ಹುಲ್ಲುಗಾವಲು ನಿರ್ಮಾಣ: ಎಸಿಎಫ್ ನೋಟಿಸ್‌ಗಿಲ್ಲ ಕಿಮ್ಮತ್ತು

KannadaprabhaNewsNetwork |  
Published : Jul 28, 2025, 12:30 AM IST
ಎಸಿಎಫ್‌ ಸೂಚನೆಗೂ ಬಗ್ಗದ ಆರ್‌ಎಫ್‌ಒ. | Kannada Prabha

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯ ಅರಣ್ಯಾಧಿಕಾರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಸೂಚನೆಗೂ ಬಗ್ಗದೆ, ಟೆಂಡರ್‌ ಅವಧಿ ಮುಗಿದ ಬಳಿಕ ಹುಲ್ಲುಗಾವಲು ನಿರ್ಮಾಣದ ಕಾಮಗಾರಿ ಮಾಡಲಾಗಿದೆ. ಅರಣ್ಯ ಇಲಾಖೆ ಈ ವಿಷಯ ಗೊತ್ತಿದ್ದೂ ಮೌನವಹಿಸಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯ ಅರಣ್ಯಾಧಿಕಾರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಸೂಚನೆಗೂ ಬಗ್ಗದೆ, ಟೆಂಡರ್‌ ಅವಧಿ ಮುಗಿದ ಬಳಿಕ ಹುಲ್ಲುಗಾವಲು ನಿರ್ಮಾಣದ ಕಾಮಗಾರಿ ಮಾಡಲಾಗಿದೆ. ಅರಣ್ಯ ಇಲಾಖೆ ಈ ವಿಷಯ ಗೊತ್ತಿದ್ದೂ ಮೌನವಹಿಸಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನುಗು ವನ್ಯಜೀವಿ ವಲಯದ ವಡ್ಡನಹಳ್ಳ ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು ನಿರ್ಮಾಣದ ಕಾಮಗಾರಿ ಅರಣ್ಯ ಇಲಾಖೆ ನಿಗದಿಪಡಿಸಿರುವ ಡೇಟಾ ಸೀಟ್‌ ಪ್ರಕಾರ ಲಾಂಟಾನ ಹಾಗೂ ಇತರೆ ಕಳೆ-ಗಿಡಗಳನ್ನು ಕೂಲಿಗಾರರ ಮೂಲಕ ಬೇರು ಸಮೇತ ತೆಗೆಯುವ ಕಾಮಗಾರಿಯಾಗಿದ್ದರೂ ಏಳೆಂಟು ಹಿಟಾಚಿಗಳ ಮೂಲಕ ವಲಯ ಅರಣ್ಯಾಧಿಕಾರಿ ವಿವೇಕ್ ಕಾಮಗಾರಿ ನಡೆಸಿದ್ದಾರೆ ಎಂದು ಹೆಡಿಯಾಲ ಉಪ ವಿಭಾಗದ ಎಸಿಎಫ್‌ ಎ.ವಿ.ಸತೀಶ್‌ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ಅಲ್ಲದೆ ಅರಣ್ಯ ಇಲಾಖೆ ನಿಗಧಿ ಪಡಿಸಿದ ಡೇಟಾ ಸೀಟ್‌ನಲ್ಲಿ ಯಂತ್ರಗಳನ್ನು ಉಪಯೋಗಿಸಿಕೊಂಡು ಲಾಂಟಾನ ಹಾಗೂ ಇತರೆ ಕಳೆ-ಗಿಡಗಳನ್ನು ಬೇರು ಸಮೇತ ತೆಗೆಯಲು ಅವಕಾಶ ಇರುವುದಿಲ್ಲ. ಟೆಂಡರ್‌ ಪ್ರಕ್ರಿಯೆ ಕಳೆದ ೨೦೨೪-೨೫ ನೇ ಸಾಲಿನಲ್ಲಿಯೇ ಮುಕ್ತಾಯವಾಗಿದೆ ಎಂಬುದು ಗಮನಾರ್ಹ ವಿಚಾರ.

ಹುಲ್ಲುಗಾವಲು ನಿರ್ಮಾಣ ಕಾಮಗಾರಿ ಯಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂಬುದರ ಬಗ್ಗೆಯೂ ಅರಣ್ಯ ಇಲಾಖೆ ಕಚೇರಿಯಿಂದ ಎಸಿಎಫ್‌ಗೆ ಮಾಹಿತಿ ಇಲ್ಲ. ಆದರೂ ನಗು ವಲಯ ಅರಣ್ಯಾಧಿಕಾರಿ ಇಲಾಖೆಯ ಎಲ್ಲಾ ಕಾರ್ಯ ವಿಧಾನಗಳನ್ನು ಉಲ್ಲಂಘಿಸಿ, ಗುತ್ತಿಗೆದಾರರ ಹೆಸರಲ್ಲಿ ಕಾಮಗಾರಿ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸಿಎಫ್‌ ಸ್ಪಷ್ಟಪಡಿಸಿದ್ದಾರೆ.

ನುಗು ವಲಯದಲ್ಲಿ ಹೊಸದಾಗಿ ಹುಲ್ಲುಗಾವಲು ನಿರ್ಮಾಣ ಕಾಮಗಾರಿಗೆ ಮತ್ತು ಸ್ವಾಭಾವಿಕವಾಗಿ ಬೆಳೆದು ನಿಂತ ದಿಂಡಲ್‌, ಕಾರೆ, ಸೊಳ್ಳಿ ಮತ್ತು ಹಸಿ ಮುಳ್ಳುಗಳ ಮರಗಳು ಹೆಚ್ಚು ಪ್ರಮಾಣದಲ್ಲಿ ನಾಶವಾಗಿವೆ ಎಂದು ಎಸಿಎಫ್‌ ಎ.ವಿ.ಸುರೇಶ್‌ ನುಗು ವಲಯ ಅರಣ್ಯಾಧಿಕಾರಿ ವಿವೇಕ್‌ಗೆ ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದ್ದಾರೆ.

ನುಗು ವಲಯದಲ್ಲಿ ಹುಲ್ಲುಗಾವಲು ನಿರ್ಮಾಣದ ಕಾಮಗಾರಿ ನಡೆಯುವ ಬಗ್ಗೆ ವಲಯ ಅರಣ್ಯಾಧಿಕಾರಿ ಎಸಿಎಫ್‌ ಮಾಹಿತಿಯನ್ನೇ ನೀಡಿಲ್ಲ. ಎಸಿಎಫ್‌ ನುಗು ವಲಯದ ಕ್ಷೇತ್ರ ತಪಾಸಣೆಗೆ ತೆರಳುವಾಗ ಯಂತ್ರಗಳ ಸದ್ದು ಕೇಳಿದೆ. ಎಸಿಎಫ್‌ ಎ.ವಿ.ಸುರೇಶ್‌ ನೋಟಿಸ್‌ಗೆ ಕ್ಯಾರೆ ಎನ್ನದ ನುಗು ವಲಯ ಅರಣ್ಯಾಧಿಕಾರಿ ವಿವೇಕ್‌, ಯಂತ್ರಗಳ ಮೂಲಕ ೨೦ ರಿಂದ ೫೫ ಹೆಕ್ಟೇರ್‌ನಲ್ಲಿ ಅನೇಕ ಬಗೆಯ ಸಸ್ಯ ಪ್ರಬೇಧಗಳನ್ನು ನಾಶ ಮಾಡಿರುವ ಬಗ್ಗೆ ಚಿತ್ರ ಸಮೇತ ಎಸಿಎಫ್‌ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ನುಗು ವಲಯ ಅರಣ್ಯಾಧಿಕಾರಿ ಹೊಸದಾಗಿ ಹುಲ್ಲುಗಾವಲು ನಿರ್ಮಾಣದ ಕಾಮಗಾರಿ ನೆಪದಲ್ಲಿ ಅರಣ್ಯ ಪ್ರದೇಶವನ್ನು ನಾಶ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಎಸಿಎಫ್‌ ಎ.ವಿ.ಸುರೇಶ್‌ ಕಳೆದ ಏ.೧೭ ರಂದು ಪತ್ರ ಬರೆದಿದ್ದಾರೆ.

ಹೆಡಿಯಾಲ ಎಸಿಎಫ್‌ ಎ.ವಿ.ಸತೀಶ್‌ ಅವರು ನುಗು ಆರ್‌ಎಫ್‌ಒ ವಿವೇಕ್‌ ಮೇಲೆ ತನಿಖೆ ನಡೆಸಿ,ಕ್ರಮ ತೆಗೆದುಕೊಳ್ಳಬೇಕು ಎಂದು ಬರೆದ ಪತ್ರ ಕಸದ ಬುಟ್ಟಿಗೆ ಸೇರಿದೆ ಎಂದು ಹೆಸರೇಳಲಿಚ್ಚಿಸಿದ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ