ಕನ್ನಡಪ್ರಭ ವಾರ್ತೆ ಮಂಗಳೂರು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತಗಳಿಂದ ನಡೆದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಗೆಲವು ಪಡೆದಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಈ ಸ್ಥಾನಕ್ಕೆ ಅಕ್ಟೋಬರ್ 21ರಂದು ಚುನಾವಣೆ ನಡೆದಿತ್ತು.ಮಂಗಳೂರಿನ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತ ಎಣಿಕೆ ನಡೆಯಿತು. 12 ಟೇಬಲ್‌ಗಳಲ್ಲಿ ಮತಪತ್ರಗಳನ್ನು ವಿಂಗಡಿಸಿ ಎಣಿಕೆ ನಡೆಸಲಾಯಿತು. ಪ್ರತಿ ಟೇಬಲ್‌ನಲ್ಲೂ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತಗಳು ಲಭಿಸಿತ್ತು. ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ 3,655, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಗೆ 1,958, ಎಸ್‌ಡಿಪಿಐನ ಅನ್ವರ್ ಸಾದತ್ ಬಜತ್ತೂರು 195 ಹಾಗೂ ಪಕ್ಷೇತರ ದಿನಕರ್ ಉಳ್ಳಾಲ್‌ಗೆ 9 ಮತಗಳು ದೊರಕಿತು. 90 ಮತಗಳು ಅಸಿಂಧುವಾಗಿದೆ. ಬಿಜೆಪಿಯ ಕಿಶೋರ್ ಕುಮಾರ್ ಅವರು 1,697 ಮತಗಳ ಅಂತರದಿಂದ ಗೆಲುವು ಪಡೆದರು.
ಈ ಬಾರಿ ಒಟ್ಟು 6,032 ಸ್ಥಳೀಯಾಡಳಿತ ಮತದಾರರ ಪೈಕಿ 5,907 ಮತ ಚಲಾವಣೆಯಾಗಿವೆ. 5,817 ಅಧಿಕೃತ ಮತಗಳಿದ್ದು, 90 ಅಸಿಂಧು ಮತಗಳು ಇತ್ತು.ಈ ಬಾರಿ ಗೆಲವಿನ ಅಂತರ ಜಾಸ್ತಿ: 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 3,672 ಮತ ಪಡೆದರೆ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ 2,079 ಮತ ಗಳಿಸಿದ್ದರು. ಎಸ್‌ಡಿಪಿಐನ ಶಫಿ ಬೆಳ್ಳಾರೆ 204 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಅವರ ಗೆಲವಿನ ಅಂತರ 1,593 ಆಗಿತ್ತು. ಈ ಬಾರಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್‌ರ ಗೆಲುವಿನ ಅಂತರ 1,697 ಆಗಿದೆ. ಆದರೆ ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ ಮತ(3,672)ಗಳು, ಈ ಬಾರಿಯ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ ಮತ(3,655)ಗಳನ್ನು ಹೋಲಿಸಿದರೆ, ಈ ಬಾರಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್‌ಗೆ ಕೋಟ ಶ್ರೀನಿವಾಸ ಪೂಜಾರಿಗಿಂತ 17 ಮತ ಕಡಿಮೆ ಬಿದ್ದಂತಾಗಿದೆ.
ಕಾಂಗ್ರೆಸ್‌ಗೂ ಕಡಿಮೆ ಮತ: ಕಾಂಗ್ರೆಸ್‌ನಲ್ಲಿ ಕಳೆದ ಬಾರಿ ಮಂಜುನಾಥ ಭಂಡಾರಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ 2,079 ಮತ ಸಿಕ್ಕಿತ್ತು. ಈ ಬಾರಿ ಕಾಂಗ್ರೆಸ್‌ನ ರಾಜು ಪೂಜಾರಿಗೆ 1,958 ಮತ ಲಭಿಸಿದೆ. ಅಂದರೆ ರಾಜು ಪೂಜಾರಿಗೆ 121 ಮತ ಕಡಿಮೆ ಬಿದ್ದಿದೆ. ಕಳೆದ ಬಾರಿ ಎಸ್‌ಡಿಪಿಐಗೆ 204 ಮತ ಸಿಕ್ಕಿದರೆ, ಈ ಬಾರಿ ಎಸ್‌ಡಿಪಿಐ ಅಭ್ಯರ್ಥಿಗೆ 195 ಮತ ಲಭಿಸಿದೆ. ಕಳೆದ ಬಾರಿಗಿಂತ ಈ ಬಾರಿ 9 ಮತ ಕಡಿಮೆಯಾಗಿದೆ. ಕಳೆದ ಬಾರಿ 56 ಮತ ಅಸಿಂಧು ಇದ್ದರೆ, ಈ ಬಾರಿ ಅಸಿಂಧು ಮತ 90ಕ್ಕೆ ಏರಿಕೆ ಆಗಿದೆ. ಮತದಾನ ಬಗ್ಗೆ ಸೂಕ್ತ ತಿಳಿವಳಿಕೆ ನೀಡಿದ ಹೊರತೂ ಅಸಿಂಧು ಮತಗಳಲ್ಲೂ ಹೆಚ್ಚಳ ಆಗಿದೆ.ಈ ಬಾರಿಯೂ ಜಿ.ಪಂ., ತಾ.ಪಂ. ಮತ ಖೋತಾ: ಕಳೆದ ಪರಿಷತ್ ಚುನಾವಣೆಯಲ್ಲಿ ನಾಮನಿರ್ದೇಶಿತ 150 ಮಂದಿ ಸದಸ್ಯರ ಮತಗಳು ಪರಿಗಣನೆಯಾಗಿತ್ತು. ಈ ಬಾರಿ ಸ್ಥಳೀಯಾಡಳಿತಗಳಲ್ಲಿ ನಾಮನಿರ್ದೇಶಿತ ಸದಸ್ಯರು ಇದ್ದರೂ ಅವರಿಗೆ ಮತದಾನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಒಟ್ಟು ಮತದಾರರ ಪೈಕಿ ನಾಮನಿರ್ದೇಶಿತ ಮತದಾರರ ಸಂಖ್ಯೆಯನ್ನು ಪರಿಗಣಿಸಿಲ್ಲ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಯದ ಕಾರಣ ಅವರ ಮತ ಖೋತಾ ಆಗಿತ್ತು.
ಫಲಿತಾಂಶ ವಿವರಕಿಶೋರ್ ಕುಮಾರ್(ಬಿಜೆಪಿ)-3,655 ಮತ
ರಾಜು ಪೂಜಾರಿ(ಕಾಂಗ್ರೆಸ್)-1,958 ಮತಅನ್ವರ್ ಸಾದತ್(ಎಸ್‌ಡಿಪಿಐ)- 195 ಮತ
ದಿನಕರ್ ಉಳ್ಳಾಲ್(ಪಕ್ಷೇತರ)- 9 ಮತಕಿಶೋರ್ ಕುಮಾರ್ ಗೆಲುವಿನ ಅಂತರ-1,697 ಮತ
ಒಟ್ಟು ಚಲಾವಣೆಯಾದ ಮತ- 5,907ಅಧಿಕೃತ ಮತ-5,817
ಅಸಿಂಧು ಮತ- 90ಮತ ಎಣಿಕೆ ವೇಳೆ ಅಭ್ಯರ್ಥಿಗಳು ಗೈರು
ಮತ ಎಣಿಕೆ ವೇಳೆ ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಹಾಗೂ ಪಕ್ಷೇತರ ಈ ಎಲ್ಲ ಅಭ್ಯರ್ಥಿಗಳು ಗೈರಾಗಿದ್ದರು. ಮತ ಎಣಿಕೆ ವೇಳೆ ಅಭ್ಯರ್ಥಿಗಳು ಇರಲೇ ಬೇಕು ಎಂದೇನಿಲ್ಲ. ಆದರೂ ಸೋಲು-ಗೆಲವಿನ ಲೆಕ್ಕಾಚಾರಕ್ಕಾದರೂ ಇರುತ್ತಾರೆ. ಇದು ಉಪ ಚುನಾವಣೆಯಾದ್ದರಿಂದ ಅಭ್ಯರ್ಥಿಗಳೂ ಅಷ್ಟು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಬಿಜೆಪಿ ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ಪಡೆದಿರುವುದು ಗೊತ್ತಾಗುತ್ತಿದ್ದಂತೆ ಅಭ್ಯರ್ಥಿ ಕಿಶೋರ್ ಕುಮಾರ್ ಅವರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇವರಿಗೆ ಪರಿಷತ್ತಿಗೆ ಆಯ್ಕೆಯಾದ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಪ್ರಮಾಣ ಪತ್ರ ಹಸ್ತಾಂತರಿಸಿದರು. ಈ ಸಂದರ್ಭ ಕೇಂದ್ರ ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಇದ್ದರು.ಬಿಜೆಪಿ ವಿಜಯೋತ್ಸವ ಮೆರವಣಿಗೆ
ಅಭ್ಯರ್ಥಿಯ ಗೆಲುವಿನ ಹುರುಪಿನಲ್ಲಿ ಬಿಜೆಪಿ ಬೆಂಬಲಿಗರು ಮತ ಎಣಿಕೆ ಕೇಂದ್ರದ ಹೊರಗೆ ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು. ಕೊಡಿಯಾಲಬೈಲ್‌ನ ಪಕ್ಷದ ಕಚೇರಿ ವರೆಗೆ ಮೆರವಣಿಗೆ ನಡೆಸಿ ಅಲ್ಲಿ ವೇದಿಕೆಯಲ್ಲಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಅವಿಭಜಿತ ದ.ಕ. ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ವಿಕಾಸ್ ಪಿ., ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಇದ್ದರು. ಈ ವೇಳೆ ಪಟಾಕಿ ಸಿಡಿಸಿ, ಜೈಕಾರ ಘೋಷಣೆ ಕೂಗಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಬಳಿಕ ಮೆರವಣಿಗೆಯಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆಯ್ಕೆ ಪತ್ರ ಸ್ವೀಕರಿಸಿದರು.
ಗೆಲವು ಕಾರ್ಯಕರ್ತರಿಗೆ ಅರ್ಪಣೆ: ಕಿಶೋರ್ ಕುಮಾರ್
ಪರಿಷತ್ ಚುನಾವಣೆಯಲ್ಲಿ ನನ್ನ ಗೆಲವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ವಿಧಾನ ಪರಿಷತ್ ನೂತನ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಅವರು ಸುದ್ದಿಗಾರರಲ್ಲಿ ಮಾತನಾಡಿ, ಎರಡು ಜಿಲ್ಲೆಗಳ ಸಂಸದರು, ಬಿಜೆಪಿ ಶಾಸಕರು, ಸ್ಥಳೀಯಾಡಳಿತಗಳ ಬೆಂಬಲಿತರು, ಪಕ್ಷದ ಮುಖಂಡರು ತಂಡವಾಗಿ ಕೆಲಸ ಮಾಡಿದ ಕಾರಣ ನನ್ನ ಗೆಲವು ಸಾಧ್ಯವಾಗಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲುವು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಂತಾಗಿದೆ. ನಾನು ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸಿದ್ದೇನೆ. ಇನ್ನು ಮುಂದೆ ಪಂಚಾಯ್ತಿರಾಜ್ ಬಲವರ್ಧನೆಗೆ ಕೆಲಸ ಮಾಡುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ ಎಂದರು.