ಹಾವೇರಿ: ಹಾನಗಲ್ಲ ಮಾರ್ಗದಲ್ಲಿ ಸಮರ್ಪಕ ಬಸ್ ಸಂಚಾರಕ್ಕೆ ಆಗ್ರಹಿಸಿ ಪ್ರಯಾಣಿಕರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು. ಒಂದು ತಾಸಿಗೂ ಹೆಚ್ಚು ಕಾಲ ಬಸ್ ತಡೆದು ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಡಿಪೋ ಮ್ಯಾನೇಜರ್ ಪ್ರಶಾಂತ್ ಮಾತನಾಡಿ, ಹಾವೇರಿ - ಶಿರಸಿ ರಸ್ತೆ ಕಾಮಗಾರಿ ನಡೆದಿದ್ದು ಬಸ್ ಸಂಚಾರ ವಿಳಂಬವಾಗುತ್ತಿದೆ. ಎರಡು ದಿನ ಕಾಲಾವಕಾಶ ನೀಡಿ, ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಎರಡು ಹೆಚ್ಚುವರಿ ಬಸ್ ಓಡಿಸಲಾಗುವುದು ಎಂದರು. ಇದಕ್ಕೆ ಆಕ್ಷೇಪಿಸಿದ ಪ್ರಯಾಣಿಕರು, ಕಳೆದ ಆರು ತಿಂಗಳಿಂದ ಪೋನ್ ಮಾಡಿ ಹೇಳುತ್ತಿದ್ದೇವೆ, ಸಾಕಷ್ಟು ಬಾರಿ ಮೌಖಿಕವಾಗಿ ತಿಳಿಸಿದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡು, ವಿಭಾಗೀಯ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದರು.
ಈ ವೇಳೆಗೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರೂ ಸಾರಿಗೆ ಸಿಬ್ಬಂದಿ ಬಸ್ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಬಿಟ್ಟರೆ ಮಾತ್ರ ಪ್ರತಿಭಟನೆ ಹಿಂಪಡೆಯುವುದಾಗಿ ಪಟ್ಟು ಹಿಡಿದರು. ಹಾನಗಲ್ಲ ಮಾರ್ಗಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ ನಂತರ ಹಾಗೂ ಹೆಚ್ಚುವರಿ ಬಸ್ ಮತ್ತು ಸಕಾಲಕ್ಕೆ ಬಸ್ ಓಡಿಸಲು ಮನವಿ ಪತ್ರ ಬರೆದು ಸಲ್ಲಿಸಿ ಎರಡು ದಿನಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಿಂಪಡೆದರು.ಪ್ರತಿಭಟನೆಯಲ್ಲಿ ಪ್ರಯಾಣಿಕರಾದ ಸುಮಂಗಲಾ, ಮಂಜುಳಾ, ರಾಜೇಶ್ವರಿ, ರಜತ್, ನೂರ್ ಅಹ್ಮದ, ಚಿರಾಗ್, ನವೀನ್, ಚಲುವರಾಯ, ಹನುಮಂತ, ಬಸವರಾಜ ಸೇರಿದಂತೆ ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.