ಹಾವೇರಿ: ನರೇಂದ್ರ ಮೋದಿಜೀಯವರು ೩ನೇ ಬಾರಿಗೆ ಪ್ರಧಾನ ಮಂತ್ರಿಗಳಾಗಿ ದೇಶದ ಸೇವೆ ಸಲ್ಲಿಸಬೇಕಾದರೆ ನಾವೆಲ್ಲರೂ ಪಕ್ಷದ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗಿದೆ ಎಂದು ರಾಷ್ಟ್ರೀಯ ಪರಿಷತ್ ಎಸ್.ಟಿ. ಮೋರ್ಚಾ ಸದಸ್ಯ, ಹಾವೇರಿ ಲೋಕಸಭಾ ಕ್ಷೇತ್ರ ಸಂಚಾಲಕ ಮಂಜುನಾಥ ಓಲೇಕಾರ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮತ್ತು ಮಂಡಲ ಮೋರ್ಚಾಗಳ ಸಭೆಯಲ್ಲಿ ಅವರು ಮಾತನಾಡಿದರು. ಭಾರತೀಯ ಜನತಾ ಪಕ್ಷ ಉಗಮವಾಗಿ ೪೪ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರು ನಮ್ಮ ಸ್ವಕಾರ್ಯಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಬದಿಗಿಟ್ಟು ದೇಶ ಸೇವೆಗೆ ಸಮಯ ನೀಡಬೇಕಾಗಿದೆ. ಭಾರತೀಯ ಜನತಾ ಪಕ್ಷ ಗೆದ್ದರೆ ಭಾರತವೇ ಗೆದ್ದಂತೆ, ಹೀಗಾಗಿ ನಾವು ದೇಶ ಮೊದಲು ಎಂಬ ಭಾವನೆಯಿಂದ ಕೆಲಸ ಮಾಡಬೇಕಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಭಾಗ್ಯಗಳನ್ನು ಉಚಿತವಾಗಿ ಕೊಟ್ಟು ಅದರ ಆದಾಯವನ್ನು ಬೇರೆ ಬೇರೆ ದಿನ ನಿತ್ಯದ ಗೃಹ ಬಳಕೆಯ ವಸ್ತುಗಳ ಮೇಲೆ ಹಾಗೂ ವಿವಿಧ ಬಾಂಡಗಳ ಹಣವನ್ನು ಹೆಚ್ಚಿಸುವ ಮೂಲಕ ಒಂದು ಕೈಯಿಂದ ಕೊಟ್ಟ ಹಣವನ್ನು ಮೊತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ. ದೇಶದ ಜನರಿಗೆ ನರೇಂದ್ರ ಮೋದಿಜಿಯವರೆ ಅತಿ ದೊಡ್ಡ ಗ್ಯಾರಂಟಿ. ಈ ಬಾರಿ ಹಾವೇರಿ ಲೋಕಸಭಾ ಅಭ್ಯರ್ಥಿಯನ್ನು ಕನಿಷ್ಠ ೨ ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಹಾಗಾಗಿ ನಾವೆಲ್ಲರು ದೇಶದ ಕಾಳಜಿಯೊಂದಿಗೆ ಕರ್ತವ್ಯ ನಿರ್ವಹಿಸೋಣ ಎಂದರು. ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ ಚುನಾವಣೆಯ ಸಿದ್ಧತೆಯ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ ಹಾಗೂ ಜಿಲ್ಲೆ ಮತ್ತು ಮಂಡಲ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಇದ್ದರು.