ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲಾ ಕೇಂದ್ರವಾಗಿದ್ದರೂ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗುರಿಯಾಗಿದ್ದಾರೆ.ಜಿಲ್ಲಾ ಕೇಂದ್ರ ಕೋಲಾರದಲ್ಲಿ ಸಮರ್ಪಕ ರಸ್ತೆಗಳಿಲ್ಲ, ಎಲ್ಲೆಂದರಲ್ಲಿ ಕಸದ ರಾಶಿ, ಮಳೆಗಾಲದಲ್ಲಿ ಯುಜಿಡಿ ಕಾಲುವೆಗಳಲ್ಲಿ ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ಪಡುವ ಪಡಿಪಾಟಲು ಹೇಳತೀರದಾಗಿದೆ, ಇಷ್ಟೆಲ್ಲ ಸಮಸ್ಯೆಗಳು ಜಿಲ್ಲಾ ಕೇಂದ್ರದಲ್ಲಿ ತಾಂಡವವಾಡುತ್ತಿದ್ದರೂ ಕಣ್ಣು ಕಾಣದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮಟ್ಟದ ಅಧಿಕಾರಿಗಳು ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ, ಜ.೨೬ರಂದು ಗಣರಾಜ್ಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲು ಕೋಲಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಕಾಣಬಾರದೆಂಬ ಉದ್ದೇಶದಿಂದ ಕ್ಲಾಕ್ ಟವರ್ ವೃತ್ತದಿಂದ ಬಸ್‌ಸ್ಟ್ಯಾಂಡ್ ವೃತ್ತ, ಮೆಕ್ಕೆ ವೃತ್ತ, ಬಂಗಾರಪೇಟೆ ವೃತ್ತ, ಡ್ಯೂಂಲೈಟ್ ವೃತ್ತ ಮುಂತಾದ ಸರ್ಕಲ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳಿಗೆ ಕಳೆದ ೨ ದಿನಗಳಿಂದ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ.
ಕೋಲಾರ ನಗರದ ರಸ್ತೆಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳಿಂದ ಹಾಗೂ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಕೋಟ್ಯಾಂತರ ರು. ಅನುದಾನ ಬಂದಿದೆ ಎಂದು ಕೋಲಾರ ಶಾಸಕರು ಹೇಳುತ್ತಲೇ ಇದ್ದಾರೆ. ರಸ್ತೆ ಅಭಿವೃದ್ಧಿ ಕಾರ್ಯಗಳು, ಗುದ್ದಲಿ ಪೂಜೆಗಳು ನಡೆಯುತ್ತಲೇ ಇವೆ. ಆದರೆ ಕಾಮಗಾರಿಗಳ ವೇಗ ಕಡಿಮೆಯಾಗಿದ್ದು, ನಗರದಲ್ಲಿ ಗುಂಡಿಗಳು ಬಿದ್ದಿರುವ ರಸ್ತೆಗಳೇ ಹೆಚ್ಚಾಗಿವೆ.ಶಾಸಕ ಕೊತ್ತೂರು ಮಂಜುನಾಥ್ ಆಯ್ಕೆ ಆದ ಸಂದರ್ಭದಲ್ಲಿ ಕೆಲವೊಂದು ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಯಿತು. ಇನ್ನುಳಿದ ವಿವಿಧ ರಸ್ತೆಗಳನ್ನು ಡಾಂಬರೀಕರಣ ಮತ್ತು ಸಿಸಿ ರಸ್ತೆಗಳನ್ನು ಮಾಡುವುದಾಗಿ ಶಾಸಕರು ತಿಳಿಸಿದ್ದರು. ಆದರೆ ಡಾಂಬರೀಕರಣ ಪೂರ್ಣಗೊಂಡಿರುವ ಕೆಲವು ರಸ್ತೆಗಳನ್ನು ಪೈಪ್‌ಲೈನ್ ಮತ್ತು ಯು.ಜಿ.ಡಿ. ನೆಪದಲ್ಲಿ ನಗರಸಭೆಯವರು ಅಗೆದು ಹಾಳುಮಾಡುತ್ತಿದ್ದಾರೆ. ಇದರಿಂದ ಗುಂಡಿಗಳು ಬಿದ್ದು, ರಸ್ತೆಗಳು ಮತ್ತೆ ಹಾಳಾಗುತ್ತಿವೆ.
ಕೋಲಾರ ನಗರ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ, ಹಳೆ ಪೇಟೆ ಮತ್ತು ಬಡಾವಣೆಗಳಲ್ಲಿ ಇನ್ನೂ ರಸ್ತೆಗಳು ನಿರ್ಮಾಣ ಆಗಬೇಕಾಗಿದೆ. ಇದರ ಜೊತೆಗೆ ಚರಂಡಿಗಳು ನಿರ್ಮಾಣ ಆಗಬೇಕಿದೆ. ಜೊತೆಗೆ ರಾಜಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯ ವಿಲೇವಾರಿ ಆಗಬೇಕಾಗಿದೆ. ಮತ್ತು ಪ್ರಮುಖ ರಸ್ತೆಗಳಲ್ಲಿ ಕೆಟ್ಟು ನಿಂತಿರುವ ಬೀದಿ ದೀಪಗಳು ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.