ಆಸ್ಪತ್ರೆ, ಠಾಣೆಗೆ ಜಮೀನು ದಾನ ಮಾಡಿದ್ದ ಪಾಟೀಲರು

KannadaprabhaNewsNetwork |  
Published : Apr 03, 2024, 01:33 AM IST
ಸುನಗದ ಎಸ್.ಬಿ.ಪಾಟೀಲ | Kannada Prabha

ಸಾರಾಂಶ

ಬಾಗಲಕೋಟೆ: 1967ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿದಿತ್ತು. ಬಿಜಾಪುರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸುನಗದ ಎಸ್.ಬಿ. ಪಾಟೀಲರನ್ನು ಎರಡನೇ ಬಾರಿಗೆ ಸಂಸತ್ತಿಗೆ ಕಳಿಸಿದ ಕೀರ್ತಿ ಇಲ್ಲಿನ ಮತದಾರ ಸಲ್ಲುತ್ತದೆ.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷದ ಪರ ಅಲೆಯಿರುವ, ದೇಶ ನೆಹರು ಕುಟುಂಬದ ಬಿಗಿ ಹಿಡಿತದಲ್ಲಿದ್ದ ಕಾಲವದು. ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಪರವಾದ ಅಭಿಮಾನ ಜೊತೆಗೆ ಆ ಪಕ್ಷದಲ್ಲಿರುವ ಮುಂಚೂಣಿ ನಾಯಕರ ಮೇಲೆ ದೇಶದ ಜನತೆಯ ಪರಾಕಾಷ್ಟೆಯಲ್ಲಿತ್ತು. 1967ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿದಿತ್ತು. ಈ ಸಂದರ್ಭದಲ್ಲಿ ಬಿಜಾಪುರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸುನಗದ ಎಸ್.ಬಿ. ಪಾಟೀಲರನ್ನು ಎರಡನೇ ಬಾರಿಗೆ ಸಂಸತ್ತಿಗೆ ಕಳಿಸಿದ ಕೀರ್ತಿ ಇಲ್ಲಿನ ಮತದಾರರದ್ದು. 1967ರಲ್ಲಿ ವಿಜಯಪುರ ದಕ್ಷಿಣ ಲೋಕಸಭೆಗೆ (ಸದ್ಯ ಬಾಗಲಕೋಟೆ) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿತ್ತು. ಎದುರಾಳಿಗಳ ಪ್ರಬಲ ಪೈಪೋಟಿ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸುನಗದ ಎಸ್.ಬಿ.ಪಾಟೀಲರು ನಿರಾಯಾಸವಾಗಿ ಗೆಲುವು ಕಂಡಿದ್ದರು.

ವಿಜಯಪುರ ದಕ್ಷಿಣ ಲೋಕಸಭೆ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಗುಳೇದಗುಡ್ಡ ಅಂದಿನ ಧಾರವಾಡ ಜಿಲ್ಲೆಯ ರೋಣ ಸೇರಿ 8 ವಿಧಾನಸಭಾ ಕ್ಷೇತ್ರಗಳು ವಿಜಯಪುರ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಗೊಂಡಿತ್ತು.

ಸಂಸದರಾದ ಸಂದರ್ಭದಲ್ಲಿ ಅಪಾರ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದ ಪಾಟೀಲರು ಆಸ್ಪತ್ರೆ ಮತ್ತು ಪೊಲೀಸ್‌ ಠಾಣೆ ನಿರ್ಮಾಣಕ್ಕಾಗಿ ಸ್ವಂತ ಭೂಮಿ ದಾನ ಮಾಡುವುದರ ಜೊತೆಗೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಬಿ.ಡಿ.ಜತ್ತಿ ಹಾಗೂ ವೀರೇಂದ್ರ ಪಾಟೀಲರನ್ನು ಕರೆಸಿ ಗೌರವಿಸಿದ್ದರು. 1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸುನಗದ ಎಸ್.ಬಿ.ಪಾಟೀಲರು 1,83,984 ಮತ ಪಡೆದು ಎರಡನೇ ಬಾರಿ ಆಯ್ಕೆಯಾದರೆ, ಜನಸಂಘದಿಂದ ಸ್ಪರ್ಧಿಸಿದ್ದ ಸಾರಿಗೆ ಉದ್ಯಮಿ ಎನ್.ಕೆ. ಭಾಟಿಯಾ 57,315 ಮತ ಪಡೆದರೆ, ಬಾಗಲಕೋಟೆಯ ಎ.ಡಿ.ತೊಂಡಿಹಾಳ 58,304 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದರು. ಅಂದಿನ ಚುನಾವಣೆಯಲ್ಲಿ 3,16,256 ಮತಗಳು ಚಲಾವಣೆಯಾಗಿದ್ದವು. ಶೇ.66.98ರಷ್ಟು ಮತದಾನವಾಗಿತ್ತು. ಎಸ್‌.ಬಿ. ಪಾಟೀಲರು 1,25,681 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಪಾಟೀಲರದು ಸರಳ ವ್ಯಕ್ತಿತ್ವ:

ಸುನಗ ಗ್ರಾಮದ ಮಧ್ಯಮ ಕುಟುಂಬದಿಂದ ಬಂದಿದ್ದ ಎಸ್.ಬಿ.ಪಾಟೀಲರು 1945ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲು ಕರಪತ್ರ ಹಂಚಿ ಜೈಲು ಸೇರಿದ್ದರು. ಗಾಂಧೀಜಿ ಆತ್ಮಿಯ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಇವರು ಗಾಂಧೀಜಿ ಹತ್ಯೆಯಾದಾಗ ದೆಹಲಿಗೆ ತೆರಳಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಬರುವಾಗ ಚಿತಾಭಸ್ಮವನ್ನು ತಂದು ಪೂಜೆ ಸಲ್ಲಿಸಿ ಗ್ರಾಮದ ಮಧ್ಯೆ ಗುಂಡಿತೋಡಿ ಅದರ ಮೇಲೆ ಬೇವಿನ ಮರ ನೆಟ್ಟಿದ್ದರು. ಅದು ಈಗಲೂ ಗಾಂಧಿ ಮುತ್ಯಾನ ಕಟ್ಟಿ ಎಂದು ಪ್ರಸಿದ್ಧವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ