ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್ ವತಿಯಿಂದ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ 20ನೇ ವರ್ಷದ ಆರ್ಥಿಕ ನೆರವು ಕಾರ್ಯಕ್ರಮ ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್ ವತಿಯಿಂದ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ 20ನೇ ವರ್ಷದ ಆರ್ಥಿಕ ನೆರವು ಕಾರ್ಯಕ್ರಮ ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು. ಈ ವರ್ಷ ೧೧೮೨ ವಿದ್ಯಾರ್ಥಿಗಳಿಗೆ ೧,೧೫,೩೬,೦೦೦ ರು.ಗಳ ಸಹಾಯಧನವನ್ನು ವಿತರಿಸಲಾಯಿತು.ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ವಿದ್ಯಾರ್ಥಿಗಳಿಗೆ ಸಂದೇಶ ನೀಡುತ್ತಾ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಮುಂದೆ ಉತ್ತಮ ಅವಕಾಶಗಳು ತೆರೆದುಕೊಳ್ಳುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಾವು ಪಡೆದ ಸಹಾಯದಿಂದ ಶ್ರದ್ಧೆಯಿಂದ ಶಿಕ್ಷಣ ಪಡೆದು, ಒಳ್ಳೆಯ ಉದ್ಯೋಗಾವಕಾಶಗಳನ್ನು ಪಡೆದು, ತಾನು ಪಡೆದ ಸಹಾಯವನ್ನು ಮುಂದಿನ ಪೀಳಿಗೆಗೆ ದಾನದ ರೂಪದಲ್ಲಿ ತಲುಪಿಸಿದರೆ ಬದುಕು ಸಾರ್ಥಕವಾಗುತ್ತದೆ. ಲೌಕಿಕ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ವಿದ್ಯೆಯನ್ನು ಕಲಿತು ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಹಾರೈಸಿದರು.ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ವಿದ್ಯೆ ವಿನಯದಿಂದ ಶೋಭಿಸುತ್ತದೆ. ವಿದ್ಯಾರ್ಥಿಗಳು ವಿನಯ ಗುಣವನ್ನು ರೂಢಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಶ್ರೀಗಳು ಸಾಂಕೇತಿಕವಾಗಿ ೨೦ ವಿದ್ಯಾರ್ಥಿಗಳಿಗೆ ಚೆಕ್ ಮತ್ತು ೧೦ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪನ್ನು ವಿತರಿಸಿದರು.ಧಾರವಾಡ ವಿದ್ಯಾಪೋಷಕ್‌ನ ಸ್ಥಾಪಕ ವಿಶ್ವಸ್ಥ ಪ್ರಮೋದ್ ಕುಲಕರ್ಣಿ ಅವರಿಗೆ ಶ್ರೀಗಳು ಸ್ಮರಣಿಕೆ, ಅಭಿನಂದನಾ ಪತ್ರ ನೀಡಿ ಅನುಗ್ರಹಿಸಿದರು.ಅಭ್ಯಾಗತರಾಗಿ ಮುಂಬೈ ಒಎನ್‌ಜಿಸಿಯ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್, ಮಂಗಳೂರು ಪ್ರೇರಣಾ ಇನ್ಫೋಸಿಸ್‌ನ ರವಿರಾಜ ಬೆಳ್ಮ, ಉದ್ಯಮಿಗಳಾದ ಆನಂದ ಸಿ. ಕುಂದರ್ ಕೋಟ, ಹರೀಶ್ ರಾಯಸ್ ಬೆಂಗಳೂರು, ಮನೋಹರ ಎಸ್. ಶೆಟ್ಟಿ ಉಡುಪಿ, ಆನಂದ ಪಿ. ಸುವರ್ಣ, ಕೆ. ನಾಗರಾಜ ರಾವ್, ಉಡುಪಿಯ ವೈದ್ಯ ಡಾ. ಹರಿಶ್ಚಂದ್ರ, ಬ್ರಹ್ಮಾವರದ ವೈದ್ಯ ಡಾ. ರಂಜಿತ್ ಕುಮಾರ್ ಭಾಗವಹಿಸಿದ್ದರುಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ ವೇದಿಕೆಯಲ್ಲಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ವಿದ್ಯಾ ಪ್ರಸಾದ್ ಪ್ರತಿಜ್ಞಾವಿಧಿ ಬೋಧಿಸಿದರು. ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.