- ಅಪೂರ್ವ ರೆಸಾರ್ಟ್‌ನಲ್ಲಿ ಉದ್ಯಮಿ ಅಣಬೇರು ರಾಜಣ್ಣ ಅಭಿನಂದನಾ ಸಮಾರಂಭ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಇಂದಿನ ದೇಶಕ್ಕೆ ರಾಷ್ಟ್ರನಿಷ್ಠೆ ಮತ್ತು ಸಂವಿಧಾನ ಆಶಯಗಳಿಗೆ ಬದ್ಧರಿರುವ ಜನಪ್ರತಿನಿಧಿಗಳು ಬೇಕಾಗಿದ್ದಾರೆ. ಪ್ರಜ್ಞಾವಂತ ಧರ್ಮಗುರುಗಳು, ಪ್ರಾಮಾಣಿಕ ಆಡಳಿತ ನಡೆಸುವ ಅಧಿಕಾರಿಗಳು, ಸಮರ್ಪಣಾ ಭಾವದ ಸಮಾಜ ಸೇವಕರು ಬೇಕಾಗಿದ್ದಾರೆ. ಆಮಿಷಗಳಿಗೆ ಬಲಿಯಾಗದ ಮತದಾರರು ಇಂದಿನ ತುರ್ತು ಅಗತ್ಯವಾಗಿದ್ದಾರೆ ಎಂದು ನಾಡೋಜ ಗೊ.ರು.ಚನ್ನಬಸಪ್ಪ ಹೇಳಿದರು.
ನಗರದ ಹೊರವಲಯದ ಬಾಡಾ ಕ್ರಾಸ್ ಬಳಿಯ ಅಪೂರ್ವ ರೆಸಾರ್ಟ್‌ನಲ್ಲಿ ಮಂಗಳವಾರ ಸಂಜೆ ಉದ್ಯಮಿ ಅಣಬೇರು ರಾಜಣ್ಣ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಭಾರತದಲ್ಲಿ ಸಾಕಷ್ಟು ಮಠಗಳು, ದೇವಸ್ಥಾನ, ಮಸೀದಿ, ಚರ್ಚ್‌ಗಳಿದ್ದರೂ ದೇಶವಾಸಿಗಳು ನಿಕೃಷ್ಠ ಬದುಕು ಸಾಗಿಸುತ್ತಿದ್ದಾರೆ. ಇದು ಏಕೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣೆ ಗೆಲವು, ಕ್ರೀಡೆಯಲ್ಲಿ ಪದಕ ಅಥವಾ ಪ್ರಶಸ್ತಿ ಪಡೆದಾಗ ವಿಜೇತರನ್ನು ಅಭಿನಂದಿಸುತ್ತೇವೆ. ಆದರೆ ರಾಜಣ್ಣರಿಗೆ ಇವು ಯಾವುದು ಅನ್ವಯಿಸಲ್ಲ. ಕೇವಲ 80 ವರ್ಷ ವಯಸ್ಸಾಗಿದ್ದಕ್ಕೆ ಮಾತ್ರವಲ್ಲ, ಅವರು ಜೀವನದಲ್ಲಿ ಸಾಧಿಸಿದ ಮಹಾನ್ ಕಾರ್ಯಗಳಿಗಾಗಿ, ಅವರು ಸಲ್ಲಿಸಿದ ಸಾಮಾಜಿಕ ಸೇವೆಗಾಗಿ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಬದುಕಿಗಾಗಿ ಹಾಗೂ ಶರಣ ಸಂಸ್ಕೃತಿಗಾಗಿ ನಾವು ಅವರನ್ನು ಅಭಿನಂದಿಸುತ್ತಿದ್ದೇವೆ. ಇದು ಅವರ ಅಭಿಮಾನಿಗಳು ಮತ್ತು ಕುಟುಂಬದವರ ಒತ್ತಾಸೆಯಾಗಿದೆ, ರಾಜಣ್ಣರ ಸ್ವಂತ ಅಪೇಕ್ಷೆಯಲ್ಲ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ಅಣಬೇರು ರಾಜಣ್ಣ ದಲ್ಲಾಳಿ ವ್ಯಾಪಾರದಿಂದ ಹಿಡಿದು ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಬೆಳೆದ ಅವರ ಪರಿಶ್ರಮ ಮೆಚ್ಚುವಂಥದ್ದು. ದಶಕದಿಂದ ಮಹಾಸಭಾ ಉಪಾಧ್ಯಕ್ಷರಾಗಿ ರಾಜ್ಯಕ್ಕೂ ಸಮಾಜಕ್ಕೂ ರಾಜಣ್ಣ ನೀಡುತ್ತಿರುವ ಸೇವೆ ಅಮೂಲ್ಯ. ಅವರ ಜೀವನ ಎಲ್ಲರಿಗೂ ಆದರ್ಶವಾಗಿದೆ. ದೀರ್ಘಕಾಲ ಬಾಳಲಿ ಮತ್ತು ಅವರ ಬದುಕು ಸದಾ ನಮಗೆಲ್ಲ ಸ್ಫೂರ್ತಿಯ ಚಿಲುಮೆಯಾಗಲಿ ಎಂದು ಶುಭ ಹಾರೈಸಿದರು.ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಹಿಸಿದ್ದರು.
ಮಾಜಿ ಶಾಸಕ ರುದ್ರೇಗೌಡ, ಚಿಂತಕ ಚಟ್ನಳ್ಳಿ ಮಹೇಶ್, ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ವಡ್ನಾಳ್ ರಾಜಣ್ಣ, ವರ್ತಕ ಎಚ್.ಓಂಕಾರಪ್ಪ, ಅರಕೆರೆ ಮಲ್ಲೇಶಪ್ಪ, ಬೆನಕಪ್ಪ, ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಗಣ್ಯರು, ಅಭಿಮಾನಿಗಳು ಇತತರು ಭಾಗವಹಿಸಿದ್ದರು.- - -
(ಕೋಟ್) ಅಣಬೆ ಎಂದರೆ ಪ್ರೋಟಿನ್ ಹೆಚ್ಚಿರುವಂತಹದ್ದು. ಆ ಅಣಬೆಯ ಬೇರು ಅಣಬೇರು ರಾಜಣ್ಣ ಎಂದು ಬಣ್ಣಿಸಿದರು. ಮನುಷ್ಯ ಎಷ್ಟು ದಿನ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ, ಆತ ಏನು ಸಾಧನೆ ಮಾಡಿದ ಎನ್ನುವುದು ಮುಖ್ಯ. ರಾಜಣ್ಣ ಗ್ರಾಮೀಣ ಪ್ರದೇಶದಿಂದ ಬಂದರೂ ಉದ್ಯಮಿಯಾಗಿ ಯಶಸ್ಸು ಗಳಿಸಿದ್ದಾರೆ. ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರು ನೂರು ವರ್ಷ ಬಾಳಲಿ- ಬಿ.ಸಿ. ಪಾಟೀಲ್, ಮಾಜಿ ಸಚಿವ
- - --16ಕೆಡಿವಿಜಿ42: ದಾವಣಗೆರೆಯಲ್ಲಿ ಉದ್ಯಮಿ ಅಣಬೇರು ರಾಜಣ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.