ಸೌಲಭ್ಯಕ್ಕಾಗಿ ಜಾತಿಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಿ

KannadaprabhaNewsNetwork |  
Published : May 04, 2025, 01:31 AM IST
ಫೋಟೋ, 3hsd10:ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮಾದಿಗ ಮುಖಂಡರ ಜಾಗೃತಿ ಕಾರ್ಯಕ್ರಮದಲ್ಲಿ ಜಾತಿಸಮೀಕ್ಷೆ ವೇಳೆ ಬರೆಯಿಸಿ ನಮ್ಮ ಜಾತಿ ಮಾದಿಗ ಎಂಬ ಭಿತ್ತಿಪತ್ರ, ಕರಪತ್ರವನ್ನು ಮಾಜಿ ಸಚಿವ ಎಚ್.ಆಂಜನೇಯ ಬಿಡುಗಡೆಗೊಳಿಸಿದರು | Kannada Prabha

ಸಾರಾಂಶ

ಚಿತ್ರದುರ್ಗ: ಮುವತ್ತು ವರ್ಷದ ಹೋರಾಟ ಫಲ ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಈಗ ನಮ್ಮ ಮುಂದಿರುವ ಸವಾಲು ಜಾತಿಸಮೀಕ್ಷೆ ಶೇ.100ರಷ್ಟು ಯಶಸ್ವಿಗೊಳಿಸುವುದಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.

ಚಿತ್ರದುರ್ಗ: ಮುವತ್ತು ವರ್ಷದ ಹೋರಾಟ ಫಲ ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಈಗ ನಮ್ಮ ಮುಂದಿರುವ ಸವಾಲು ಜಾತಿಸಮೀಕ್ಷೆ ಶೇ.100ರಷ್ಟು ಯಶಸ್ವಿಗೊಳಿಸುವುದಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಬೆಂಗಳೂರಿನ ಲಿಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಿಗ ಮುಖಂಡರ ಜಾಗೃತಿ ಕಾರ್ಯಕ್ರಮದಲ್ಲಿ "ಜಾತಿಸಮೀಕ್ಷೆ ವೇಳೆ ಬರೆಯಿಸಿ ನಮ್ಮ ಜಾತಿ ಮಾದಿಗ " ಎಂಬ ಭಿತ್ತಿಪತ್ರ, ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದಲ್ಲಿನ ಕೆಲವರು ನಮ್ಮ ಜನಸಂಖ್ಯೆ ಹೆಚ್ಚು ಇದೆ ಎನ್ನುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದೆ. ಆದರೆ, ನಮ್ಮಲ್ಲಿ ಜಾಗೃತಿ ಕೊರತೆ ಕಾರಣಕ್ಕೆ ಹಿಂದುಳಿದಿದ್ದೇವೆ. ಈಗ ಜಾತಿಸಮೀಕ್ಷೆ ಬಳಿಕ ಎಲ್ಲ ಸತ್ಯ ಹೊರಬೀಳಲಿದೆ. ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಆಗಲಿದೆ ಎಂದರು.

ಮಾದಿಗ ಸಮುದಾಯದ ಮುಖಂಡರು ಪ್ರತಿ ಊರು, ಪಟ್ಟಣ, ಕಾಲೋನಿ, ಕೇರಿ, ಓಣಿ, ಬಡಾವಣೆಗಳಲ್ಲಿನ ಮಾದಿಗ ಸಮುದಾಯದ ಪ್ರತಿ ಮನೆಗೆ ಭೇಟಿ ನೀಡಿ ಮೇ 5ರಿಂದ 17ರ ವರೆಗೆ ಮನೆಗಳಲ್ಲಿಯೇ ಇದ್ದು, ಜಾತಿ ಸಮೀಕ್ಷೆದಾರರು ಮನೆಗೆ ಬಂದಾಗ ನಾವು ಕೋಡ್ 61 ಮಾದಿಗ ಎಂದು ಹೇಳಬೇಕು. ಈ ಮೂಲಕ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಮೀಸಲಾತಿ ಪಡೆಯುವ ಪ್ರಯತ್ನ ಮಾಡಬೇಕಿದೆ ಎಂದರು.

ಮುವತ್ತು ವರ್ಷ ಹೋರಾಟ ಮಾಡಿದ ಸಂಘಟನೆಗಳ ನಾಯಕರು, ಮುಖಂಡರು, ಚಿಂತಕರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪರೋಕ್ಷವಾಗಿ ಬೆಂಬಲಕ್ಕೆ ನಿಂತ ನೌಕರ ವರ್ಗ ಮೇ 5ರಿಂದ ಮೇ 23ರ ವರೆಗೆ ವಿಶ್ರಾಂತಿ ರಹಿತವಾಗಿ ಚಟುವಟಿಕೆಯಲ್ಲಿರಬೇಕು. ಮಾದಿಗ ಸಮುದಾಯದ ಯಾವುದೇ ಒಂದು ಕುಟುಂಬ, ಒಬ್ಬ ಸದಸ್ಯನೂ ಜಾತಿಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕಾಗಿದೆ. ಈ ಮೂಲಕ ಮೀಸಲಾತಿ ಪಡೆಯುವಲ್ಲಿ ವಂಚಿತರಾಗಿರುವ ಮಾದಿಗ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ ಎಂದು ಭಾಷಣ, ಮಾತುಗಳಲ್ಲಿ ಹೇಳುತ್ತಿದ್ದೀರಿ. ಅದನ್ನು ದಾಖಲೆ ರೂಪದಲ್ಲಿ ತೋರಿಸಲು ಮಾದಿಗ ಸಮುದಾಯದ ಸಂಘಟನೆ, ಮುಖಂಡರುಗಳು ಪ್ರತಿ ಬಡಾವಣೆ, ಮನೆಗಳಿಗೆ ಭೇಟಿ ನೀಡಿ ನಮ್ಮ ಜಾತಿ ಮಾದಿಗ ಎಂದು ಹೆಮ್ಮೆಯಿಂದ ಹೇಳುವಂತೆ ಜಾಗೃತಿ ಮೂಡಿಸಬೇಕು ಎಂದರು.

ಸವಲತ್ತು ಬೇಕಾದರೆ ಕಡ್ಡಾಯವಾಗಿ ಮಾದಿಗ ಜಾತಿ ಎಂದು ಹೆಮ್ಮೆಯಿಂದ ಹೇಳಿ, ಇಲ್ಲದಿದ್ದರೆ ಮೀಸಲಾತಿಯಿಂದ ವಂಚಿತರಾಗುತ್ತೀರಿ ಎಂಬ ಎಚ್ಚರ ಇರಬೇಕು ಎಂದು ಎಚ್ಚರಿಸಿದರು.

ಬೆಂಗಳೂರು ಸೇರಿ ರಾಜ್ಯದ ಪ್ರತಿ ಊರು, ಪಟ್ಟಣ, ನಗರದಲ್ಲಿನ ಎಲ್ಲ ಜಾತಿ, ಧರ್ಮದವರ ಮನೆಗಳಿಗೆ ಸಮೀಕ್ಷೆದಾರರು ಭೇಟಿ ನೀಡುತ್ತಾರೆ. ಈ ವೇಳೆ ಎಲ್ಲೇಲ್ಲಿ ಮಾದಿಗರ ಮನೆಗಳು ಇವೆಯೆಂಬುದನ್ನು ಗುರುತಿಸಿ, ಅವರ ಮನೆಗೆ ಸಮೀಕ್ಷೆದಾರರು ಬಂದಾಗ ನೀವುಗಳು ಖುದ್ದಾಗಿ ಇದ್ದು ಮಾದಿಗ ಎಂದು ಹೇಳಿಸಬೇಕು. ಈ ಮೂಲಕ ಮೀಸಲಾತಿಯಲ್ಲಿ ಹೆಚ್ಚು ಪ್ರಮಾಣ ನಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ. ನೊಂದ, ಅಸ್ಪೃಶ್ಯ ಜನರನ್ನು ಮುಖ್ಯವಾಹಿನಿಗೆ ತರಲು ಪಣ ತೊಟ್ಟಿದ್ದಾರೆ. ಅವರು ಒಳಮೀಸಲಾತಿ ಜಾರಿಗೊಳಿಸಲು ಹೆಚ್ಚು ಆಸಕ್ತರಾಗಿದ್ದು, ಅವರ ಕಾರ್ಯಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು.

ಐಎಎಸ್ ನಿವೃತ್ತ ಅಧಿಕಾರಿ ಬಿ.ಎಚ್.ಅನಿಲ್‌ಕುಮಾರ್, ನಿವೃತ್ತ ಐಆರ್‌ಎಸ್ ಅಧಿಕಾರಿ ಭೀಮಾಶಂಕರ್, ಆಧಿಜಾಂಬವ ಸಂಘದ ಅಧ್ಯಕ್ಷ ಭೀಮರಾಜ್, ಮಾದಿಗ ದಂಡೋರದ ಮುಖಂಡ ಶ್ರೀನಿವಾಸ್, ಅಹಿಂದ ನಾಯಕ ಮುತ್ತುರಾಜ್, ಮುಖಂಡರಾದ ಸುಬ್ಬರಾಯುಡು, ನಾರಾಯಣ ಇತರರು ಮಾತನಾಡಿದರು.

18 ದಿನಗಳೇ ಮಹತ್ವ

ಮೇ 5ರಿಂದ ಮೇ 23ರ ವರೆಗೆ ಒಟ್ಟು 18 ದಿನಗಳ ಕಾಲ ನಡೆಯಲಿರುವ ಜಾತಿಸಮೀಕ್ಷೆ ಕಾರ್ಯ, 30 ವರ್ಷದ ಕಾಲ ನಡೆಸಿದ ಹೋರಾಟಕ್ಕಿಂತಲೂ ಹೆಚ್ಚು ಮಹತ್ವದ್ದಾಗಿದೆ. ಆದ್ದರಿಂದ ಈ ಸಮಯದಲ್ಲಿ ನಾವು ಹೆಚ್ಚು ಎಚ್ಚರ ವಹಿಸಬೇಕು. ಮಾದಿಗ ಸಮುದಾಯದ ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆದಾರರು ಬಂದಾಗ ನಮ್ಮ ಜಾತಿ ಮಾದಿಗ ಎಂದು ಬರೆಯಿಸುವಂತೆ ಜಾಗೃತಿಗೊಳಿಸಬೇಕು ಎಂದು ಆಂಜನೇಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ