ಪರ್ತಗಾಳಿಯಲ್ಲಿ ಜೀವೋತ್ತಮ ವಿದ್ಯಾಪೀಠಂ ಶುಭಾರಂಭ

KannadaprabhaNewsNetwork |  
Published : Jun 27, 2026, 01:15 AM IST
 ಪರ್ತಗಾಳಿಯಲ್ಲಿ  ಜೀವೋತ್ತಮ ವಿದ್ಯಾಪೀಠಂ ಶುಭಾರಂಭ  ಸನಾತನ ಧರ್ಮ ಸಂರಕ್ಷಣೆ ,  ಶ್ರೀಮಧ್ವ ಸಿದ್ಧಾಂತದ ಅಧ್ಯಯನಕ್ಕೆ ಆದ್ಯತೆ: ವಿದ್ಯಾದೀಶ ತೀರ್ಥರು  | Kannada Prabha

ಸಾರಾಂಶ

ದಕ್ಷಿಣ ಅಯೋಧ್ಯೆ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ ಬುಧವಾರ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹೊಸ ವೇದಾಧ್ಯಯನ ಕೇಂದ್ರವಾದ ಜೀವೋತ್ತಮ ವಿದ್ಯಾಪೀಠಂ ಉದ್ಘಾಟನೆಗೊಂಡಿತು.

ಮೂಡುಬಿದಿರೆ: ದಕ್ಷಿಣ ಅಯೋಧ್ಯೆ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ ಬುಧವಾರ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹೊಸ ವೇದಾಧ್ಯಯನ ಕೇಂದ್ರವಾದ ಜೀವೋತ್ತಮ ವಿದ್ಯಾಪೀಠಂ ಉದ್ಘಾಟನೆಗೊಂಡಿತು.ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡಿರುವ 77 ಅಡಿ ಎತ್ತರದ ಕಂಚಿನ ಶ್ರೀರಾಮ ಪ್ರತಿಮೆಯುಳ್ಳ ಮಠದಲ್ಲಿ ಪರಾಭವ ನಾಮ ಸಂವತ್ಸರದ ನಿಜ ಜ್ಯೇಷ್ಠ ಶುಕ್ಲ ದಶಮಿಯ ಶುಭ ಸಂದರ್ಭದಲ್ಲಿ ವಿದ್ಯಾಪೀಠಕ್ಕೆಚಾಲನೆ ನೀಡಲಾಯಿತು.ಸುಮಾರು ೫೫೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ಪ್ರಸಾರ ಹಾಗೂ ಪೋಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ದೇಶಾದ್ಯಂತ ೩೪ ಶಾಖಾ ಮಠಗಳನ್ನು ಹೊಂದಿದೆ. ಮಠದ ಗುರು ಪರಂಪರೆಯಲ್ಲಿ ಸಾಂಪ್ರದಾಯಿಕ ಗುರುಕುಲ ಪದ್ಧತಿ ಮೂಲಕ ವೇದ ಮತ್ತು ಶಾಸ್ತ್ರಗಳ ಅಧ್ಯಯನ ನಿರಂತರವಾಗಿ ನಡೆಯುತ್ತಾ ಬಂದಿದೆ.1953ರಲ್ಲಿ ಶ್ರೀಮದ್ ದ್ವಾರಕಾನಾಥತೀರ್ಥ ಶ್ರೀಪಾದರಿಂದ ಆರಂಭಗೊಂಡಿದ್ದ ಸಂಸ್ಕೃತ ಪಾಠಶಾಲೆಯನ್ನು ಬಳಿಕ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದರು ಪರ್ತಗಾಳಿಗೆ ಸ್ಥಳಾಂತರಿಸಿ ಜೀವೋತ್ತಮ ವೈದಿಕ ಸಂಸ್ಕೃತ ಪಾಠಶಾಲೆ ಎಂದು ನಾಮಕರಣ ಮಾಡಲಾಗಿತ್ತು. ಈ ಸಂಸ್ಥೆಯ ಮೂಲಕ 500ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದರು. ಆದರೆ ಆಧುನಿಕ ಶಿಕ್ಷಣದ ಪ್ರಭಾವದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದ ಪರಿಣಾಮ 2016ರ ವೇಳೆಗೆ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಂಡಿತ್ತು.ಇದೀಗ ಸಮಾಜದಲ್ಲಿ ವೇದಾಧ್ಯಯನದ ಬಗ್ಗೆ ಪುನಃ ಆಸಕ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರು ಜೀವೋತ್ತಮ ವಿದ್ಯಾಪೀಠಂ ಹೆಸರಿನಲ್ಲಿ ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಮೂಲಕ ಹೊಸ ಚೈತನ್ಯ ತುಂಬಿದ್ದಾರೆ.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಪಾದರು, ಹಿಂದೂ ಸನಾತನ ಧರ್ಮದ ಸಂರಕ್ಷಣೆ ಹಾಗೂ ಶ್ರೀಮಧ್ವ ಸಿದ್ಧಾಂತದ ಅಧ್ಯಯನಕ್ಕೆ ಈ ವಿದ್ಯಾಪೀಠ ಕೇಂದ್ರ ಬಿಂದುವಾಗಲಿದೆ. ಐದು ವರ್ಷದ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ ಮತ್ತು ಜ್ಯೋತಿಷ್ಯ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ. ಹತ್ತು ವರ್ಷದ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ, ಜ್ಯೋತಿಷ್ಯ, ನ್ಯಾಯ, ವ್ಯಾಕರಣ ಮತ್ತು ವೇದಾಂತ ವಿಷಯಗಳ ಸಮಗ್ರ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.ವಿದ್ಯಾಪೀಠದ ಸಂಸ್ಕೃತ ವಿಭಾಗಕ್ಕೆ ಗಣೇಶ್ ಭಟ್ ಗೋಕರ್ಣ ಹಾಗೂ ರಘೋತ್ತಮ ಆಚಾರ್ಯ ಬೆಂಗಳೂರು, ವೇದ ವಿಭಾಗಕ್ಕೆ ಅಥರ್ವ ಭಾಂಡೆಕರ್ ಮತ್ತು ಮುಖ್ಯೋಪಾಧ್ಯಾಯರಾಗಿ ಲಕ್ಷ್ಮೀಕಾಂತ ಭಟ್ ಅವರನ್ನು ನೇಮಕ ಮಾಡಲಾಗಿದೆ.ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮೋಹನದಾಸ ಪೈ, ಆರ್.ಎಸ್. ಶಾನುಭಾಗ, ಶ್ರೀನಿವಾಸ ವಿ. ದೆಂಪೋ, ರಾಮಚಂದ್ರ ಆರ್. ಕಾಮತ, ಅನಿಲ ಪೈ, ದಿನೇಶ ಪೈ, ಯೋಗೀಶ ಕಾಮತ ಸೇರಿದಂತೆ ವಿವಿಧ ಗಣ್ಯರು, ವೈದಿಕ ವೃಂದ, ಹಳೆಯ ವಿದ್ಯಾರ್ಥಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.ಹರಿ ಗುರು ಮತ್ತು ಸರಸ್ವತಿ ಪೂಜೆಯ ನಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಶಿಕ್ಷಣೋಪಕರಣ ವಿತರಿಸುವ ಮೂಲಕ ವಿದ್ಯಾ ಪೀಠದ ಶುಭಾರಂಭ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈಯಲ್ಲಿ ಬಾಲಿಕಾ ಜಾಗೃತಿ ಅಭಿಯಾನ
ಉಪ್ಪಿನಂಗಡಿ: ನೇತ್ರಾವತಿ ಒಡಲಿಗೆ ತ್ಯಾಜ್ಯ ನೀರು!