ಮೂಡುಬಿದಿರೆಯ ಐತಿಹಾಸಿಕ ಕಟ್ಟಡದ ರೋಧನೆ ಕೇಳುವವರಿಲ್ಲ!

KannadaprabhaNewsNetwork |  
Published : Apr 01, 2024, 12:48 AM IST
32 | Kannada Prabha

ಸಾರಾಂಶ

ಸ್ವಾತಂತ್ರ್ಯಪೂರ್ವದ ಬ್ರಿಟೀಷರ ಆಡಳಿತದ ಜತೆಗೆ ಮೂಡುಬಿದಿರೆಯ ಆಗು ಹೋಗುಗಳನ್ನು ತಾಲೂಕು ಕೇಂದ್ರವಾಗಿ ಅಧಿಕಾರ ಸ್ಥಾನದಿಂದ ಈ ಕಟ್ಟಡ ನೋಡಿತ್ತು. ಈ ಕಟ್ಟಡದಲ್ಲಿ ಈಗಲೂ ತಾಲೂಕು ನ್ಯಾಯಾಲಯದ ಕಟಕಟೆ, ನ್ಯಾಯಾಧೀಶರ ಪೀಠ ಎಲ್ಲವೂ ಹಾಗೆಯೇ ಇದೆ.

ಗಣೇಶ್ ಕಾಮತ್

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ಪೇಟೆಯ ಹೃದಯ ಭಾಗದ ಮುಖ್ಯರಸ್ತೆಯಲ್ಲಿ ಹಾದು ಹೋಗುವ ಜನ, ವಾಹನಗಳು ಗಮನವಿಟ್ಟು ಕೇಳಿದರೆ ಈ ಕೆಂಪು ಕಟ್ಟಡದ ಅಳಲು ಕೇಳಿಸದೇ ಇರಲು ಸಾಧ್ಯವೇ ಇಲ್ಲ. ಆದರೂ ಕಟ್ಟಡದ ರೋಧನ ನಿಂತಿಲ್ಲ.

ಒಂದು ಕಾಲಕ್ಕೆ ಊರ ಜನತೆಯ ಪಾಲಿಗೆ ಕೆಂಪು ಸುಂದರಿಯಾಗಿಯಾಗಿದ್ದ ಈ ಕಟ್ಟಡ, ನೂರು ವರ್ಷಗಳ ಮೊದಲೇ ಮೂಡುಬಿದಿರೆಯ ತಾಲೂಕು ಕೇಂದ್ರವಾಗಿತ್ತು. ಬದಲಾದ ಕಾಲ ಘಟ್ಟದಲ್ಲಿ ತಾಲೂಕು ಸ್ಥಾನ ಮಾನ ಕಳೆದು ಹೋದರೂ ಭೂ ನೊಂದಾವಣಾಧಿಕಾರಿಯ ಕಚೇರಿಯಾಗಿತ್ತು. ಆದರೆ ಕೆಲವೇ ವರ್ಷಗಳ ಹಿಂದೆ ಮತ್ತೆ ಮೂಡುಬಿದಿರೆ ತಾಲೂಕು ಕೇಂದ್ರವಾದಾಗ, ಹೊಸ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿ ಆಡಳಿತ ಅತ್ತ ಸೇರಿಕೊಂಡು, ಈ ಕಟ್ಟಡವನ್ನು ನಿರ್ಲಕ್ಷಿಸಲಾಯಿತು.ಸ್ವಾತಂತ್ರ್ಯಪೂರ್ವದ ಬ್ರಿಟೀಷರ ಆಡಳಿತದ ಜತೆಗೆ ಮೂಡುಬಿದಿರೆಯ ಆಗು ಹೋಗುಗಳನ್ನು ತಾಲೂಕು ಕೇಂದ್ರವಾಗಿ ಅಧಿಕಾರ ಸ್ಥಾನದಿಂದ ಈ ಕಟ್ಟಡ ನೋಡಿತ್ತು. ಈ ಕಟ್ಟಡದಲ್ಲಿ ಈಗಲೂ ತಾಲೂಕು ನ್ಯಾಯಾಲಯದ ಕಟಕಟೆ, ನ್ಯಾಯಾಧೀಶರ ಪೀಠ ಎಲ್ಲವೂ ಹಾಗೆಯೇ ಇದೆ. ಆದರೆ ಅಧಿಕಾರದಲ್ಲಿದ್ದವರು ಈ ಐತಿಹಾಸಿಕ ಕಟ್ಟಡ ಮರೆತಿರುವುದು ಬೇಸರದ ಸಂಗತಿ. ಪರಂಪರೆಯ ಕಟ್ಟಡ ಎನ್ನುವುದನ್ನೂ ಮರೆತು, ಆಗಾಗ ಬೇಕಾಬಿಟ್ಟಿ ಕೂಡಿಸಿ ಕಳೆದು ತೇಪೆ ಹಚ್ಚಿ ವಿರೂಪಗೊಳಿಸಲಾಗಿದೆ.

ಪೇಟೆಯ ಹೃದಯ ಭಾಗದಲ್ಲಿರುವ ಈ ಬೆಲೆ ಬಾಳುವ ಕಟ್ಟಡ, ನಿವೇಶನ ಪರಂಪರೆಯ ದೃಷ್ಟಿಯಿಂದಲೂ ಅಮೂಲ್ಯ. ಆದರೆ ಈ ಐತಿಹಾಸಿಕ ಮೌಲ್ಯ ತಿಳಿಯದವರಿಂದಾಗಿ ಸದ್ಯ ಈ ಕಟ್ಟಡ ಪಾಳು ಬಂಗಲೆಯಾಗಿ, ತ್ಯಾಜ್ಯದ ಅಡ್ಡೆಯಾಗಿ, ಸ್ಮಶಾನ ಮೌನ ಕಳೆ ಹೊದ್ದು ಕುಳಿತಿದೆ.

ತಾಲೂಕು ಆಡಳಿತ ಪುರಾತತ್ವ ಇಲಾಖೆ ಅಥವಾ ಸಂಬಂಧ ಪಟ್ಟವರು ಈ ಕಟ್ಟಡವನ್ನು ಸುಂದರವಾಗಿರಿಸಿ ಮತ್ತೆ ಜೀವ ಕಳೆ ತುಂಬಲು ಸಾಧ್ಯವಿದೆ. ಕನಿಷ್ಠ ಪೊಲೀಸ್ ಔಟ್ ಪೋಸ್ಟ್, ಯಾವುದಾದರೊಂದು ಉಪಯುಕ್ತ ಇಲಾಖೆ, ಆಡಳಿತಾತ್ಮಕ ಜನ ಸೇವಾ ಕೇಂದ್ರಗಳಿಗೂ ನೀಡಿ ಜೀವಂತಿಕೆ ತುಂಬಬಹುದು. ಯಾವುದಕ್ಕೂ ವಾಣಿಜ್ಯ ದೃಷ್ಟಿಕೊನವನ್ನು ಹೊರಗಿಟ್ಟು ಪರಂಪರೆ, ಊರ ಘನತೆಯ ದೃಷ್ಟಿಯಿಂದ ಯೋಚಿಸಿದರೆ ಈ ತಾಣ ಮರಳಿ ಅರಳುವ ಎಲ್ಲ ಸಾಧ್ಯತೆಗಳಿವೆ.

---------------ಟೂರಿಸಂ ಇಲ್ಲಿ ಶಾಪಗ್ರಸ್ತ!ಮೂಡುಬಿದಿರೆ ಪ್ರವಾಾಸಿ ತಾಣ. ಇಲ್ಲಿ ವಿಪುಲ ಪರಂಪರೆಯ ತಾಣಗಳಿವೆ. ಆದರೆ ಜನ ಮಾತ್ರವಲ್ಲ ನಾಯಕರ ದೂರದೃಷ್ಟಿಯ ಕೊರತೆಯಿಂದ ಟೂರಿಸಂ ಎನ್ನುವುದು ಇಲ್ಲಿ ಶಾಪಗ್ರಸ್ತವಾಗಿದೆ. ಸಾವಿರಕಂಬದ ಬಸದಿ ಸಹಿತ ಹದಿನೆಂಟು ಬಸದಿ, ಜಿನಾಲಯಗಳು, ನಿಷಿಧಿಗಳು, ದೇವಾಲಯಗಳು, ಕೆರೆಗಳು, ನಿಸರ್ಗಧಾಮ, ಉದ್ಯಮ, ಪರಿಸರ ವೈಶಿಷ್ಟ್ಯ ಎಲ್ಲವೂ ಇದ್ದೂ ಉದಾಸೀನತೆ ಹೊದ್ದು ಮಲಗಿದ ಪರಿಸ್ಥಿತಿ ಇದೆ. ಎಲ್ಲವನ್ನೂ ಜೋಡಿಸಿ ಟೂರಿಸಂ ವಾತಾವರಣ ಸೃಷ್ಟಿಸುವುದು ಕಷ್ಟವೇನಲ್ಲ. ಕೋಟ್ಯಂತರ ರುಪಾಯಿ ಆರ್ಥಿಕತೆಗೂ ಇದು ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯಬಹುದು. ಇಲ್ಲಿನ ವ್ಯವಹಾರ, ಆರ್ಥಿಕತೆಯ ಚಿತ್ರಣವನ್ನೇ ಬದಲಾಗಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವುದು ಯಾರು ಎನ್ನುವ ಸ್ಥಿತಿಯಲ್ಲಿ ಮೂಡುಬಿದಿರೆ ಮೌನವಾಗಿ ರೋಧಿಸುತ್ತಲೇ ಇದೆ.--------------

ಮೂಡುಬಿದಿರೆಯ ಹಳೆಯ ಈ ತಾಲೂಕು ಕಟ್ಟಡ ಇತಿಹಾಸ ಮತ್ತು ಪರಂಪರೆಗೆ ಸಂಬಂಧಿಸಿದ್ದು, ಇಲ್ಲಿ ಮೂಡುಬಿದಿರೆಯ ಇತಿಹಾಸ ಮತ್ತು ಪರಂಪರೆಗೆ ಸಂಬಂಧಿಸಿದಂತೆ ಸಣ್ಣಮಟ್ಟಿನ ಸಾಂಸ್ಕೃತಿಕ ಸಂಗ್ರಹಾಲಯ, ಗ್ರಂಥಾಲಯ ಅಭಿವೃದ್ಧಿಪಡಿಸಿ ಅಧ್ಯಯನ ಕೇಂದ್ರವೊಂದನ್ನು ರೂಪಿಸಿದಲ್ಲಿ ಪರಂಪರೆಯ ಕಟ್ಟಡದ ಜೊತೆಗೆ ನಮ್ಮಸಂಸ್ಕೃತಿ-ಪರಂಪರೆಯನ್ನು ಬೆಳೆಸಿದಂತಾಗುತ್ತದೆ.। ಅಮರ್ ಕೋಟೆ, ಅಧ್ಯಕ್ಷರು, ಜವನೆರ್ ಬೆದ್ರ.

PREV

Recommended Stories

ಭವಿಷ್ಯದ ದೃಷ್ಟಿಯಿಂದ ಬೆಂಗ್ಳೂರು ಸಜ್ಜುಗೊಳಿಸಿ: ಮೋದಿ
ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು