ಅರಕಲುಗೂಡಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಪೋಕ್ಸೊ ಕಾಯ್ದೆ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಕಲಗೂಡು
ಮಕ್ಕಳ ಹಕ್ಕು ರಕ್ಷಣೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು ಕಾಯ್ದೆಗಳನ್ನು ರೂಪಿಸಲಾಗಿದ್ದು ಈ ಕುರಿತು ಮಕ್ಕಳು ಮತ್ತು ಪೋಷಕರು ಅರಿವು ಹೊಂದಬೇಕು ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ.ನಾಗೇಶ ಮೂರ್ತಿ ತಿಳಿಸಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಪೋಕ್ಸೊ ಕಾಯ್ದೆ ಅರಿವು ಮೂಡಿಸುವ ತೆರೆದಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಪೋಕ್ಸೊ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಅದನ್ನು ಮುಚ್ಚಿಡದೆ ದೂರು ದಾಖಲಿಸಬೇಕು. ಈ ಕುರಿತು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆರೋಪ ಸಾಬೀತಾದಲ್ಲಿ ಕಠಿಣ ಶಿಕ್ಷೆಯೂ ಇದೆ. ಶಾಲೆ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ದೌರ್ಜನ್ಯ ನಡೆದಾಗ ದೂರು ನೀಡಲು ದೂರು ಪೆಟ್ಟಿಗೆಗಳನ್ನು ಸಹ ಇಡಲಾಗಿರುತ್ತದೆ. ಬಂದ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಮಿತಿ ರಚಿಸಲಾಗಿರುತ್ತದೆ ಎಂದರು.
ಪೋಕ್ಸೊ ಕಾಯ್ದೆ ಮಾಹಿತಿ ನೀಡಿದ ವಕೀಲ ಶಂಕರಯ್ಯ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ದೂರು ನೀಡದೆ ಮುಚ್ಚಿಡುವುದರಿಂದ ಇಂತಹ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತದೆ. ಪೋಷಕರು ಹಿಂಜರಿಕೆ ಬಿಟ್ಟು ದೂರು ದಾಖಲಿಸಬೇಕು. ಪೋಕ್ಸೊ ಕಾಯ್ದೆಯಡಿ ದಾಖಲಾಗುವ ದೂರುಗಳ ವಿಚಾರಣೆಗೆ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತ್ಯೇಕ ವಿಭಾಗವಿದ್ದು, ಇಲ್ಲಿ ಮಗು ಮತ್ತು ಪೋಷಕರಿಗೆ ಮುಜುಗರವಾಗದಂತೆ ವಿಚಾರಣೆ ನಡೆಸುವ ವ್ಯವಸ್ಥೆ ಇದೆ. ಈ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿ ಕೊಳ್ಳಬೇಕೆಂದರು.ಸಿವಿಲ್ ನ್ಯಾಯಾಧೀಶೆ ಪ್ರೀತಿ ಎಲ್ ಮಳವಳ್ಳಿ, ಸರ್ಕಾರಿ ವಕೀಲ ಸಿ.ಎಸ್.ಸತೀಶ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ವಿಜಯಕುಮಾರ್, ಕಾರ್ಯದರ್ಶಿ ಎಚ್.ಡಿ.ರವಿಚಂದ್ರ, ಖಜಾಂಚಿ ಎಸ್.ಎ.ಕೃಷ್ಣ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಸಿ.ಆರ್.ಶರ್ಮಿಳಾ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.