- ಚೋರ ಗುರುವನ್ನು ಮೆಚ್ಚಿಸಲು ರಾಜನಹಳ್ಳಿ ಶಿವಕುಮಾರ, ಯಶವಂತ ರಾವ್ ಮಿಥ್ಯಾರೋಪ: ದೂಡಾ ಅಧ್ಯಕ್ಷ ತಿರುಗೇಟು - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಪಾಲಿಕೆ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆ ಪಾರ್ಕ್ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿದ್ದೇನೆಂದು ತಮ್ಮ ವಿರುದ್ಧ ಬಿಜೆಪಿಯ ರಾಜನಹಳ್ಳಿ ಶಿವಕುಮಾರ ಸುಳ್ಳು ಆರೋಪ ಮಾಡಿದ್ದಾರೆ. ತಮ್ಮ ಚೋರ ಗುರುವನ್ನು ಮೆಚ್ಚಿಸಲು ಭ್ರಮನಿರಶನರಾದ ಯಶವಂತ ರಾವ್, ರಾಜನಹಳ್ಳಿ ಶಿವಕುಮಾರ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ತಿರುಗೇಟು ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಯಾವುದೇ ಆರೋಪಗಳೂ ಇಲ್ಲ, ನಾನು ಯಾವುದೇ ಪಾರ್ಕ್ ಜಾಗವನ್ನು ಯಾರಿಗೂ ಹಂಚಿಕೆ ಮಾಡಿಲ್ಲ. ಶಾಬನೂರು ರಿ.ಸ.ನಂ.127/1ರಲ್ಲಿ ನಿರ್ಮಿಸಿದ ವಿವೇಕಾನಂದ ಬಡಾವಣೆಯಲ್ಲಿ ಪಾರ್ಕ್‌ಗೆ ಮೀಸಲಿಟ್ಟ ನಿವೇಶನವನ್ನು ನ್ಯಾಯಾಲಯ ಆದೇಶದನ್ವಯ ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿಯಮಾನುಸಾರ ಶುಲ್ಕ ಭರಿಸಿಕೊಂಡು ಉದ್ಯಾನವನ, ಬಫರ್ ಹಸ್ತಾಂತರಿಸಿಕೊಂಡು ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡಲಾಗಿದೆ ಎಂದರು.ಶಾಬನೂರು ರಿ.ಸ.ನಂ.127/1ಎಂ ಮತ್ತು ರಿ.ಸ.ನಂ.127/1ಎ 2ರ ಜಾಗವು ಪಾರ್ಕ್ ಉದ್ದೇಶಕ್ಕೆ ಕಾಯ್ದಿರಿಸಿದ ಜಾಗವಲ್ಲ ಎಂದು ಎಸ್.ಜೆ.ಜಯಪ್ರಕಾಶ, ಎಸ್.ಜೆ.ಮಂಜುನಾಥ ಪಾಲಿಕೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಪಿಆರ್‌ಎಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ದಾವಣಗೆರೆ ನ್ಯಾಯಾಲಯದಲ್ಲಿ ಎಸ್.ಜೆ.ಜಯಪ್ರಕಾಶ, ಎಸ್.ಜೆ.ಮಂಜುನಾಥ ರಾಜ್ಯ ಸರ್ಕಾರ, ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು, ಜಿಲ್ಲಾಧಿಕಾರಿ, ಮಹಾಪೌರರು, ಆಯುಕ್ತರು, ಸಹಾಯಕ ಮಹಾನಗರ ಪಾಲಿಕೆ, ದಾವಣಗೆರೆ ಇವರನ್ನು ಕಾರ್ಯಪಾಲಕ ಅಭಿಯಂತರರು. ಪ್ರತಿವಾದಿಯನ್ನಾಗಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.
ಪ್ರಕರಣ ವಿಚಾರಣೆ ನಂತರ ಏ.24ರಂದು ಪ್ರಶ್ನಿತ ಜಾಗ ಅರ್ಜಿದಾರರಿಗೆ ಸೇರಿದ್ದಾಗಿದೆ, ಪಾಲಿಕೆ ಪಾರ್ಕ್ ಜಾಗವಲ್ಲವೆಂದು ನ್ಯಾಯಾಲಯದ ಆದೇಶವಾಗಿದೆ. ಈ ಆದೇಶವಾದ ನಂತರ ಪಾಲಿಕೆ ಮೇಲ್ಮನವಿ ಸಲ್ಲಿಸಿದೆ. ಈ ಹಿನ್ನೆಲೆ ನ್ಯಾಯಾಲಯದ ಆದೇಶದ ಅನ್ವಯ ದೂಡಾದಿಂದ ನಿಯಮಾನುಸಾರ ಶುಲ್ಕ ಭರಿಸಿಕೊಂಡು ಉದ್ಯಾನವನ, ಬಫರ್ ಹಸ್ತಾಂತರಿಸಿಕೊಂಡು ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡಲಾಗಿದೆ. ಇದರ ಹೊರತು ನನ್ನ ಮತ್ತು ಅವರ ನಡುವೆ ಏನು ಇಲ್ಲ ಎಂದು ದಿನೇಶ ಶೆಟ್ಟಿ ಸ್ಪಷ್ಟಪಡಿಸಿದರು.ಕೋರ್ಟ್ ಆದೇಶ ಯಾರೂ ಉಲ್ಲಂಘಿಸಬಾರದು. ಸಂಬಂಧಿಸಿದ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿ, ಕಾನೂನು ಹೋರಾಟ ಮಾಡುತ್ತಾರೆ. ಮೇಲ್ಮನವಿ ಸಲ್ಲಿಸುವ ಅಧಿಕಾರ ನಮಗಿಲ್ಲ ಎಂಬುದನ್ನು ರಾಜನಹಳ್ಳಿ ಶಿವಕುಮಾರ ಅರಿಯಲಿ. ನ್ಯಾಯಾಲಯ ಆದೇಶದ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ಕಾನೂನು ತಜ್ಞರ ಬಳಿ ತಿಳಿದುಕೊಳ್ಳಲಿ. ಇನ್ನು ಮುಂದೆ ಇಂತಹ ದಬ್ಬಾಳಿಕೆ ಹೇಳಿಕೆ ನೀಡಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ದೂಡಾ ಸದಸ್ಯರಾದ ವಾಣಿ ಬಕ್ಕೇಶ ನ್ಯಾಮತಿ, ಮಂಜುನಾಥ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ, ಯುವ ಕಾಂಗ್ರೆಸ್ ಮುಖಂಡರಾದ ವರುಣ್ ಬೆಣ್ಣೆಹಳ್ಳಿ, ಎಸ್.ಕೆ.ಪ್ರವೀಣಕುಮಾರ ಯಾದವ್, ಮುಜಾಹಿದ್ ಇತರರು ಇದ್ದರು.- - -
(ಬಾಕ್ಸ್)* ಬಂಧಿತ ಸವಿತಾಬಾಯಿ ವಿಚಾರ ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ: ದಿನೇಶ್ - ಅಸ್ಗರ್-ಖಾಲಿದ್ ಮಧ್ಯೆಯ ಗಲಾಟೆ ಸಮಾಜದ್ದಲ್ಲ, ಹಣಕಾಸು ವಿಚಾರ: ಅಯೂಬ್ ಪೈಲ್ವಾನ್ - ಪೋಕ್ಸೋ ಕೇಸ್ ಆಗಿದ್ದರೆ ಅತ್ಯಾಚಾರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆ ಜೆಡಿಎಸ್ ಮುಖಂಡ ಟಿ.ಅಸ್ಗರ್ ಮೇಲೆ ಹಲ್ಲೆ ಪ್ರಕರಣದ ಆರೋಪಿ ಖಾಲಿದ್ ಪೈಲ್ವಾನ್, ಮಾಯಕೊಂಡ ಕ್ಷೇತ್ರದ ಸವಿತಾ ಬಾಯಿ ಮಲ್ಲೇಶ ನಾಯ್ಕ ವಿರುದ್ಧ ಪಕ್ಷದ ರಾಜ್ಯ ನಾಯಕರ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾಡಲಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಹೇಳಿದರು.ಪೊಲೀಸರಿಂದ ಬಂಧನಕ್ಕೊಳಗಾದ ಸವಿತಾ ಬಾಯಿ ಈ ಹಿಂದೆ ಮಾಯಕೊಂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಲ್ಲೆ ಆರೋಪಿ ಖಾಲಿದ್‌ಗೆ ರಕ್ಷಣೆ, ಸಹಾಯ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರವನ್ನು ಮಹಿಳಾ ಘಟಕದ ರಾಜ್ಯಾಧ್ಯಕ್ಷರು, ಪಕ್ಷದ ರಾಜ್ಯ ನಾಯಕರ ಗಮನಕ್ಕೆ ತರುವ ಕೆಲಸ ಜಿಲ್ಲಾಧ್ಯಕ್ಷರು ಮಾಡಲಿದ್ದು, ಜಿಲ್ಲಾಧ್ಯಕ್ಷರೇ ಇನ್ನು 2-3 ದಿನದಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಲಿದ್ದಾರೆ ಎಂದರು.
ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಜೆಡಿಎಸ್ ಮುಖಂಡ ಟಿ.ಅಸ್ಗರ್ ನ.10ರಂದು ಟಿಪ್ಪು ಜಯಂತಿ ವೇಳೆ ವಿದ್ಯುತ್ ಸಂಪರ್ಕ ತೆಗೆದು, ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಖಾಲಿದ್ ಇತರರು ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಅಸ್ಗರ್-ಖಾಲಿದ್ ಮಧ್ಯೆ ಹಣಕಾಸು ವಿಚಾರದ ತರಲೆ ಇತ್ತು. ಹಲ್ಲೆ ಪ್ರಕರಣದ ನಂತರ ಖಾಲಿದ್ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದರು.ಪೊಲೀಸರು ತಲೆಮರೆಸಿಕೊಂಡ ಖಾಲಿದ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಅಸ್ಗರ್-ಖಾಲಿದ್ ನಡುವಿಗೆ ಗಲಾಟೆ ವಿಚಾರ ಸಮಾಜದ ಗಲಾಟೆಯಲ್ಲ. ಅದು ವೈಯಕ್ತಿಕ ವಿಚಾರಕ್ಕೆ ಆಗಿರುವ ಘಟನೆ. 54 ವರ್ಷದ ವ್ಯಕ್ತಿ 7 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದ ಪಂಚಾಯಿತಿ ಮಾಡಿದ ಹಣದ ವಿಚಾರಕ್ಕೆ ಗಲಾಟೆಯೆಂಬುದಾಗಿ ಹೇಳುತ್ತಿದ್ದಾರೆ. ಆದರೆ ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಒಂದುವೇಳೆ ಅತ್ಯಾಚಾರ ನಡೆದಿದ್ದರೆ ಅತ್ಯಾಚಾರಿಯನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- - --24ಕೆಡಿವಿಜಿ2, 3.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಾಣಿ ಬಕ್ಕೇಶ, ಮಂಜುನಾಥ, ಅಯೂಬ್ ಪೈಲ್ವಾನ್ ಇತರರಿದ್ದರು.