ಮಾಲೂರು: ಬಸ್ ನಿಲ್ದಾಣದ ಬಳಿಯ ಉದ್ಯಾನವನದಲ್ಲಿ ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ತೆರವುಗೊಳಿಸಬೇಕಾದರೆ ಅದರ ಭಾರೀ ಗಾತ್ರದ ಪೈಪೊಂದು ಬಿದ್ದು ಉದ್ಯಾನವನದಲ್ಲಿದ್ದ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಹಾನಿ ಉಂಟಾಗಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ದಿಢೀರ್ ಆಗಿ ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಬೃಹತ್ ಗಾತ್ರದ ಟ್ಯಾಂಕ್ ತೆರವುಗೊಳಿಸಬೇಕಾದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿಗಳು ಕ್ಷಮೆ ಕೇಳಬೇಕು ಹಾಗೂ ಈ ಕೂಡಲೇ ಪ್ರತಿಮೆಯನ್ನು ಬದಲಾಯಿಸಿ, ನೂತನ ಪ್ರತಿಮೆ ನಿರ್ಮಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಗುತಿಗೆದಾರರ ನಿರ್ಲಕ್ಷ್ಯದಿಂದ ಈ ಪ್ರಮಾದ ನಡೆದಿದೆ. ಈ ಬಗ್ಗೆ ಕ್ಷಮೆಯಾಚಿಸುತ್ತೇನೆ, ಪ್ರತಿಮೆ ದುರಸ್ತಿ ಬಗ್ಗೆ ಸಂಪೂರ್ಣ ಜವಾಬ್ದಾರಿ ನನ್ನದಾಗಿದೆ ಎಂದು ಭರವಸೆ ನೀಡಿದ ಬಳಿಕಕರವೇ ಕಾರ್ಯಕರ್ತರು ಪ್ರತಿಭಟನೆ ನಿಲ್ಲಿಸಿದರು.