ದಾವಣಗೆರೆ: ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ 17ನೇ ವರ್ಷದ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾವಳಿ ಶಾಮನೂರು ಡೈಮಂಡ್ ಕಪ್ ಹಾಗೂ ಶಿವಗಂಗಾ ಕಪ್-2024 ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನ.26ರಿಂದ ಆರಂಭವಾಗಲಿವೆ ಎಂದು ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ತಿಳಿಸಿದರು.
ನೆರೆಯ ಶ್ರೀಲಂಕಾ ಇಲೆವೆನ್ ಹಾಗೂ ಭಾರತ ಇಲೆವೆನ್ ತಂಡಗಳ ಮಧ್ಯೆ ನ.30ರಂದು ಸಂಜೆ 7ಕ್ಕೆ ವಿಶೇಷ ಪಂದ್ಯ ನಡೆಯಲಿದೆ. ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ, ಕರ್ನಾಟಕದ ಆತಿಥೇಯ ದಾವಣಗೆರೆ, ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಒಟ್ಟು 50 ತಂಡ ಪಾಲ್ಗೊಳ್ಳಲಿದ್ದು, ಒಟ್ಟು 750ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವರು, ಪರ ಸ್ಥಳದ ತಂಡಗಳಿಗೆ ಟೀಶರ್ಟ್, ಊಟ, ವಸತಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ 5,05,555 ರು. ನಗದು ಬಹುಮಾನ, ಶಾಮನೂರು ಡೈಮಂಡ್ ಕಪ್ ಹಾಗೂ ದ್ವಿತೀಯ ಸ್ಥಾನಕ್ಕೆ 3,05,555 ರು. ನಗದು, ಶಿವಗಂಗಾ ಕಪ್ ಹಾಗೂ ತೃತೀಯ ಬಹುಮಾನವಾಗಿ 1,55,500 ರು. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಈ ಎಲ್ಲಾ ಪಂದ್ಯಗಳನ್ನು ಪರ ಊರು, ಜಿಲ್ಲೆ, ರಾಜ್ಯ, ವಿದೇಶಗಳಲ್ಲಿರುವವರೂ ವೀಕ್ಷಣೆ ಮಾಡುವಂತೆ ಯೂಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರ ಮಾಡಲಿದ್ದೇವೆ. ಒಟ್ಟು 30-35 ಲಕ್ಷ ರು. ವೆಚ್ಚದಲ್ಲಿ ಪಂದ್ಯಾವಳಿ ಸಂಘಟಿಸಲಾಗಿದೆ ಎಂದು ಮಾಹಿತಿ ನೀಡಿದರು.ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಮತ್ತು ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಎಚ್.ಮಹಾದೇವ, ಉಪಾಧ್ಯಕ್ಷ ಶಿವಗಂಗಾ ವಿ.ಶ್ರೀನಿವಾಸ, ಕಾರ್ಯದರ್ಶಿ ಕುರುಡಿ ಗಿರೀಶ್ ಸ್ವಾಮಿ, ಸಹ ಕಾರ್ಯದರ್ಶಿ ಜಯಪ್ರಕಾಶ ಗೌಡ, ಸುರೇಶ, ಶಾಂತಕುಮಾರ, ಹಾಲಪ್ಪ, ಕಾರ್ತಿಕ್ ಆನಂದರಾಜ, ಮಲ್ಲಿಕಾರ್ಜುನ ಪಾಟೀಲ, ಸವಿತಾ ಸಮಾಜದ ಮುಖಂಡ, ಹಿರಿಯ ವಕೀಲ ರಂಗಸ್ವಾಮಿ, ಪಿ.ಬಿ.ಪಾಟೀಲ, ರಾಘವೇಂದ್ರ, ಕ್ಯಾಂಟೀನ್ ಚಂದ್ರು ಇತರರು ಇದ್ದರು.
ಇದೇ ವೇಳೆ ಅಫಿಷಿಯಲ್ ತಂಡದ ಟೀಶರ್ಟ್‌ಗಳನ್ನು ದಿನೇಶ ಶೆಟ್ಟಿ ಬಿಡುಗಡೆ ಮಾಡಿದರು.12 ತಂಡ ಒಳಗೊಂಡ ಅಫಿಷಿಯಲ್ ಕಪ್ ಪಂದ್ಯಾವಳಿಯ ಚೀಟಿ ಎತ್ತುವ ಮೂಲಕ ಟೈಸ್ ಹಾಕಿದ್ದು, ಅದರಲ್ಲಿ ಮರ್ಚೆಂಟ್ಸ್ ತಂಡ ಹಾಗೂ ವರದಿಗಾರರ ಕೂಟದ ತಂಡ ನೇರವಾಗಿ ಕ್ವಾಟರ್ ಫೈನಲ್‌ಗೆ ಅರ್ಹತೆ ಪಡೆದವು.
ಕ್ರೀಡಾಪಟುಗಳು, ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಂಪನಿಗಳು, ಉದ್ಯಮಿಗಳು ಮಾಡಬೇಕು. ಪ್ರಸ್ತುತ ಕ್ರಿಕೆಟ್, ಕಬಡ್ಡಿ, ಬಾಸ್ಕೆಟ್ ಬಾಲ್, ಹಾಕಿ, ಫುಟ್‌ಬಾಲ್, ಅಥ್ಲೆಟಿಕ್ಸ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲೂ ಕ್ರೀಡಾಪಟುಗಳು ಸಾಧನೆ ಮಾಡುತ್ತಿದ್ದಾರೆ. ಅಂತಹ ಕ್ರೀಡೆ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.- ದಿನೇಶ ಕೆ.ಶೆಟ್ಟಿ, ಹಿರಿಯ ಕ್ರೀಡಾಪಟು, ಅಧ್ಯಕ್ಷರ, ದೂಡಾ