ಉತ್ತಮ ನೇತೃತ್ವ, ಸಂಘಟನಾ ಕೌಶಲ್ಯದಿಂದ ಪಕ್ಷ ಗಟ್ಟಿ: ಸು. ರಾಮಣ್ಣ

KannadaprabhaNewsNetwork |  
Published : Jul 09, 2024, 12:46 AM IST

ಸಾರಾಂಶ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ವ್ಯಕ್ತಿ ಪೂಜೆ ಮಾಡದೇ, ರಾಷ್ಟ್ರ ಪೂಜೆ ಮಾಡುವ ಮತದಾರರಿಂದ ಕೂಡಿದ ಕ್ಷೇತ್ರವಾಗಿದೆ.

ಕುಮಟಾ: ದೇಶದಲ್ಲಿ ನಾವು ಧರ್ಮದ ಆಧಾರದ ಮೇಲೆ ಯಾವ ರಾಜನೀತಿಯನ್ನು ಬೆಳೆಸಿಕೊಂಡು ಬರುತ್ತಿದ್ದೇವೆಯೋ ಅದನ್ನು ಕಿತ್ತು ಹಾಕಲು ಜಗತ್ತಿನ ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಾಗದಂತೆ ಅದು ಗಟ್ಟಿಯಾಗಿ ಬೇರೂರಬೇಕಾದರೆ ನಮಗೆ ಅಷ್ಟೇ ಉತ್ತಮ ನೇತೃತ್ವ ಹಾಗೂ ಸಂಘಟನಾ ಕೌಶಲ್ಯ ಬೇಕು ಎಂದು ಆರ್‌ಎಸ್‌ಎಸ್ ರಾಜ್ಯ ಸಂಚಾಲಕ ಸು. ರಾಮಣ್ಣ ಹೇಳಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ವ್ಯಕ್ತಿ ಪೂಜೆ ಮಾಡದೇ, ರಾಷ್ಟ್ರ ಪೂಜೆ ಮಾಡುವ ಮತದಾರರಿಂದ ಕೂಡಿದ ಕ್ಷೇತ್ರವಾಗಿದೆ. ಹೀಗಾಗಿ ಕಾಗೇರಿ ಗೆಲುವಿಗೆ ಅನುಮಾನವಿರಲಿಲ್ಲ. ಇದೇ ಬಿಜೆಪಿ ಯಶಸ್ಸಿನ ಮೂಲಕಾರಣ. ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಎಲ್ಲ ರೀತಿಯ ಸಹಕಾರವನ್ನು ಇಲ್ಲಿ ಎಲ್ಲರೂ ಕೊಡುತ್ತಾ ಬಂದಿದ್ದಾರೆ. ವ್ಯಕ್ತಿಗತ ವರ್ಚಸ್ಸನ್ನೂ ಬೆಳೆಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಬಿಜೆಪಿಯು ಜನಸಂಘದ ಕಾಲದಿಂದ ಕೆಲಸ ಮಾಡಿಕೊಂಡು ಬಂದಿದೆ. ಗೆಲ್ಲಿಸಿದವರನ್ನು ಅಲಕ್ಷ್ಯ ಸಲ್ಲದು, ಕೃತಜ್ಞತೆ ಬೇಕು. ಈ ಕಾರಣಕ್ಕಾಗಿ ಇದು ಭವಿಷ್ಯದ ಸಂಕಲ್ಪದ ಸಮಾರಂಭ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗೆಲುವಿಗೆ ಕಾರಣೀಕರ್ತರಾದ ಎಲ್ಲ ಕಾರ್ಯಕರ್ತರಿಂದ ಉಪಕೃತನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ಮೂಲಕ ಋಣ ಸಂದಾಯ ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ಈ ಸರ್ಕಾರದಲ್ಲಿ ಒಂದು ರುಪಾಯಿ ಹೊಸ ಕೆಲಸ ಅಭಿವೃದ್ಧಿಗೆ ಬರುತ್ತಿಲ್ಲ. ಉತ್ತರ ಕನ್ನಡದಲ್ಲಿ ಅತಿವೃಷ್ಟಿಯಾಗಿದೆ, ಹಿಂದೆ ಮನೆಗೆ ನೀರು ನುಗ್ಗಿದರೂ ₹೧೦ ಸಾವಿರ ಪರಿಹಾರ ಕೊಡಬೇಕೆಂದು ಆದೇಶವಾಗಿತ್ತು, ನೀವೂ ಆದೇಶ ಮಾಡಿ ಎಂದು ಮುಖ್ಯಮಂತ್ರಿಗೆ ಹೇಳಿದರೆ, ಮಾಡುತ್ತೇನೆಂದು ಹೇಳುತ್ತಾರೆ. ಆದರೆ ಮಾಡಿಲ್ಲ. ಮಳೆಗೆ ಮನೆ ಬಿದ್ದರೆ ಹಿಂದೆ ಬಿಜೆಪಿ ಸರ್ಕಾರದಲ್ಲಿ ₹೫ ಲಕ್ಷ ಕೊಡುತ್ತಿದ್ದೆವು. ಈಗ ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅಡಿಯಲ್ಲಿ ನೀಡುವ ಹಣವನ್ನು ಮಾತ್ರ ನೀಡಬೇಕಿದೆ. ರಾಜ್ಯ ಸರ್ಕಾರ ಏನೂ ಕೊಡುತ್ತಿಲ್ಲ. ಹೇಳುತ್ತಾ ಹೋದರೆ ಮುಗಿಯದಿರುವಷ್ಟೂ ಸಮಸ್ಯೆಯನ್ನು ಜನರ ಮಧ್ಯೆ ನಿರ್ಮಾಣ ಮಾಡುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಶಾಸಕ ದಿನಕರ ಶೆಟ್ಟಿ, ಜೆಡಿಎಸ್‌ನ ಸೂರಜ ನಾಯ್ಕ ಇನ್ನಿತರರು ಮಾತನಾಡಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಡಾ. ಜಿ.ಜಿ. ಹೆಗಡೆ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಗೋವಿಂದ ನಾಯ್ಕ ಭಟ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಮಂಡಲ ಪ್ರಭಾರಿ ಆರತಿ ಗೌಡ, ಜಿ.ಎಸ್. ಗುನಗಾ, ಹೇಮಂತಕುಮಾರ ಗಾಂವಕರ, ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ ಇನ್ನಿತರರು ಇದ್ದರು.

ಬಿಜೆಪಿ ಮಂಡಲ ವತಿಯಿಂದ ಹಾಗೂ ವಿವಿಧ ಮೋರ್ಚಾ, ಸಂಘಟನೆಗಳ ವತಿಯಿಂದ ಸಂಸದ ಕಾಗೇರಿ ಅವರನ್ನು ಅಭಿನಂದಿಸಲಾಯಿತು. ಮಂಡಲದ ಅಧ್ಯಕ್ಷ ಜಿ.ಐ. ಹೆಗಡೆ ಸ್ವಾಗತಿಸಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಇತರರು ಇದ್ದರು.

ಪ್ರವಾಹ ಸಮಸ್ಯೆ ವೀಕ್ಷಣೆ...

ಅಭಿನಂದನಾ ಕಾರ್ಯಕ್ರಮದ ಬಳಿಕ ಶಿರಸಿಗೆ ಮರಳುವ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕತಗಾಲದಲ್ಲಿ ಇಳಿದು ಪ್ರವಾಹ ಸಮಸ್ಯೆ ವೀಕ್ಷಿಸಿ ಸಾರ್ವಜನಿಕರೊಂದಿಗೆ ಚರ್ಚಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರನ್ನು ಕರೆಸಿ, ಕೂಡಲೇ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮಕ್ಕೆ ಸೂಚಿಸಿದರು. ಮುಖ್ಯವಾಗಿ ಕುಮಟಾ-ಶಿರಸಿ ರಸ್ತೆ ಕಾಮಗಾರಿಯಡಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಭೂಮಾಲೀಕರಿಗೆ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಬೇಕು. ಇದರಿಂದ ರಸ್ತೆ ಕಾಮಗಾರಿ ನಡೆದು ಚಂಡಿಕಾ ಹೊಳೆಯಲ್ಲಿ ಪ್ರವಾಹದಿಂದ ಪದೇ ಪದೇ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಇನ್ನಿತರ ಬಹುಕಾಲದ ಸಮಸ್ಯೆಗಳು ಪರಿಹಾರಗೊಳ್ಳುವಂತಾಗುತ್ತದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸಿ ಕೋರ್ಟಲ್ಲಿ ಕೇಸ್‌ ವಿಲೇವಾರಿ ಬಾಕಿ : ಕೃಷ್ಣ ಕಿಡಿ
ಬೇಸಿಗೆ ಆರಂಭದಲ್ಲೇ ಕೆರೆಗಳು ಅರ್ಧಖಾಲಿ - 2268 ಕೆರೆಗಳಲ್ಲಿ ಶೇ.50 ನೀರೂ ಇಲ್ಲ