ಕನ್ನಡಪ್ರಭ ವಾರ್ತೆ ದಾವಣಗೆರೆ
ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಧ್ಯಾಹ್ನ 3ರಿಂದ ಕರೆದಿದ್ದ 2024-25ನೇ ಸಾಲಿನ ಬಜೆಟ್ ಸಭೆ ಮುಂದೂಡುವಂತೆ ಪಟ್ಟು ಹಿಡಿದು ವಿಪಕ್ಷ ಬಿಜೆಪಿ ಸದಸ್ಯರು ಸಭಾಂಗಣದಲ್ಲೇ ಧರಣಿ, ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಎಚ್.ಬಿ.ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಬಜೆಟ್ ಸಭೆ ಕರೆಯಲಾಗಿತ್ತು. ಸಾಮಾನ್ಯವಾಗಿ ನಗರಸಭೆ ಇದ್ದಾಗಿನಿಂದ ಕಳೆದ ಸಾಲಿನವರೆಗೂ ಬೆಳಿಗ್ಗೆ 11ರ ಆಸುಪಾಸಿನಲ್ಲಿ ಆರಂಭವಾಗುತ್ತಿದ್ದ ಬಜೆಟ್ ಸಭೆಯನ್ನು ಈ ಬಾರಿ ಮಧ್ಯಾಹ್ನ 3 ಗಂಟೆಗೆ ಕರೆದಿದ್ದು ವಿಪಕ್ಷದವರಿಗಷ್ಟೇ ಅಲ್ಲ, ಆಡಳಿತ ಪಕ್ಷದವರ ಕೆಂಗಣ್ಣಿಗೂ ಗುರಿಯಾಯಿತು.
ಬಜೆಟ್ ಸಭೆ ಆರಂಭವಾಗುತ್ತಿದ್ದಂತೆ ಉಪ ಮೇಯರ್ ಯಶೋಧಾ ಯೋಗೇಶ ವೇದಿಕೆಗೆ ಹೋಗಲಿಲ್ಲ. ತಾವು ಕೇಳಿದ್ದಂತೆ ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ. ಮೇಯರ್ ನೀಡಿದ್ದ ಭರವಸೆಯಂತೆಯೂ ಅನುದಾನ ಕೊಡದೇ ಅಗೌರವ ತೋರಲಾಗುತ್ತಿದೆ. ಹಾಗಾಗಿ ನಾನು ಸದಸ್ಯರ ಜೊತೆ ಕೂರುವುದಾಗಿ ಪಟ್ಟು ಹಿಡಿದರು.ಉಪ ಮೇಯರ್ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಂತೆಯೇ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ಬಜೆಟ್ ಸೇರಿ ಯಾವುದೇ ಸಭೆ ಬಗ್ಗೆ ಸದಸ್ಯರಿಗೆ 7 ದಿನಗಳ ಮೊದಲು ಸಭಾ ನೋಟಿಸ್ ನೀಡಬೇಕು. ಆದರೆ, ವಿಪಕ್ಷ ನಾಯಕನಾದ ತಮಗೇ ಫೆ.21ರಂದು ನೋಟಿಸ್ ನೀಡಲಾಗಿದೆ. ಏಳು ದಿನಗಳ ಅಂತರವನ್ನೂ ಪಾಲನೆ ಮಾಡಿಲ್ಲ? ಪಾಲಿಕೆ ಸದಸ್ಯರಿಗೆ ಗೌರವವೇ ಇಲ್ಲವೇ? ಬಜೆಟ್ ಸಭೆ ಮುಂದೂಡಿ ಎಂದು ತಾಕೀತು ಮಾಡಿದರು. ಅದಕ್ಕೆ ವಿಪಕ್ಷ ಸದಸ್ಯರಾದ ಆರ್.ಶಿವಾನಂದ, ಕೆ.ಎಂ.ವೀರೇಶ ಇತರರೂ ಧ್ವನಿಗೂಡಿಸಿದರು.
ನೀವು ರಾಜೀನಾಮೆ ನೀಡುತ್ತೀರಾ? :ಅಧಿಕಾರಿಗಳ ವಿರುದ್ಧ ಆಕ್ರೋಶ ಮುಂದುವರಿಸಿದ ಪ್ರಸನ್ನಕುಮಾರ, ಪಾಲಿಕೆ ಪರಿಷತ್ ಕಾರ್ಯದರ್ಶಿ ಸದಸ್ಯರಿಗೆ ಅಗೌರವ ತೋರಿಸುತ್ತಿದ್ದಾದರೆ. ನಮ್ಮ ಮನೆಗೆ ಸಿಬ್ಬಂದಿ ಬಂದಿದ್ದರು, ಮನೆಯಲ್ಲಿ ಯಾರೂ ಇರಲಿಲ್ಲವೆಂಬ ಸುಳ್ಳನ್ನು ಅಧಿಕಾರಿ ಸಭೆಯಲ್ಲಿ ಹೇಳುತ್ತಿದ್ದಾರೆ. ನನ್ನ ಮನೆಯಲ್ಲಿ ಸಿಸಿಟಿವಿ ದೃಶ್ಯಗಳಿವೆ. ನಾನು ಮನೆಯಲ್ಲೇ ಇದ್ದೇನೆಂಬುದು ತೋರಿಸುತ್ತೇನೆ. ನಾನು ಸುಳ್ಳು ಹೇಳಿದ್ದೇನೆನ್ನುವುದಾದರೆ ನಾಳೆಯೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ ನೀವು ರಾಜೀನಾಮೆ ನೀಡುತ್ತೀರಾ ಎಂಬುದಾಗಿ ಪರಿಷತ್ ಕಾರ್ಯದರ್ಶಿಗೆ ತರಾಟೆಗೆ ತೆಗೆದುಕೊಂಡರು.
ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಧ್ಯಾಹ್ನ 3 ಗಂಟೆಗೆ ಬಜೆಟ್ ಸಭೆ ಕರೆದಿದ್ದ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ವಿಪಕ್ಷ ಮತ್ತು ಆಡಳಿತ ಪಕ್ಷದವರ ಮಧ್ಯೆ ಸಾಕಷ್ಟು ಚರ್ಚೆ ನಡೆಯಿತು. ಕಡೆಗೆ ವಿಪಕ್ಷ ಸದಸ್ಯರು ಮೇಯರ್ ಆಸೀನರಾಗಿದ್ದ ವೇದಿಕೆ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಕುಳಿತರು. ಬಜೆಟ್ ಸಭೆ ಮುಂದೂಡಬೇಕು, ಕಾಟಾಚಾರದ ಸಭೆ ನಡೆಸುತ್ತಿರುವ ಆಡಳಿತ ಪಕ್ಷ ಕಾಂಗ್ರೆಸ್‌ನ ವಿರುದ್ಧ ವಿಪಕ್ಷ ಸದಸ್ಯರು ಧಿಕ್ಕಾರ ಕೂಗಿದರು. ಅಂತಿಮವಾಗಿ ವಿಪಕ್ಷ ಬಿಜೆಪಿ ಪಟ್ಟಿಗೆ ಮಣಿದ ಆಡಳಿತ ಪಕ್ಷ ಕಾಂಗ್ರೆಸ್ಸಿನವರು ಬಜೆಟ್ ಸಭೆಯನ್ನು ಮುಂದೂಡುವಂತೆ ಪಟ್ಟು ಹಿಡಿದರು.ಇಂದು ಬೆಳಿಗ್ಗೆ 11ಕ್ಕೆ ಬಜೆಟ್ ಸಭೆ:
ಅಂತಿಮವಾಗಿ ಮೇಯರ್ ಎಚ್.ಬಿ.ವಿನಾಯಕ ಪೈಲ್ವಾನ್ ಬಜೆಟ್ ಸಭೆ 30 ನಿಮಿಷ ಮುಂದೂಡಿದರು. ನಂತರ ಆಡಳಿತ ಮತ್ತು ವಿಪಕ್ಷ ಸದಸ್ಯರು ತಮ್ಮ ತಮ್ಮ ಕೊಠಡಿಗಳಲ್ಲಿ ಸಭೆ ಮಾಡಿದರು. ನಂತರ ಮೇಯರ್ ಬಿ.ಎಚ್.ವಿನಾಯಕ, ಬಜೆಟ್ ಸಭೆಯನ್ನು ಫೆ.27ರಂದು ಬೆಳಿಗ್ಗೆ 11 ಗಂಟೆಗೆ ಮುಂದೂಡಿರುವುದಾಗಿ ಘೋಷಿಸಿದರು. ಅಧಿಕಾರಿಗಳು ಮಾಡಿದ ಗೊಂದಲದಿಂದಾಗಿ ಇಷ್ಟೆಲ್ಲಾ ಆಗಿದೆ. ಮಂಗಳವಾರ ಬೆಳಿಗ್ಗೆ 11ಕ್ಕೆ ಬಜೆಟ್ ಸಭೆ ನಡೆಯಲಿದೆಯೆಂದು ಘೋಷಿಸಿ ಸಭೆ ಮುಂದೂಡಿದರು.ಆಯುಕ್ತರಾದ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯಕುಮಾರ, ಸದಸ್ಯರಾದ ಕಾಂಗ್ರೆಸ್ಸಿನ ಎ.ನಾಗರಾಜ, ಜಿ.ಎಸ್.ಮಂಜುನಾಥ ಗಡಿಗುಡಾಳ, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್.ಟಿ.ವೀರೇಶ , ಉಪ ಮೇಯರ್ ಯಶೋಧಾ ಯೋಗೇಶ, ಉಭಯ ಪಕ್ಷಗಳ ಸದಸ್ಯರು, ಅಧಿಕಾರಿ, ಸಿಬ್ಬಂದಿ ಇದ್ದರು. ಪಾಲಿಕೆ ಇತಿಹಾಸದಲ್ಲಿ ಯಾರೂ ಮಧ್ಯಾಹ್ನ ಬಜೆಟ್ ಮಂಡನೆ ಸಭೆ ನಡೆಸಿಲ್ಲ. ನಾವು ಅದಕ್ಕೆ ಅವಕಾಶವನ್ನೂ ನೀಡಲ್ಲ. ಬಜೆಟ್ ಮಂಡನೆ ಸಭೆಗೊಂದು ಗೌರವವಿದೆ. ಮಧ್ಯಾಹ್ನ 3ಕ್ಕೆ ಕರೆದರೆ ಅಧಿಕಾರಿಗಳ ಬೇಜಾವಾಬ್ದಾರಿ ತೋರಿಸುತ್ತದೆ. ಇದಕ್ಕೆಲ್ಲಾ ನಾವು ಅವಕಾಶವನ್ನೂ ನೀಡಲ್ಲ. ಯಾವುದೇ ಸಭೆ ನೋಟಿಸ್ 7 ದಿನ ಮುಂಚೆ ನೀಡಬೇಕು. ಆದರೆ, ನೋಟಿಸ್ ನೀಡಿ 5 ದಿನ ಸಹ ಕಳೆದಿಲ್ಲ. ದಾವಣಗೆರೆ ಪಾಲಿಕೆಯಲ್ಲಿ ಸದಸ್ಯರಿಗೆ ಬೆಲೆ, ಗೌರವ ಇಲ್ಲವೇ? ಬಜೆಟ್ ಸಭೆಯನ್ನು ಫೆ.27ಕ್ಕೆ ಮುಂದೂಡಬೇಕು. ಕೆ.ಪ್ರಸನ್ನಕುಮಾರ, ಪಾಲಿಕೆ ವಿಪಕ್ಷ ನಾಯಕ.
---ಪ್ರತಿ ಬಜೆಟ್ ಸಭೆ ಬೆಳಿಗ್ಗೆ 11ಕ್ಕೆ ಆರಂಭವಾಗುತ್ತಿದ್ದವು. ಇದು ಈ ವರೆಗೆ ಬಂದಿದ್ದ ಸಂಪ್ರದಾಯ ಚರ್ಚಿಸಲು ಸಾಕಷ್ಟು ವಿಷಯ ಇದ್ದವು. ಆದರೆ, ಈ ವರ್ಷ ನೀವು ಸಮಯ ನಿಗದಿಪಡಿಸಿದ್ದೇ ಸರಿ ಇಲ್ಲ. ಮೇಯರ್ ಫೆ.19ಕ್ಕೆ ಕಡತಕ್ಕೆ ಸಹಿ ಮಾಡಿದ್ದು, 21ಕ್ಕೆ ನೋಟಿಸ್ ತಲುಪಿಸಿದ್ದಾರೆ. ನೋಟಿಸ್ ನೀಡಿ 7 ದಿನ ಪೂರ್ಣವಾದ ನಂತರ ಸಭೆ ನಡೆಯಬೇಕು. ಇದು ನಿಯಮದಲ್ಲೇ ಸ್ಪಷ್ಟವಾಗಿದೆ. ಅಧಿಕಾರಿಗಳಾದ ನಿಮಗೆ ಇದ್ಯಾವುದರ ಅರಿವಿಲ್ಲವೇ?
ಡಿ.ಎಸ್.ಉಮಾ ಪ್ರಕಾಶ, ವಿಪಕ್ಷ ಸದಸ್ಯೆ, ಮಾಜಿ ಮೇಯರ್ .......ಸಭೆ ನೋಟಿಸ್ ನೀಡಿಕೆಯಲ್ಲಿ ಲೋಪವಾಗಿದ್ದರೆ ಸದಸ್ಯರಿಗೆ ಅಗೌರವ ತೋರಿದಂತೆ. ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವನ್ನು ಅಧಿಕಾರಿಗಳು ಪಾಲಿಸಬೇಕು. ನೋಟಿಸ್ ನೀಡಲು 3 ದಿನ ಸಮಯವನ್ನು ಪರಿಷತ್ ಕಾರ್ಯದರ್ಶಿ ತೆಗೆದುಕೊಂಡರೆ ಹೇಗೆ?
ಎ.ನಾಗರಾಜ, ಆಡಳಿತ ಪಕ್ಷದ ಸದಸ್ಯ.