್ಟರು.ನಗರದ ವಿಜಯ ಶಾಲೆಯಲ್ಲಿ ನಡೆದ ವಿಜಯ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತ, ಶಾಲೆಯಲ್ಲಿ ತಿಳಿಸುವ ಪುಸ್ತಕ ಜ್ಞಾನದ ಜೊತೆಗೆ ಪೋಷಕರು ಸಹ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬರುವಂತೆ ತಿಳಿಸಬೇಕು. ಮಕ್ಕಳಲ್ಲಿ ಕೃಷಿಗೆ ಸಂಬಂಧಿಸಿದ ಅರಿವು ಮೂಡಿಸಲು ಸರ್ಕಾರ ಕೃಷಿ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ಚಿಕ್ಕಂದಿನಿಂದಲೆ ಮೊಬೈಲ್ ಮತ್ತು ಕಂಪ್ಯೂಟರ್ ಬದಲಾಗಿ ಕೃಷಿಯ ಜೊತೆಗೆ ಸ್ವ ಉದ್ಯೋಗವನ್ನು ನಿರ್ಮಿಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು.ರೈತರೆಲ್ಲರೂ ಒಗ್ಗಟ್ಟಿನಿಂದ ಸಮಗ್ರ ಕೃಷಿಯ ಜೊತೆಗೆ ಕೃಷಿ ಉದ್ಯಮದ ಮಾಲೀಕರಾದರೆ ರೈತ ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ.ವಿದ್ಯಾರ್ಥಿಗಳು ವೈದ್ಯ, ಎಂಜಿನಿಯರ್‌ಗಳಾಗಲು ಆಸಕ್ತಿ ತೋರುವಂತೆ ರೈತರಾಗಲು ಒಲವು ತೋರಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ವಿದ್ಯಾರ್ಹತೆ ಅವಶ್ಯವಾಗಿದೆ. ಶೈಕ್ಷಣಿಕ ಅಧ್ಯಯನದ ನಂತರ ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿಪರ ರೈತನಾಗಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ಪಠ್ಯ, ಪಠ್ಯೇತರ ಚಟುವಟಿಕೆಗಳು, ಶಿಸ್ತು, ಸಂಸ್ಕಾರ ಹೀಗೆ ಸರ್ವತೋಮುಖ ಶಿಕ್ಷಣ ನೀಡುತ್ತಿರುವ ವಿಜಯ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮಾಧ್ಯಮಗಳು ಕೃಷಿಯನ್ನು ಒಂದು ಉದ್ದಿಮೆಯಾಗಿ ತೋರಿಸುವುದರ ಮೂಲಕ ಹೆಚ್ಚಿನ ಯುವ ಜನರು ಈ ಕ್ಷೇತ್ರದಲ್ಲಿ ತೊಡಗುವಂತೆ ಪ್ರೇರೇಪಿಸುವ ಅಗತ್ಯವಿದೆ. ಕೃಷಿ ಜಮೀನಿನಲ್ಲಿ ಒಂದೇ ತರಹದ ಬೆಳೆ ಬೆಳೆಯದೆ ಅನೇಕ ರೀತಿಯ ಮರಗಳು, ಹಣ್ಣಿನ ಗಿಡಗಳು, ಅಡಿಕೆ ತೆಂಗು ಬಾಳೆ ಹೀಗೆ ಹಲವಾರು ರೀತಿಯ ಬೆಳೆ ಬೆಳೆದು ಪರಿಸರ ರಕ್ಷಣೆಯ ಮೂಲಕ ಹಣಸಂಪಾದನೆಯನ್ನು ಮಾಡಬಹುದು ಎಂದು ತಿಳಿಸಿದರು. ಇಸ್ರೇಲ್ ತಂತ್ರಜ್ಞಾನ ಬಳಸಿಕೊಂಡು ಹೈನುಗಾರಿಕೆಯಲ್ಲಿ ತಾವು ಅಭಿವೃದ್ಧಿ ಹೊಂದಿದ ಯಶೋಗಾಥೆಯನ್ನು ಹಂಚಿಕೊಂಡು ನೆರೆದಿದ್ದವರಿಗೆ ಪ್ರೇರಣೆಯಾದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಗತಿ ಪರ ರೈತ ಮಹಿಳೆ ಶ್ರೀಮತಿ ಕೆ. ಹೇಮಾ ಅನಂತ್ ಅವರು ಮಾತನಾಡುತ್ತಾ, ಕೃಷಿ ಭೂಮಿ ಉಳಿಸುವ ಕಾರ್ಯವಾಗಬೇಕು, ರಾಸಾಯನಿಕ ಗೊಬ್ಬರವನ್ನು ದೂರವಿಟ್ಟು ಸಾವಯುವ ಕೃಷಿಗೆ ಒತ್ತು ನೀಡಬೇಕೆಂದು ತಿಳಿಸಿದರು.ತಾವು ರೈತ ಮಹಿಳೆಯಾಗುವಲ್ಲಿ ಕುಟುಂಬದ ಸಹಕಾರ ಮತ್ತು ತೆಗೆದುಕೊಂಡ ದಿಟ್ಟ ಹೆಜ್ಜೆಗಳು ಹಾಗೂ ನಿರ್ಧಾರಗಳ ಬಗೆಯನ್ನು ಎಲ್ಲರೊಂದಿಗೆ ಹಂಚಿಕೊಂಡರು.ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ಮಾತನಾಡುತ್ತಾ ನಮ್ಮ ಶಾಲೆಯಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ವಿಜಯ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿರುವ ಕೃಷಿ ದಾರ್ಶನಿಕರು ನೀಡಿದ ವಿಚಾರಗಳನ್ನು ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರುಶಾಲೆಯ ರೈತ ಪೋಷಕರಾದ ಬಸವರಾಜ್ ಅವರು ಮಾತನಾಡುತ್ತಾ ಲಾಲ್ ಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯದಂತೆ ಸೈನಿಕರು ದೇಶದ ಭದ್ರತೆಗಾಗಿ ಗಡಿಯಲ್ಲಿ ಕೆಲಸ ನಿರ್ವಹಿಸಿದರೆ ರೈತರು ದೇಶದ ಅಭಿವೃದ್ಧಿಗಾಗಿ ಸದಾ ಭೂತಾಯಿಯ ಮಡಿಲಲ್ಲಿ ದುಡಿಯುತ್ತಿರುತ್ತಾರೆ. ಶೂನ್ಯ ಕೃಷಿ ಪದ್ಧತಿಯಲ್ಲಿ ತಾವು ಅಭಿವೃದ್ದಿ ಪಡಿಸಿದ ಕೃಷಿ ತಂತ್ರಜ್ಞಾನದ ಅನುಭವಗಳನ್ನು ಹಂಚಿಕೊಂಡರು. ಮೂರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸುಮಾರು 40ಕ್ಕೂ ಹೆಚ್ಚಿನ ರೈತಾಪಿ ವರ್ಗದ ಪೋಷಕರು ಕಾರ್ಯಕ್ರಮದ ಕೇಂದ್ರಬಿಂದುಗಳಾಗಿದ್ದರು.ಸಂಪೂರ್ಣ ಕಾರ್ಯಕ್ರಮವನ್ನು ಮೂರನೇ ತರಗತಿಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ವೈವಿಧ್ಯಮಯವಾಗಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಕೆ.ಹೇಮಅನಂತ್ ರವರು ಪೋಷಕರಿಗೆ ತಾವೇ ಬೆಳೆದ ಲಕ್ಷ್ಮಣ -ಫಲಸಸಿಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೈ.ಎನ್. ಸುಬ್ಬುಸ್ವಾಮಿ, ಪ್ರಾಂಶುಪಾಲ ನಂದೀಶ ಕೆ,ಎಸ್, ಶಾಲಾ ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.