- 150ನೇ ವರ್ಷದ ಸಂಭ್ರಮಾಚರಣೆ, ಬಹಿರಂಗ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ
ಕನ್ನಡಪ್ರಭ ವಾರ್ತೆ ಹರಿಹರ
ವಂದೇ ಮಾತರಂ ರಾಷ್ಟ್ರವನ್ನು ತಾಯಿಯಾಗಿ ಕಾಣುವ ಭಾರತೀಯ ಚಿಂತನೆ ಹೊಂದಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಸಂಜೆ ಸನಾತನ ಸಿಂಧು ಹರಿಹರ ಏರ್ಪಡಿಸಿದ್ದ ವಂದೇ ಮಾತರಂ ರಾಷ್ಟ್ರಭಕ್ತಿ ಗೀತೆಯ 150ನೇ ವರ್ಷದ ಸಂಭ್ರಮಾಚರಣೆ, ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಗಲ್ಲಿಗೇರಲು ಹೊರಟ ಕ್ರಾಂತಿಕಾರರ ತುಟಿಗಳಲ್ಲಿ ವಂದೇ ಮಾತರಂ ಇತ್ತು. ಲಾಠಿ, ಗುಂಡಿನ ಭಯಕ್ಕಿಂತಲೂ ದೊಡ್ಡ ಧೈರ್ಯವನ್ನು ಈ ಗೀತೆ ನೀಡಿತ್ತು ಎಂದರು.
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕೆಲವು ಪದಗಳು ಕೇವಲ ಶಬ್ದಗಳಾಗಿರಲಿಲ್ಲ. ಅವು ಜನಸಾಗರವನ್ನು ಅಲೆದಾಡಿಸಿದ ಘೋಷಣೆಗಳಾಗಿದ್ದವು. ಅಂತಹ ಘೋಷಣೆಗಳ ಪೈಕಿ ‘ವಂದೇ ಮಾತರಂ’ ಅತ್ಯಂತ ಶಕ್ತಿಶಾಲಿ ಗೀತೆ ಭಾರತೀಯರನ್ನು ರಾಷ್ಟ್ರಚಿಂತನೆಯ ಒಂದೇ ಸೂತ್ರದಲ್ಲಿ ಕಟ್ಟಿದ ಮಹಾಮಂತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.ಭಾರತ ಆಕ್ರಮಿಸಿದ್ದ ಬ್ರಿಟಿಷರ ವಿರುದ್ಧ ದೇಶಭಕ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ಬರೆದ ವಂದೇ ಮಾತರಂ ಹಿಂದೂಗಳ ಎದೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿತ್ತು. ದೇಶ ಅಭಿವೃದ್ಧಿ ಫಥದತ್ತ ಸಾಗುತ್ತಿದೆ. ಅನ್ಯ ದೇಶಗಳಿಗೆ ಭಾರತ ಹೆದರುವ ಹಂಗೆ ಇಲ್ಲ. ಅಂಥವರಿಗೆಲ್ಲ ತಕ್ಕ ಉತ್ತರ ನೀಡುವುದೆ ಭಾರತದ ಶಕ್ತಿ. ಅಮೇರಿಕಾ ಚೀನಾವನ್ನು ಬಿಟ್ಟರೆ ಮುಂದೇ ಸಾಗುತ್ತಿರುವ ದೇಶವೇ ಭಾರತ. ಪ್ರಪಂಚವೇ ನಮ್ಮತ್ತ ನೋಡುವಂತೆ ಆಗಿದೆ. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ವಂದೇ ಮಾತರಂ ಘೋಷಣೆ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡುವ ಶಕ್ತಿಯ ಮೂಲವಾಗಿತ್ತು. ಅಂತಹ ಪವಿತ್ರ ಗೀತೆಯನ್ನು ವಿವಾದದ ವಸ್ತುವಾಗಿಸುವುದು ನಮ್ಮ ಇತಿಹಾಸದ ಮೇಲಿನ ಅಪಮಾನ ಎಂದು ಅಭಿಪ್ರಾಯಪಟ್ಟರು.
ಯುವಜನತೆ ದೇಶದ ಇತಿಹಾಸ ತಿಳಿದುಕೊಳ್ಳಬೇಕು. ವಂದೇ ಮಾತರಂ ಪಠ್ಯದಲ್ಲಷ್ಟೇ ಉಳಿಯಬಾರದು. ಅದು ಬದುಕಿನಲ್ಲಿ ಪ್ರತಿಫಲಿಸಬೇಕು. ರಾಷ್ಟ್ರಭಕ್ತಿ ಘೋಷಣೆಯಲ್ಲ, ಅದು ಕರ್ತವ್ಯ. ಅದನ್ನು ಪಠ್ಯ ಪುಸ್ತಕಗಳ ಮೂಲಕ ಬೋಧಿಸಬೇಕಿದೆ ಎಂದು ಹೇಳಿದರು.ಶಿಕ್ಷಣ ಸಂಸ್ಥೆಗಳು ರಾಷ್ಟ್ರಚಿಂತನೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಮಕ್ಕಳಿಗೆ ವಂದೇ ಮಾತರಂ ಹಾಡಿಸುವುದರ ಜೊತೆಗೆ ಅದರ ಅರ್ಥ, ಅದರ ಹಿಂದೆ ಇರುವ ತ್ಯಾಗ ಮತ್ತು ಇತಿಹಾಸವನ್ನು ತಿಳಿಸಬೇಕು. ಅದೇ ನಿಜವಾದ 150ನೇ ವರ್ಷಾಚರಣೆಗೆ ಅರ್ಥಪೂರ್ಣ ಗೌರವ ಎಂದು ಸಲಹೆ ನೀಡಿದರು.
150 ವರ್ಷಗಳ ಹಿಂದೆಯೇ ಭಾರತೀಯರನ್ನು ಒಂದೇ ಭಾವನೆಯಲ್ಲಿ ಕಟ್ಟಿದ ವಂದೇ ಮಾತರಂ, ಇಂದಿಗೂ ಅದೇ ಶಕ್ತಿಯನ್ನು ಹೊಂದಿದೆ. ಭಾಷೆ, ಜಾತಿ, ಮತಗಳ ಭೇದ ಮರೆಸಿ ‘ನಾವು ಭಾರತೀಯರು’ ಎಂಬ ಭಾವನೆ ಮೂಡಿಸುವ ಸಾಮರ್ಥ್ಯ ಈ ಗೀತೆಗೆ ಇದೆ. ಅದಕ್ಕಾಗಿಯೇ ವಂದೇ ಮಾತರಂ ಕೇವಲ ಇತಿಹಾಸವಲ್ಲ; ಅದು ಇಂದಿಗೂ ಜೀವಂತ ರಾಷ್ಟ್ರಚಿಂತನೆಯ ಧ್ವನಿಯಾಗಿದೆ ಎಂದರು.ಶಾಸಕ ಬಿ.ಪಿ. ಹರೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನಾತನ ಸಿಂಧು ಹರಿಹರ ಅಧ್ಯಕ್ಷರಾದ ಡಾ. ಆರ್.ಆರ್. ಖಮಿತ್ಕರ್, ಸದಸ್ಯರಾದ ನ್ಯಾಯವಾದಿ ವೀರೇಶ ಅಜ್ಜಣ್ಣನವರ, ಖಜಾಂಚಿ ಪ್ರಕಾಶ ಕೋಳೂರು, ಅಭಿಯಂತ ಶಿವಪ್ರಕಾಶ ಶಾಸ್ತ್ರಿ, ಕಾಂತರಾಜ, ಸುಂದರೇಶ ಇದ್ದರು. 155 ಮಹಿಳೆಯರು ಸುಮಧುರ ಕಂಠದಿಂದ ವಂದೇ ಮಾತರಂ ಗೀತೆಯನ್ನು ಹಾಡಿದರು. ಪೊಲೀಸರು ಬಂದೋ ಬಸ್ತ್ ಏರ್ಪಡಿಸಿದ್ದರು.
- - --18ಎಚ್.ಆರ್.ಆರ್ 01:
ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲಿ ಮಾತನಾಡಿದರು.