ಕ್ರೀಡೆಗಳಲ್ಲಿ ಪಾಲ್ಗೋಳ್ಳುವಿಕೆ ಜೀವನಾನುಭವ ಕೊಡುತ್ತದೆ: ಸಿ.ಎಂ.ಲಿಂಗಪ್ಪ

KannadaprabhaNewsNetwork |  
Published : Jul 31, 2026, 01:15 AM IST
30ಕೆಆರ್ ಎಂಎನ್ 8.ಜೆಪಿಜಿಬಿಡದಿಯ ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ರಾಮನಗರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕ್ರೀಡೆಗಳಲ್ಲಿ ಭಾಗವಹಿಸುವವರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉತ್ತಮ ಕ್ರೀಡಾಪಟುಗಳು ದಕ್ಷ ಆಡಳಿತಗಾರರು, ಜೀವನ ಮೌಲ್ಯ ಅಳವಡಿಸಿಕೊಳ್ಳಲು, ನಮ್ಮ ಮನೆ, ನಮ್ಮ ಗ್ರಾಮ ಹಾಗೂ ನಮ್ಮ ಪೋಷಕರು ಅವರ ಗೌರವ ಉಳಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ಕ್ರೀಡೆಗಳಲ್ಲಿ ಗೆಲುವು ಮುಖ್ಯವಲ್ಲ, ಸೋಲು ಶಾಶ್ವತವಲ್ಲ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಸಂತೋಷ ಮತ್ತು ಜೀವನಾನುಭವ ಕೊಡುತ್ತದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.

ಬಿಡದಿಯ ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಬಿಡದಿ ಜ್ಞಾನ ವಿಕಾಸ ವಿದ್ಯಾ ಸಂಘ ಹಾಗೂ ಶ್ರೀ ಬಸವೇಶ್ವರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಯುಕ್ತವಾಗಿ ಏರ್ಪಡಿಸಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ರಾಮನಗರ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವಿಕೆ ಮಹತ್ವದ್ದು. ನಮ್ಮನ್ನು ಚಪ್ಪಾಳೆ ಹೊಡೆದು, ಬೆನ್ನುತಟ್ಟಿ ಪ್ರೋತ್ಸಾಹ ಮಾಡುವ ಸನ್ನಿವೇಶ ಜೀವನೋತ್ಸಾಹವನ್ನು ತಂದುಕೊಡುತ್ತದೆ. ಗೆಲ್ಲಲು ಚಾಕಚಕ್ಯತೆ, ಧೈರ್ಯ, ಮುನ್ನುಗ್ಗುವ ಮನಸ್ಸು ಬಹಳ ಅಗತ್ಯ. ಸೋಲು ಗೆಲ್ಲುವ ಛಲ ತಂದು ಕೊಡುತ್ತದೆ. ಕ್ರೀಡಾ ಸ್ಪರ್ಧೆಗಳಲ್ಲಿ ತರಬೇತಿ, ನಿರಂತರ ಅಭ್ಯಾಸ ಮಾಡಿ ಆಡುವುದು ಗೆಲ್ಲುವ ಅವಕಾಶ ಹೆಚ್ಚಿಸುತ್ತದೆ ಎಂದರು.

ಕ್ರೀಡಾಪಟುಗಳು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿ, ಯಾವುದೇ ಶ್ರಮದಾಯಕ ಕೆಲಸಕ್ಕೆ ಸಮರ್ಥರಾಗುತ್ತಾರೆ. ಇತರರಿಗಿಂತ ಕ್ರೀಡಾಪಟುಗಳಲ್ಲಿ ಕರ್ತವ್ಯ ನಿಷ್ಠೆ ಹೆಚ್ಚಾಗಿರುತ್ತದೆ. ದೇಶ ಕಟ್ಟುವ ಕಾಯಕದಲ್ಲಿ ಕ್ರೀಡಾ ಪಟುಗಳಿಗೆ ಗೌರವದ ಸ್ಥಾನವಿದೆ. ಸೋಲು ಗೆಲುವನ್ನು ಲೆಕ್ಕಿಸದೆ ಕ್ರೀಡಾ ಪಂದ್ಯಗಳಲ್ಲಿ ಪಾಲ್ಗೊಂಡು ಸ್ವ ಪ್ರಯೋಜನ ಪಡೆಯುವ ಹಾಗೂ ರಾಜ್ಯ ಮತ್ತು ರಾಷ್ಟ್ರಕ್ಕೆ ನೆರವಾಗುವತ್ತ ಸಾಗಬೇಕು ಎಂದು ಲಿಂಗಪ್ಪ ತಿಳಿಸಿದರು.

ವಿನಮ್ರತೆ ಇದ್ದವರಿಗೆ ಗೌರವ:

ಸಮಾರಂಭ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಸೋಲನ್ನು ಸ್ವೀಕರಿಸುವ ಮನೋಭಾವವೇ ಬದುಕಿನ ಬಹುದೊಡ್ಡ ಪಾಠ. ಗೆಲುವು ವಿನಮ್ರತೆಯ ಗುಣವನ್ನು ಬೆಳೆಸುತ್ತದೆ. ಇದು ಅತ್ಯುತ್ತಮ ಜೀವನ ನೀತಿಗಳಲ್ಲಿ ಒಂದಾಗಿದೆ. ವಿನಮ್ರತೆ ಇದ್ದವರನ್ನು ಸಮಾಜ ಗುರುತಿಸಿ ಗೌರವಿಸುತ್ತದೆ. ಗೆದ್ದೇ ಗೆಲ್ಲುತ್ತೇನೆ ಎನ್ನುವ ಮನೋಭಾವದಿಂದ ಆಟ ಆಡಿದರೂ ಸೋತಾಗ ಕುಗ್ಗದೆ, ಮತ್ತೊಮ್ಮೆ ಪ್ರಯತ್ನಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಆಟೋಟಗಳಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಓದಿಗೂ ಕೊಡಬೇಕು. ಐ. ಎ.ಎಸ್ ಹಾಗೂ ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಪ್ರಯತ್ನ ಮಾಡಿ, ಗೆಲುವು ಸಾಧಿಸಿ, ಜಿಲ್ಲೆಯ ಜನರ ಸೇವೆಗೆ ನಿಲ್ಲಬೇಕು ಎಂದರು. ಎದುರಾಳಿಯನ್ನು ಗೌರವಿಸುವ ಗುಣ ಇರಲಿ:

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಲು, ಸ್ವಂತ ಪ್ರತಿಭೆಯನ್ನು ಪ್ರದರ್ಶಿಸಿ ಬಹುಮಾನ ಗಳಿಸಲು ಕ್ರೀಡೆ ಸಹಕಾರಿ. ಎಲ್ಲರೂ ಗೆಲ್ಲಲಾಗಲ್ಲ. ಸಮಯಕ್ಕೆ ಸರಿಯಾಗಿ ಶ್ರಮಿಸುವವರು ಗೆಲ್ಲುತ್ತಾರೆ. ಸೋಮಾರಿಗಳಿಗೆ ಅದು ಸಾಧ್ಯವಿಲ್ಲ. ಎದುರಾಳಿಯನ್ನು ಗೌರವಿಸುವ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಕ್ರೀಡಾಪಟು ಕೀರ್ತಿವಂತರಾಗುತ್ತಾರೆ ಎಂದರು.

ಕ್ರೀಡೆಗಳಲ್ಲಿ ಭಾಗವಹಿಸುವವರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉತ್ತಮ ಕ್ರೀಡಾಪಟುಗಳು ದಕ್ಷ ಆಡಳಿತಗಾರರು, ಜೀವನ ಮೌಲ್ಯ ಅಳವಡಿಸಿಕೊಳ್ಳಲು, ನಮ್ಮ ಮನೆ, ನಮ್ಮ ಗ್ರಾಮ ಹಾಗೂ ನಮ್ಮ ಪೋಷಕರು ಅವರ ಗೌರವ ಉಳಿಸಬೇಕು ಎಂದರು.

ಸಮಾರಂಭದಲ್ಲಿ ಯೋಜನಾ ನಿರ್ದೇಶಕ ಶೇಖರ್, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಜಿಲ್ಲಾ ಉಪ ನಿರ್ದೇಶಕ ಎಂ ಮರಿಸ್ವಾಮಿ, ಸಂಸ್ಥೆಯ ನಿರ್ದೇಶಕರಾದ ಎಲ್.ಸತೀಶ್ ಚಂದ್ರ, ಬಿ.ಸಿ.ರೇಣುಕಾ ಪ್ರಸಾದ್, ಸುಶೀಲಾ ಜೈನ್, ವಿ.ಎಚ್.ಪುಟ್ಟರಾಜು, ಪ್ರಾಂಶುಪಾಲರಾದ ಮಮತಾ, ಸರವಣ್ಣ, ಖಜಾಂಚಿ ಬಿ.ಎನ್. ಗಂಗಾಧರಯ್ಯ, ಸಂಘಟಕ ಮೋನಿಷ್ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್. ಪ್ರದೀಪ್, ಡಾ.ದೊಡ್ಡ ಬೋರಯ್ಯ, ಕ್ರೀಡಾ ತರಬೇತುದಾರ ಶರತ್ ಕುಮಾರ್ ಕೆ, ದೇವರಾಜು, ಕೆ.ಆರ್. ಶ್ರೀನಿವಾಸ್, ಉಪನ್ಯಾಸಕರಾದ ಚಿಕ್ಕಪುಟ್ಟಯ್ಯ, ಡಾ.ಕೃಷ್ಣ, ಮಾರಣ್ಣ, ರಾಮಕೃಷ್ಣಯ್ಯ, ನ್ಯೂ ಎಕ್ಸ್ಪರ್ಟ್ ಕಾಲೇಜಿನ ನಾಗರಾಜು, ಕೆ.ನಾಗೇಶ್, ಲಕ್ಷ್ಮೀಪುರ ನಾಗೇಶ್, ಪ್ರಾಂಶುಪಾಲರಾದ ರೇಖಾ, ರಾಜಣ್ಣ, ಜೆ.ಬಿ.ಚನ್ನವೀರಯ್ಯ, ಶಬೀರ್ ಹಾಜರಿದ್ದರು.

---

ಹಿರಿಯ ಮುತ್ಸದ್ಧಿ ಸಿ.ಎಂ. ಲಿಂಗಪ್ಪ ಅವರು ರಾಜಕೀಯ ಸಂತ. ನಮ್ಮ ತಲೆಮಾರಿಗೆ ಸಿ.ಎಂ.ಲಿಂಗಪ್ಪನವರಂಥ ಮೌಲ್ಯಾಧಾರಿತ ರಾಜಕಾರಣಿಯನ್ನು ಕಾಣಲು ಮಾತ್ರ ಸಾಧ್ಯ. ಇಂದಿನ ರಾಜಕಾರಣ ಅಪಮೌಲ್ಯಗೊಂಡಿದೆ. ಮತದಾರರ ಯೋಗಕ್ಷೇಮಕ್ಕಿಂತ ಸ್ವಾರ್ಥವೇ ಪ್ರಧಾನವಾಗಿದೆ.

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ , ರಾಮನಗರ

-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ರೋಸ್ಟರ್ ತಿದ್ದುಪಡಿಗೆ ಆಗ್ರಹಿಸಿ ಲಂಬಾಣಿ ಸಮಾಜದಿಂದ ಮನವಿ
ವಿಷಾಹಾರದಿಂದ 57 ವಿದ್ಯಾರ್ಥಿಗಳು ಅಸ್ವಸ್ಥ: ಭುಗಿಲೆದ್ದ ಆಕ್ರೋಶ