ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಪಾರ್ತಿಸುಬ್ಬ ಪ್ರಶಸ್ತಿ

KannadaprabhaNewsNetwork | Published : Jan 11, 2025 12:47 AM

ಸಾರಾಂಶ

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಖ್ಯಾತ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರು. ನಗದು ಪುರಸ್ಕಾರವನ್ನು ಒಳಗೊಂಡಿದೆ. ಅಲ್ಲದೆ 16 ಮಂದಿ ಕಲಾವಿದರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ 17 ಪ್ರಶಸ್ತಿ ಪುರಸ್ಕೃತರ ಘೋಷಣೆ

ಕನ್ನಡಪ್ರಭ ವಾರ್ತೆ ಉಡುಪಿ

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಖ್ಯಾತ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರು. ನಗದು ಪುರಸ್ಕಾರವನ್ನು ಒಳಗೊಂಡಿದೆ. ಅಲ್ಲದೆ 16 ಮಂದಿ ಕಲಾವಿದರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಈ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು.ಅಕಾಡೆಮಿಯ ಗೌರವ ಪ್ರಶಸ್ತಿಗೆ ಯಕ್ಷಗಾನ ಕಲಾವಿದರಾದ ತೆಂಕುತಿಟ್ಟು ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಬೆಳ್ತಂಗಡಿ, ಬಡಗುತಿಟ್ಟು ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಕುಂದಾಪುರ, ಪ್ರಸಾದನ ಕಲಾವಿದ ರಾಘವ ದಾಸ್ ಬಂಟ್ವಾಳ, ತೆಂಕುತಿಟ್ಟು ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಬಂಟ್ವಾಳ, ಮೂಡಲಪಾಯ ಯಕ್ಷಗಾನ ಕಲಾವಿದ ಕಾಂತರಾಜು ತುಮಕೂರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು 50 ಸಾವಿರ ರು. ನಗದನ್ನು ಒಳಗೊಂಡಿದೆ ಎಂದು ಹೇಳಿದರು.ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್‌ ಕಾಸರಗೋಡು, ಬಡಗುತಿಟ್ಟು ಯಕ್ಷಗಾನ ಕಲಾವಿದ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಉಡುಪಿ, ತೆಂಕುತಿಟ್ಟು ಹಾಸ್ಯ ಕಲಾವಿದ ಮವ್ವಾರು ಬಾಲಕೃಷ್ಣ ಮಣಿಯಾಣಿ ಕಾಸರಗೋಡು, ಬಡಗುತಿಟ್ಟು ಸ್ತ್ರೀ ವೇಷಧಾರಿ ಉಮೇಶ್‌ ಕುಪ್ಪೆಪದವು, ಬಡಗುತಿಟ್ಟು ಸ್ತ್ರೀ ವೇಷಧಾರಿ ಶಿವಾನಂದ ಗೀಜಗಾರು ಶಿವಮೊಗ್ಗ, ಬಡಗುತಿಟ್ಟು ಸ್ತ್ರೀ ‍ವೇಷಧಾರಿ ಮುಗ್ವಾ ಗಣೇಶ್‌ ನಾಯ್ಕ ಹೊನ್ನಾವರ, ತೆಂಕುತಿಟ್ಟು ಸ್ತ್ರೀ ವೇಷಧಾರಿ ಸುರೇಂದ್ರ ಮಲ್ಲಿ ಮಂಗಳೂರು, ಪ್ರಸಂಗಕರ್ತ- ಭಾಗವತ ಅಂಡಾಲ ದೇವಿಪ್ರಸಾದ ಶೆಟ್ಟಿ ಮಂಗಳೂರು, ಮೂಡಲಪಾಯ ಯಕ್ಷಗಾನ ಕಲಾವಿದ ಕೃಷ್ಣಪ್ಪ ಬೆಂಗಳೂರು ಗ್ರಾಮಾಂತರ, ತೆಂಕು - ಬಡಗುತಿಟ್ಟು ಕಲಾವಿದೆ ಹಳುವಳ್ಳಿ ಜ್ಯೋತಿ ಚಿಕ್ಕಮಗಳೂರು ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರು. ನಗದನ್ನು ಒಳಗೊಂಡಿದೆ ಎಂದರು.

ಅಲ್ಲದೇ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 25 ಸಾವಿರ ರು. ನಗದನ್ನು ಒಳಗೊಂಡಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಮತ್ತು ಸದಸ್ಯರಾದ ಸತೀಶ್‌ ಅಡಪ ಸಂಕಬೈಲು, ಸುಧಾಕರ ಶೆಟ್ಟಿ, ಕೃಷ್ಣ ಪೂಜಾರಿ ಕಿನ್ಯಾ, ರಾಘವ ಎಚ್‌., ದಯಾನಂದ ಬೆಲ್ಲಾಲ, ಗುರುರಾಜ ಭಟ್, ಮೋಹನ್ ಕೊಪ್ಪಲ ಕದ್ರಿ, ರಾಜೇಶ್‌ ಕುಳಾಯಿ, ವೆಂಕಟೇಶ ಮಡಿವಾಳ ಮತ್ತು ಜಲವಳ್ಳಿ ವಿದ್ಯಾಧರ ಉಪಸ್ಥಿತರಿದ್ದರು.

Share this article