ಕನ್ನಡಪ್ರಭ ವಾರ್ತೆ, ಚಾಮರಾಜನಗರ
ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಜೀವನ ರೂಪಿಸಿಕೊಂಡು ಜಿಲ್ಲೆಗೆ ಕೀರ್ತಿ ತರುವಂತೆ ಎಂ.ಎಸ್.ಐ.ಎಲ್ ಅಧ್ಯಕ್ಷ, ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ರೋವರ್ಸ್, ರೇಂಜರ್, ಅಭಿವ್ಯಕ್ತಿ ಹಾಗೂ ವಿವಿಧ ಸಮಿತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಗುಣಮಟ್ಟದ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ವಿದ್ಯಾರ್ಥಿಗಳು ಇವುಗಳ ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿದೆ. ಸರ್ಕಾರಿ ಕಾಲೇಜುಗಳು ಎಲ್ಲ ವಿಧದಲ್ಲಿಯೂ ಖಾಸಗಿ ಕಾಲೇಜುಗಳಿಗೆ ಸರಿಸಮಾನವಾಗಿವೆ. ನಗರದಲ್ಲಿ ಕೃಷಿ, ವಿಜ್ಞಾನ, ವೈದ್ಯಕೀಯ ಹಾಗೂ ಕಾನೂನು ಕಾಲೇಜುಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆದು ದೊಡ್ಡದೊಡ್ಡ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದು ತಿಳಿಸಿದರು.ಆಧುನಿಕ ಜಗತ್ತು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯಗಳ ಆಧಾರದ ಮೇಲೆ ಭವಿಷ್ಯದಲ್ಲಿ ಉದ್ಯೋಗಗಳು ಲಭಿಸಲಿವೆ. ವಿದ್ಯಾರ್ಥಿ ಜೀವನದಲ್ಲಿ ಉನ್ನತಮಟ್ಟದ ಗುರಿಯನ್ನು ಇಟ್ಟುಕೊಂಡಿದ್ದರೆ ಅತ್ಯುನ್ನತ ಹುದ್ದೆ ಏರಲು ಆಶ್ಚರ್ಯವೇನಿಲ್ಲ. ವಿದ್ಯಾರ್ಥಿ ಜೀವನದಲ್ಲಿ ತಂದೆ ತಾಯಿ ಹಾಗೂ ಗುರುವಿನ ಪಾತ್ರಗಳು ಪ್ರಮುಖವಾಗಿದ್ದು ಅವರಿಗೆ ಗೌರವ ನೀಡಬೇಕು ಎಂದು ತಿಳಿದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಮಾತನಾಡಿ, ಸರ್ಕಾರವು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಅನೇಕ ಶೈಕ್ಷಣಿಕವಾಗಿ ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ವಿವಿಧ ತಾಂತ್ರಿಕ ಕೋರ್ಸ್‌ಗಳು ಆರಂಭವಾಗಿವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲವೂ ಇರಬೇಕು. ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡಬೇಕು. ಸಮಾಜದಲ್ಲಿ ಬದಲಾವಣೆ ತರಲು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.ಇತ್ತೀಚೆಗೆ ಆನ್‌ಲೈನ್ ತರಬೇತಿಗಳು ಅತಿ ಹೆಚ್ಚಾಗುತ್ತಿದ್ದು ಸಂವಹನ ಹಾಗೂ ನಡವಳಿಕೆಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡ ಮೂರರಷ್ಟು ಮೀಸಲಾತಿ ಇದ್ದು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಲ್ಲೂ ಬೆಳೆಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ಕೌಶಲ ಯೋಜನೆ ಮೂಲಕ ತಾಲ್ಲೂಕು ಮಟ್ಟದಲ್ಲಿ ಕೇಂದ್ರ ತೆರೆದು ವಿದ್ಯಾರ್ಥಿಗಳಿಗೆ ಕನಿಷ್ಟ ೪ ತಿಂಗಳ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ. ಎಸ್.ಆರ್ ಅಶ್ವಿನಿ, ಕಾಲೇಜು ಹಂತದಲ್ಲಿ ಪಠ್ಯ, ಪಠ್ಯೇತರ ಎರಡು ವಿಭಾಗವಿದ್ದು, ಪಠ್ಯಕ್ರಮಗಳು ಬೌದ್ಧಿಕವಾಗಿ ಬೆಳೆಸಿದರೆ ಪಠ್ಯೇತರ ಚಟುವಟಿಕೆಗಳು ಪ್ರತಿಭೆಗಳನ್ನು ಗುರುತಿಸಿ ಬೆಳೆಸುತ್ತವೆ. ಜಿಲ್ಲೆಯು ಜನಪದ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಿನಿಮಾ ಹಾಗೂ ರಂಗಾಯಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಗ್ರಗಣ್ಯರನ್ನು ಮಾದರಿಯಾಗಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ 10 ಸಾವಿರ ಮೀ. ಮ್ಯಾರಾಥಾನ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವಿಜೇತರಾದ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಆರ್. ನವೀನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಾಸನಾಂಬೆ ದೇವಾಲಯದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಡ್ರಾಮಾ ಜೂನಿಯರ್ ಕಲಾವಿದ ಗೌತಮ್ ರಾಜ್, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಎ. ಶಾಲಿನಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ಡಾ. ಜಿ. ಮಲ್ಲೇಶ್, ಐಕ್ಯೂಎಸಿ ಸಂಚಾಲಕರಾದ ಸಿ.ಎನ್. ನಾರಾಯಣ್, ಕ್ರೀಡಾ ಮತ್ತು ರೇಂಜರ್ ಸಂಚಾಲಕ ಜಿ.ಕೆ. ದೀಪಿತ, ರೋವರ್ಸ್ ಸಂಚಾಲಕ ಡಾ. ಪಿ.ಎಂ. ನಾಗೇಂದ್ರ ಕುಮಾರ್, ಯುವ ರೆಡ್ ಕ್ರಾಸ್ ಸಂಚಾಲಕ ಎ.ಸಿ. ಚಂದ್ರಶೇಖರ್, ಅಭಿವ್ಯಕ್ತಿ ಸಂಚಾಲಕರಾದ ಎಂ. ಚಂದ್ರಕಲಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.