ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ

KannadaprabhaNewsNetwork |  
Published : Jan 11, 2025, 12:49 AM IST
10ಎಚ್ಎಸ್ಎನ್9 : ನುಗ್ಗೇಹಳ್ಳಿ  ಹೋಬಳಿಯ  ತಾವರೇಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಎಸ್ ಡಿ ಎಂ ಸಿ ಹಾಗೂ ಹಳೆಯ ವಿದ್ಯಾರ್ಥಿಗಳ ವತಿಯಿಂದ  ಆಯೋಜಿಸಿದ್ದ  ಗುರುವಂದನ  ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಹಾಗೂ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಶಿಕ್ಷಕನ ಪಾತ್ರ ಬಹು ಮುಖ್ಯವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ. ಎ.ಗೋಪಾಲಸ್ವಾಮಿ ಅಭಿಪ್ರಾಯಪಟ್ಟರು. ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಾಲೆಗಳ ಉನ್ನತಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಜೀವ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಹಾಗೂ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಶಿಕ್ಷಕನ ಪಾತ್ರ ಬಹು ಮುಖ್ಯವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ. ಎ.ಗೋಪಾಲಸ್ವಾಮಿ ಅಭಿಪ್ರಾಯಪಟ್ಟರು.

ಹೋಬಳಿಯ ತಾವರೇಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಎಸ್‌ಡಿಎಂಸಿ ಹಾಗೂ ಗ್ರಾಮದ ವತಿಯಿಂದ ಜೆ ಸಿ ಶ್ರೀನಿವಾಸ್ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಾಲೆಗಳ ಉನ್ನತಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಜೀವ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳ ಜೊತೆಗೆ ಬಿಸಿಊಟ ಕ್ಷೀರ ಭಾಗ್ಯ, ಸಮವಸ್ತ್ರ ಹಾಗೂ ಶೂ ಕೂಡ ನೀಡಲಾಗುತ್ತಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಉತ್ತಮ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.

ಗ್ರಾಮದ ಹಳೆ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಆಡಳಿತ ಮಂಡಳಿ ಶಾಲೆಯಿಂದ ಗ್ರಾಮದ ಶಾಲೆಯಲ್ಲಿ ಸುದೀರ್ಘ 28 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಮುಖ್ಯ ಶಿಕ್ಷಕ ಜೆ ಸಿ ಶ್ರೀನಿವಾಸ್ ಅವರಿಗೆ ಅದ್ದೂರಿಯಾಗಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಪ್ರಶಂಸೆ ಪಡುವ ವಿಚಾರವಾಗಿದೆ ಎಂದರು. ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹಾಗೂ ವರ್ಗಾವಣೆಗೊಂಡಿರುವ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಟಿ. ಕೆ. ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸುಗುಣ ಮಧು, ಜಯಕುಮಾರ್, ನಿವೃತ್ತ ಶಿಕ್ಷಕ ಜೆಸಿ ಶ್ರೀನಿವಾಸ್, ಪ್ರಮುಖರಾದ ಪರಮೇಶ್, ಬಸವರಾಜ್, ಬಿರಾದಾರ್, ಜಾಕಿರ ಬಾನು, ಸಣ್ಣಪ್ಪ, ಅಣ್ಣಪ್ಪ, ನಾಗೇಶ್, ನಂದೀಶ್ ಟಿಎಸ್, ರಘು ಟಿ.ಕೆ., ಮಂಜುನಾಥ್ ಟಿಪಿ, ಯುವ ವೀರಶೈವ ಮುಖಂಡ ಮಂಜುನಾಥ್, ಸೇರಿದಂತೆ ಎಸ್‌ಡಿಎಂಸಿ ಸರ್ವ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಗ್ರಾಮಸ್ಥರು ಹಾಜರಿದ್ದರು.

PREV