ಸೇನೆ ಸೇರಲು ದೇಶಪ್ರೇಮ, ಸೇವಾ ಮನೋಭಾವ ಅಗತ್ಯ: ಕ್ಯಾ.ಸುಧೀರ್‌

KannadaprabhaNewsNetwork |  
Published : Jul 31, 2024, 01:10 AM IST
ಕ್ಯಾ. ಸುಧೀರ್‌ ಜಿ. ಅಮೀನ್‌ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಅಗ್ನಿಪಥ್ ಉತ್ತಮ ಯೋಜನೆ. ರಾಜಕೀಯ ಕಾರಣಕ್ಕಾಗಿ ಕೆಲವರ ವಿರೋಧ ಇರಬಹುದು ಎಂದು ಕ್ಯಾಪ್ಟನ್‌ ಸುಧೀರ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸೇನೆಗೆ ಸೇರ ಬಯಸುವ ಯುವಕರು ದೇಶಪ್ರೇಮ, ಸೇವಾ ಮನೋಭಾವನೆ ಹಾಗೂ ದೃಢವಾದ ಮಾನಸಿಕ ಸಿದ್ಧತೆ ಹೊಂದಿರುವುದು ಅಗತ್ಯ ಎಂದು ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ. ಅಮೀನ್ ಹೇಳಿದ್ದಾರೆ.

ಮಂಗಳವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಭಾರತೀಯ ವಾಯು ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು, ಅದರ ಅನುಭವ ವಿಭಿನ್ನ. ಸೇನಾ ಸಮವಸ್ತ್ರದ ಮೇಲಿನ ಗೌರವ ಮತ್ತು ಸೇವಾ ಮನೋಭಾವ ಸೇನೆಗೆ ಸೇರುವಂತೆ ಆಕರ್ಷಿಸಿತು. ಕಾಲೇಜು ದಿನಗಳಲ್ಲಿ ಎನ್‌ಸಿಸಿ ಸೇರಿದ್ದು ಮತ್ತಷ್ಟು ಪ್ರೇರಣೆ ದೊರೆಯಿತು. ಪದವಿ ಮುಗಿದು ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಾಯು ಸೇನೆಗೆ ಆಯ್ಕೆಯಾಗಿದ್ದೆ ಎಂದರು.ವಿಶ್ವದ ಅತಿ ದೊಡ್ಡ ಹೆಲಿಕಾಪ್ಟರ್‌ನಲ್ಲಿ ಕೆಲಸ ಮಾಡುವ ಅವಕಾಶ ದೊರಕಿತ್ತು. ಈ ಹೆಲಿಕಾಪ್ಟರ್‌ನಲ್ಲಿ ಬುಲ್ಡೋಜರ್ ಕೊಂಡೊಯ್ದು ಈಶಾನ್ಯ ಭಾರತದ ಕೆಲವು ದುರ್ಗಮ ಪ್ರದೇಶಗಳಲ್ಲಿ ರಸ್ತೆ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಅಗ್ನಿಪಥ್ ಉತ್ತಮ ಯೋಜನೆ. ರಾಜಕೀಯ ಕಾರಣಕ್ಕಾಗಿ ಕೆಲವರ ವಿರೋಧ ಇರಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಇದ್ದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಕೋಶಾಧಿಕಾತಿ ವಿಜಯ ಕೋಟ್ಯಾನ್ ನಿರೂಪಿಸಿದರು.ರಾಷ್ಟ್ರಪತಿ, ಪ್ರಧಾನಿಗಳಿಗೆ ಬೆಂಗಾವಲು

ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣ್, ಶಂಕರದಯಾಳ್ ಶರ್ಮ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಪ್ರಧಾನ ಮಂತ್ರಿಗಳಾಗಿದ್ದ ವಾಜಪೇಯಿ, ದೇವೇಗೌಡ, ಐ.ಕೆ. ಗುಜ್ರಾಲ್, ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್, ಮುಲಾಯಂ ಸಿಂಗ್ ಯಾದವ್, ಸಂಸದೆಯಾಗಿದ್ದ ಪೂಲನ್ ದೇವಿ ಮುಂತಾದವರನ್ನು ಸೇನಾ ಹೆಲಿಕಾಪ್ಟರ್‌ಗಳಲ್ಲಿ ಕರೆದೊಯ್ಯುವ ಸಂದರ್ಭ ಅವರ ಜತೆ ಬೆರೆಯುವ ಅವಕಾಶ ಲಭಿಸಿತ್ತು. ಪೂಲನ್ ದೇವಿಯವರಿಂದ ಪಡೆದ ಆಟೋಗ್ರಾಫ್ ಈಗಲೂ ಮನೆಯಲ್ಲಿದೆ ಎಂದು ಸುಧೀರ್ ಜಿ. ಅಮೀನ್ ನೆನಪಿಸಿಕೊಂಡರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ