ದೇಶದ ಭವಿಷ್ಯಕ್ಕಾಗಿ ಜನಗಣತಿಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಕರ್ತವ್ಯ

KannadaprabhaNewsNetwork |  
Published : Apr 03, 2026, 01:45 AM IST
2ಎಚ್ಎಸ್ಎನ್7 :  | Kannada Prabha

ಸಾರಾಂಶ

ಜನಗಣತಿಯ ಮೊದಲ ಹಂತದಲ್ಲಿ ನಾಗರಿಕರು ತಾವಾಗಿಯೇ ಮಾಹಿತಿ ದಾಖಲಿಸಲು ಅವಕಾಶವಿದ್ದು, ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸಾರ್ವಜನಿಕರು ವೆಬ್‌ಸೈಟ್‌ಗೆ ಲಾಗಿನ್ ಆಗಿ ತಮ್ಮ ಮೊಬೈಲ್ ಮೂಲಕವೇ ಕುಟುಂಬದ ಮಾಹಿತಿಯನ್ನು ಅಪ್‌ಲೋಡ್ ಮಾಡಬಹುದು. ನಾಗರಿಕರು ನೀಡುವ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಪ್ರತಿಯೊಬ್ಬರೂ ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರದೇಶದ ಅಭಿವೃದ್ಧಿ ಹಾಗೂ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬ ನಾಗರಿಕನು ಸ್ವಯಂ ಜನಗಣತಿಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಅವರು ಹೇಳಿದರು.ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ''''''''ಜನಗಣತಿ-2026'''''''' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸರ್ಕಾರವು ಏಪ್ರಿಲ್ 1ರಿಂದ ಜನಗಣತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಇದು ಕೇವಲ ಅಂಕಿಅಂಶಗಳ ಸಂಗ್ರಹವಲ್ಲ, ಬದಲಿಗೆ ನಮ್ಮ ರಾಜ್ಯ ಮತ್ತು ದೇಶದ ಭವಿಷ್ಯದ ನಕಾಶೆಯನ್ನು ರೂಪಿಸುವ ಮಹತ್ವದ ಕಾರ್ಯಕ್ರಮವಾಗಿದೆ. ವಿಶೇಷವಾಗಿ ಆರೋಗ್ಯ, ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಗಣತಿಯು ಪ್ರಮುಖ ಪಾತ್ರ ವಹಿಸಲಿದೆ ಎಂದರು. ​ಜನಗಣತಿಯ ಮೊದಲ ಹಂತದಲ್ಲಿ ನಾಗರಿಕರು ತಾವಾಗಿಯೇ ಮಾಹಿತಿ ದಾಖಲಿಸಲು ಅವಕಾಶವಿದ್ದು, ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸಾರ್ವಜನಿಕರು sp.self.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ ತಮ್ಮ ಮೊಬೈಲ್ ಮೂಲಕವೇ ಕುಟುಂಬದ ಮಾಹಿತಿಯನ್ನು ಅಪ್‌ಲೋಡ್ ಮಾಡಬಹುದು. ನಾಗರಿಕರು ನೀಡುವ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಪ್ರತಿಯೊಬ್ಬರೂ ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ನಾಗರಿಕರು ತಮ್ಮ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಸ್ವಯಂ ಗಣತಿ ಪೂರ್ಣಗೊಳಿಸಿದ ನಂತರ ಸಿಗುವ ಐಡಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಏಪ್ರಿಲ್ 16ರಿಂದ ಗಣತಿದಾರರು ಮನೆಮನೆಗೆ ಭೇಟಿ ನೀಡಿದಾಗ ಅವರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ಕೋರಿದರು.​ಈ ಸಂದರ್ಭದಲ್ಲಿ ತಾಲೂಕು ಚುನಾವಣಾ ಶಾಖೆಯ ಗ್ರೇಡ್- 2 ತಹಸೀಲ್ದಾರ್‌ ಜನಾರ್ದನ್, ಕಂದಾಯ ನಿರೀಕ್ಷಕ ದಾನ್ ಪ್ರಕಾಶ್, ಪುರಸಭಾ ಸಿಬ್ಬಂದಿಯಾದ ಸುಂದರೇಶ್, ಗಂಗಾಧರ್‌, ವರದರಾಜ್, ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆಯಲ್ಲಿ 2ನೇ ದಿನವೂ ಸಿದ್ದು ಭರ್ಜರಿ ಪ್ರಚಾರ
ಇಂದು ಬೆಂಗ್ಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ