ಹಿರೇಕೆರೂರು: ಮಳೆಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ತುಂಗಾ ಮೇಲ್ದಂಡೆ ಕಾಲುವೆ ಹಾಗೂ ಸರ್ವಜ್ಞ ಏತ ನೀರಾವರಿ ಯೋಜನೆಯ ಕೆರೆಗಳಿಗೆ ನೀರು ಹರಿಸಿ ರೈತರನ್ನು ಬದುಕಿಸುವ ಕಾರ್ಯ ಮಾಡಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದರು.ತಾಲೂಕಿನ ಬಾಳಂಬೀಡ ಗ್ರಾಮದ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಬರಗಾಲ ಬಂದಿದೆ. ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದರೂ ಬಿತ್ತಿದ ಬೆಳೆಗಳು ಸರಿಯಾಗಿ ಹುಟ್ಟಿಲ್ಲ, ಬಿತ್ತಿದ ಬೀಜ ಮತ್ತು ಗೊಬ್ಬರ ಸಂಪೂರ್ಣ ನಾಶವಾಗಿದೆ. ರೈತರು ತೊಂದರೆ ಅನುಭವಿಸುವಂತಾಗಿದೆ. ಕೆಲವು ಕಡೆ ಮೊದಲ ಮಳೆಗೆ ಬಿತ್ತನೆ ಮಾಡಿದ ಬೆಳೆಗಳು ಬಿಸಿಲಿನ ಬೇಗೆಗೆ ಬತ್ತುತ್ತಿವೆ. ಕೂಡಲೇ ಕರ್ನಾಟಕ ನಿರಾವರಿ ನಿಗಮದ ಅಧಿಕಾರಿಗಳು ಈಗಾಗಲೇ ಡ್ಯಾಂಗಳಲ್ಲಿ ನೀರು ಸಂಗ್ರವಾಗಿದೆ. ಅದರಲ್ಲಿಯೇ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಹರಿಸಿ ಕಾಲುವೆಯ ಅಕ್ಕ ಪಕ್ಕದಲ್ಲಿ ಇರುವ ರೈತರನ್ನು ಉಳಿಸುವ ಕೆಲಸ ಮಾಡಬೇಕು ಎಂದರು.ಕುಡಿಯುವ ನೀರಿನ ನೆಪ ಹೇಳಿಕೊಂಡು ಕಾಲುವೆಗೆ ನೀರು ಹರಿಸದೇ ಇದ್ದರೆ ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗುತ್ತದೆ. ಮುಂಬರುವ ದಿನಗಳಲ್ಲಿ ಮಳೆ ಬರಬಹುದು, ಆಗ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಕೂಡಲೇ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಹರಿಸಬೇಕು ಮತ್ತು ಸರ್ವಜ್ಞ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಬೇಕು, ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ಕೊಳವೆ ಬಾವಿಗಳಲ್ಲಿ ನೀರು ಅಧಿಕವಾಗಲು ಅನಕೂಲವಾಗುತ್ತದೆ. ಕೂಡಲೇ ನೀರು ಹರಿಸುವ ಕಾರ್ಯ ಮಾಡಿ ರೈತರನ್ನು ಬದುಕಿಸುವಂತಹ ಕಾರ್ಯ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಒಂದು ವೇಳೆ ಒಂದು ವಾರದೊಳಗೆ ನೀರು ಹರಿಸುವ ಕಾರ್ಯ ಮಾಡದೇ ಇದ್ದಲ್ಲಿ ನೀರಾವರಿ ಇಲಾಖೆಯ ಕಚೇರಿ ಎದುರಿಗೆ ಬೃಹತ್ ರೈತ ಸಮಾವೇಶ ಮಾಡಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಜಗದೀಶ ದೊಡ್ಡಗೌಡ್ರ, ಮಹೇಶ ಭರಮಗೌಡ್ರ, ಸಿ.ಎಸ್. ಚಳಗೇರಿ, ಚನ್ನಪ್ಪ ಕಿಟ್ಟದ, ಶಂಕರ ನಾಯ್ಕ ಇದ್ದರು.