ಹುಬ್ಬಳ್ಳಿ: ಕಳೆದ 7 ದಶಕಗಳಿಂದ ನೀವು ಮಾಡುತ್ತಿರುವ ತಪಸ್ಸನ್ನು ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಅಂತ್ಯಗೊಳಿಸಲಾಗುತ್ತಿದೆ. ರಾಜ್ಯಾದ್ಯಂತ ಕೂಡ ಹಕ್ಕು ಪತ್ರ ವಿತರಿಸುವ ಕಾರ್ಯ ಹಂತ ಹಂತವಾಗಿ ಜರುಗುತ್ತಿದೆ. ಬಡವರ ಪರವಾದ ಸರ್ಕಾರ ನಮ್ಮದಾಗಿದೆ. ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ರಾಜ್ಯಾದ್ಯಂತ ಇರುವ ಸ್ಲಂಗಳ ಮತ್ತು ಆಶ್ರಯ ಬಡಾವಣೆಗಳ ಎಲ್ಲ ಅರ್ಹ ಫಲಾನುಭವಿಗಳಿಗೆ ಹಕ್ಕಪತ್ರ ವಿತರಣೆ ಕಾರ್ಯಕ್ರಮ ಈಗಾಗಲೇ ಆರಂಭವಾಗಿದೆ. ಸಮರೋಪಾದಿಯಲ್ಲಿ ಹಕ್ಕುಪತ್ರಗಳ ವಿತರಣೆಗೆ ಕ್ರಮವಹಿಸಲಾಗಿದೆ. ಈ ಮಧ್ಯೆ ಅನೇಕ ತಾಂತ್ರಿಕ ಸಮಸ್ಯೆಗಳ ನಡುವೆಯೂ ಕಾನೂನು ಚೌಕಟ್ಟಿನಲ್ಲಿಯೇ ಹಂತಹಂತವಾಗಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಮನೆ ಕೊಡಲಿಲ್ಲ. ನಾವು ಈಗಾಗಲೇ ರಾಜ್ಯದಲ್ಲಿ ಮೊದಲಿನ ಹಂತದಲ್ಲಿ ಸ್ಲಂ ಬೋರ್ಡ್ ವತಿಯಿಂದ ಕಳೆದ ವರ್ಷ 36,700 ಮನೆಗಳು ನಿರ್ಮಿಸಿ ಹಸ್ತಾಂತರ ಮಾಡಿದ್ದೇವೆ. ಈಗ ಶೀಘ್ರವಾಗಿ 2ನೇ ಹಂತದಲ್ಲಿ ಸ್ಲಂ ಬೋರ್ಡ್ ವತಿಯಿಂದ 32600 ಮನೆಗಳು ಹಸ್ತಾಂತರ ಮಾಡಲಿದ್ದೇವೆ ಎಂದರು.ಈ ವೇಳೆ ಪಾಲಿಕೆ ಸದಸ್ಯರಾದ ಬೀಬಿಮರಿಯಮ್ ಸೈಯದ್ ಸಲೀಂ ಮುಲ್ಲಾ, ಸ್ಲಂ ಬೋರ್ಡ್ ಅಧಿಕಾರಿಗಳಾದ ಪ್ರವೀಣಕುಮಾರ್, ಮುಖಂಡರಾದ ಸೈಯದ್ ಸಲೀಂ ಮುಲ್ಲಾ, ಪ್ರಭು ಪ್ರಭಾಕರ, ಅಲ್ತಾಫ್ ಮುಲ್ಲಾ, ಕಮಲವ್ವ ಹೊಸಮನಿ, ಶಿವಾನಂದ ದೊಡ್ಡಮನಿ, ಪರಮೇಶ ಕಾಳೆ, ಗಣೇಶ ದೊಡ್ಡಮನಿ ಸೇರಿದಂತೆ ಹಲವರಿದ್ದರು.