-ರಾಮರಾವ್ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆ, ಸೇವಾಲಾಲ್ ಮಹಾರಾಜ ಪ್ರೌಢ ಶಾಲಾ ವಾರ್ಷಿಕೋತ್ಸವ । ಸ್ನೇಹ ಸಮ್ಮೇಳನ ಉದ್ಘಾಟನೆ
---ಕನ್ನಡಪ್ರಭ ವಾರ್ತೆ ಚವಡಾಪುರ: ಅನೇಕರು ಮಠಗಳನ್ನು ಕಟ್ಟಿ ಬೆಳೆಸುವುದರತ್ತ ಚಿತ್ತ ನೆಟ್ಟರೆ ಗೊಬ್ಬರ ವಾಡಿ ತಾಂಡಾದ ಬಳಿರಾಮ್ ಮಹಾರಾಜರು ಶಿಕ್ಷಣ ಸಂಸ್ಥೆ ಕಟ್ಟಿಸಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣ ಕ್ರಾಂತಿ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಹೇಳಿದರು.
ಅಫಜಲ್ಪುರ ತಾಲೂಕಿನ ಗೊಬ್ಬೂವಾಡಿ ತಾಂಡಾದಲ್ಲಿರುವ ಸೇವಾಲಾಲ್ ವಿದ್ಯಾಪೀಠದ ಜಗದ್ಗುರು ರಾಮರಾವ್ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆ, ಸೇವಾಲಾಲ್ ಮಹಾರಾಜ ಪ್ರೌಢ ಶಾಲೆಯ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದುಳಿದ ಬಂಜಾರಾ ಸಮಾಜ ಮುನ್ನೆಲೆಗೆ ಬರಬೇಕಾದರೆ ಮಠ ಮಂದಿರಗಳಿಗಿಂದ ಶಿಕ್ಷಣ ಪಡೆಯುವುದು ಬಹಳ ಅವಶ್ಯಕವಾಗಿದೆ. ಈ ಕೆಲಸವನ್ನು ಬಳಿರಾಮ್ ಮಹಾರಾಜರು ಅರಿತು ಕಾರ್ಯರೂಪಕ್ಕೆ ತಂದಿದ್ದಾರೆ. ಅವರ ಸಂಕಲ್ಪ ಸಾಕಾರಕ್ಕೆ ನಾವು ಕೂಡ ಸದಾ ಸಹಕಾರ ನೀಡುತ್ತೇವೆ ಎಂದರು.ಬಳಿರಾಮ್ ಮಹಾರಾಜರು ಸಾನಿಧ್ಯ ವಹಿಸಿ ಮಾತನಾಡಿ, ನಾನು ಕೂಡ ಬಿಕಾಂ ಪದವಿಧರನಾಗಿದ್ದೇನೆ, ಪದವಿ ಬಳಿಕ ನನ್ನ ಒಲವು ಆಧ್ಯಾತ್ಮದ ಕಡೆ ವಾಲಿದ್ದರಿಂದ ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡಲಾಗಲಿಲ್ಲ. ಆದರೆ ನನ್ನ ಸಮುದಾಯದ ಬಡ ಮಕ್ಕಳು, ಇತರ ಸಮುದಾಯಗಳ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿ ಬದುಕು ಹಾಳು ಮಾಡಿಕೊಳ್ಳಬಾರದು.
ಹೀಗಾಗಿ ನಾನು ಮಠ ಮಂದಿರ ಕಟ್ಟುವುದಕ್ಕೆ ಹೆಚ್ಚು ಆಸಕ್ತಿ ತೋರಿದವನಲ್ಲ, ನಮ್ಮ ಮಠಕ್ಕೆ ಯಾವುದೇ ಆಸ್ತಿ ಇಲ್ಲ, ಐಶಾರಾಮಿ ಕಟ್ಟಡವಲ್ಲ, ಹುಲ್ಲು ಹಾಸಿಗೆಯ ಸಣ್ಣ ಮಠವಾಗಿದ್ದರೂ ಕೂಡ ಸಾಕಷ್ಟು ಭಕ್ತರು ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಭಕ್ತರ ಸಹಕಾರದಿಂದಲೇ ಇಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುತ್ತಿದ್ದೇನೆ.ಕಳೆದ 18 ವರ್ಷಗಳಿಂದ ಯಾರಿಂದಲೂ ಶುಲ್ಕ ಸಹ ಪಡೆಯದೆ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದೇವೆ. ಆದರೆ, 2 ವರ್ಷಗಳಿಂದ ಮಕ್ಕಳನ್ನು ಕರೆದೊಯ್ಯಲು, ತರಲು ವಾಹನದ ಡಿಸೇಲ್ ಖರ್ಚಿಗಾಗಿ ಮಾತ್ರ ಸ್ವಲ್ಪ ಪ್ರಮಾಣದ ಹಣ ಪಡೆದುಕೊಳ್ಳಲಾಗುತ್ತಿದೆ. ನಮ್ಮ ಸಂಸ್ಥೆ ಸರ್ಕಾರದ ಅಧೀನಕ್ಕೆ ಸೇರುವ ಎಲ್ಲಾ ಅರ್ಹತೆ ಹೊಂದಿದೆ ಹೀಗಾಗಿ ಶಾಸಕರು ನಮ್ಮ ಶಾಲೆಯನ್ನು ಅನುದಾನಿತ ಶಾಲೆಗಳ ಪಟ್ಟಿಯಲ್ಲಿ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ನಮ್ಮ ಶೈಕ್ಷಣಿಕ ಕ್ರಾಂತಿಯ ಸಂಕಲ್ಪಕ್ಕೆ ಶಕ್ತಿ ತುಂಬಿದಂತಾಗಲಿದೆ ಎಂದರು.
ಗುತ್ತಿಗೆದಾರ ಸಿದ್ದು ದೇವತ್ಕಲ್, ಬಿಜೆಪಿ ಮುಖಂಡ ನಾಮದೇವ ರಾಠೋಡ ಕರಹರಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಸಿದ್ದಾರ್ಥ ಬಸರಿಗಿಡ, ಮುಖ್ಯಗುರು ಸುಧೀರ ಜಾಧವ, ಅಂಬಾದಾಸ ಜಾಧವ, ಆನಂದರಾವ ನರಿಬೋಳಿ, ಜಬೀನಾ ಫಕ್ರೋದ್ದೀನ್, ದತ್ತು ರಾಠೋಡ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಪಾಲಕರು ಇದ್ದರು.