ಪಟ್ಟದೇವರ ಕನ್ನಡದ ಉಳಿವಿನ ಹೋರಾಟ ಸ್ಮರಣೀಯ

KannadaprabhaNewsNetwork |  
Published : Aug 23, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಉಳಿವಿಗಾಗಿ ಭಾಲ್ಕಿಯ ಲಿಂಗೈಕ್ಯ ಡಾ. ಚೆನ್ನಬಸವ ಪಟ್ಟದೇವರು ನಡೆಸಿದ ಹೋರಾಟ ಸ್ಮ್ರರಣೀಯವೆಂದು ಪ್ರಾಧ್ಯಾಪಕ ಡಾ.ಬಿ.ವಿ. ಮಂಜುನಾಥ ಅಭಿಪ್ರಾಯಪಟ್ಟರು.

-ಪ್ರಾಧ್ಯಾಪಕ ಡಾ.ಬಿ.ವಿ. ಮಂಜುನಾಥ ಅಭಿಪ್ರಾಯ । ಅನುಭಾವ ಶ್ರಾವಣ ಶರಣ ಚಿಂತನ ಮಾಲಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಉಳಿವಿಗಾಗಿ ಭಾಲ್ಕಿಯ ಲಿಂಗೈಕ್ಯ ಡಾ. ಚೆನ್ನಬಸವ ಪಟ್ಟದೇವರು ನಡೆಸಿದ ಹೋರಾಟ ಸ್ಮ್ರರಣೀಯವೆಂದು ಪ್ರಾಧ್ಯಾಪಕ ಡಾ.ಬಿ.ವಿ. ಮಂಜುನಾಥ ಅಭಿಪ್ರಾಯಪಟ್ಟರು.

ಬಸವಕೇಂದ್ರ ಮುರುಘಾಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಲಾದ ಚಿಂತನಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು

ಅಂದಿನ ಹೈದರಾಬಾದಿನ ನಿಜಾಮನ ಆಳ್ವಿಕೆಯಲ್ಲಿ ಆ ಭಾಗದಲ್ಲಿ ಕನ್ನಡ ಕಲಿಸುವುದೇ ಅಪರಾಧವಾಗಿತ್ತು.ಶಾಲೆಯ ಹೊರಗೆ ಉರ್ದು ನಾಮಫಲಕ ಅಳವಡಿಸಿ, ಒಳಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡದ ಬಗೆಗಿನ ಅವರಲ್ಲಿದ್ದ ಅಭಿಮಾನದ ಜ್ಯೋತಿಯನ್ನು ಬೆಳಗಿಸಿದರು. ಹೀಗಾಗಿ ಅವರು ಕನ್ನಡದ ಪಟ್ಟದೇವರು ಎಂದೇ ಖ್ಯಾತರಾದರು. ಕನ್ನಡ ಭಾಷೆಯ ಮೇಲಿನ ಅವರ ಪ್ರೀತಿ ಕೇವಲ ಅಭಿಮಾನವಾಗಿರದೆ, ಕನ್ನಡಿಗರ ಅಸ್ಮಿತೆಯ ಹೋರಾಟವಾಗಿತ್ತು ಎಂದರು.

ಭಾಲ್ಕಿಯ ಲಿಂಗೈಕ್ಯ ಡಾ.ಚೆನ್ನಬಸವ ಪಟ್ಟದೇವರು 1936 ರಲ್ಲಿಯೇ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ನಾರಾಯಣಖೇಡ ತಾಲೂಕಿನ ಮೊರ್ಗಿ ಗ್ರಾಮದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು. ಪ್ರಸಾದ ನಿಲಯ ಆರಂಭಿಸಿ, ಮುಷ್ಟಿ ಫಂಡ್‌ನ ನೆರವಿನಿಂದ ಶಾಲೆ ಮತ್ತು ಪ್ರಸಾದ ನಿಲಯವನ್ನು ಸುಸೂತ್ರವಾಗಿ ನಡೆಸಿದರು. ಬಳಿಕ ಭಾಲ್ಕಿ ಹಾಗೂ ಬೀದರ್‌ನಲ್ಲಿಯೂ ಶಾಲಾ-ಕಾಲೇಜುಗಳನ್ನು ಆರಂಭಿಸಿ, ಅವುಗಳಿಗೆ ಸಿದ್ಧರಾಮೇಶ್ವರ, ಅಕ್ಕಮಹಾದೇವಿಯಂತಹ ಶಿವಶರಣರ ಹೆಸರುಗಳನ್ನು ಇಟ್ಟಿದ್ದು ಅವರ ಶರಣತತ್ವದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಪಟ್ಟದೇವರ ಬಸವತತ್ವದ ಆಚರಣೆಯೂ ಅನುಕರಣೀಯವಾಗಿತ್ತು. ಹಿಂದಿನ ತೆಲಂಗಾಣ ರಾಜ್ಯದ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಹನುಮಾನ್ ದೇವಾಲಯದಲ್ಲಿ ನಡೆದ ಶಿವಾನುಭವ ಗೋಷ್ಠಿಯ ಸಂದರ್ಭದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿದರೂ, ದಲಿತರು ಮಾತ್ರ ಮುಂದೆ ಬರಲು ಹಿಂದೇಟು ಹಾಕಿದರು. ಆಗ ಪಟ್ಟದೇವರು, ನೀವು ಬಂದು ಪ್ರಸಾದ ಸ್ವೀಕರಿಸದೆ ಹೋದರೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ದೃಢವಾಗಿ ನಿಂತರು. ಕೊನೆಗೆ ದಲಿತರೆಲ್ಲರೂ ಬಂದು ದೇವಾಲಯದ ಜಗಲಿ ಕಟ್ಟೆಯ ಮೇಲೆ ಕುಳಿತಿದ್ದ ಪೂಜ್ಯರಿಂದ ಪ್ರಸಾದ ಸ್ವೀಕರಿಸಿದರು. ಇದರಿಂದ ಕೆಲ ಮೇಲ್ವರ್ಗದವರು ಅಸಮಾಧಾನಗೊಂಡಾಗ, ಪಟ್ಟದೇವರು ಅಣ್ಣನವರ ಇವನಾರವ, ಇವನಾರವ ಎಂಬ ವಚನದ ಆಶಯವನ್ನು ತಿಳಿಸಿ, ಬಸವತತ್ವದ ನಿಜವಾದ ಅರ್ಥವನ್ನು ಮನವರಿಕೆ ಮಾಡಿಕೊಟ್ಟರು. ಅಷ್ಟೇ ಅಲ್ಲದೆ, ಪೂಜಾ ಕೊಠಡಿಯ ಸೇವಾ ಕಾರ್ಯಗಳಲ್ಲಿಯೂ ದಲಿತರನ್ನು ಒಳಗೊಳ್ಳುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಕಾಯಕದ ಬಸವತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರು.

ಕರ್ನಾಟಕ ಏಕೀಕರಣದ ಹೋರಾಟದಲ್ಲಿಯೂ ಲಿಂಗೈಕ್ಯ ಡಾ.ಚೆನ್ನಬಸವ ಪಟ್ಟದೇವರ ಪಾತ್ರ ಮಹತ್ವದ್ದಾಗಿದೆ. ಸಂಯುಕ್ತ ಕರ್ನಾಟಕ ಸಂಘವನ್ನು ರಚಿಸಿ, ಭೀಮಣ್ಣ ಖಂಡ್ರೆ ಮತ್ತು ಸಿದ್ದಲಿಂಗಪ್ಪ ಕಾನಡೆ ಅವರ ನೇತೃತ್ವದಲ್ಲಿ ಅಖಂಡ ಬೀದರ್ ಜಿಲ್ಲೆ ಕರ್ನಾಟಕದಲ್ಲಿಯೇ ಉಳಿಯಬೇಕೆಂಬ ಹೋರಾಟಕ್ಕೆ ಅವರು ಬಲ ತುಂಬಿದರು. ಅಂದಿನ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಅಖಂಡ ಬೀದರ್ ಜಿಲ್ಲೆಯ ಕೆಲವು ಭಾಗಗಳು ಮಾತ್ರ ಕರ್ನಾಟಕದಲ್ಲಿ ಉಳಿದರೂ, ಅವು ಕರ್ನಾಟಕದೊಂದಿಗೆ ಉಳಿಯಲು ಪಟ್ಟದೇವರು ಸೇರಿದಂತೆ ಹೋರಾಟಗಾರರು ನಡೆಸಿದ ನಿರಂತರ ಪ್ರಯತ್ನ ಮರೆಯಲಾಗದು ಎಂದು ಮಂಜುನಾಥ ಹೇಳಿದರು.

ಮುರುಘಾಮಠದ ಖಾಸಾಮಠವಾದ ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳವರು, ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಜಗದ್ಗುರು ಮುರುಘರಾಜೇಂದ್ರ ಗುರುಕುಲದ ಸಾಧಕರಾದ ಗಂಗಾಧರ ದೇವರು ಮಾತನಾಡಿದರು.

ವೇದಿಕೆಯಲ್ಲಿ ಬಸವಮುರುಘೇಂದ್ರ ಸ್ವಾಮಿಗಳವರು, ಹೊಳಲ್ಕೆರೆ ತಿಪ್ಪೇರುದ್ರ ಸ್ವಾಮಿಗಳವರು ಉಪಸ್ಥಿತರಿದ್ದರು. ವಿವಿಧ ಸಮಾಜ, ಸಂಘಟನೆಗಳ ಪದಾಧಿಕಾರಿಗಳಾದ ಬಸವರಾಜ ಕಟ್ಟಿ, ಕಸವನಹಳ್ಳಿ ಶಿವಣ್ಣ, ಗಾಯತ್ರಿ ಶಿವರಾಂ, ಬಸವರಾಜಯ್ಯ, ಡಾ.ಈಶ್ವರಪ್ಪ, ಎಂ.ಬಿ ಮುರಳಿ, ಸುನಿತಾ ಇದ್ದರು. ಕಲಾವಿದ ಉಮೇಶ್ ಪತ್ತಾರ್ ವಚನಗೀತೆ ಹಾಡಿದರು. ಉಪನ್ಯಾಸಕ ಕರಕಪ್ಪ ಮೇಟಿ ಸ್ವಾಗತಿಸಿದರೆ, ಮತ್ತೋರ್ವ ಉಪನ್ಯಾಸಕಿ ಶೈಲಜಾ ಶಿವಕುಮಾರ್ ನಿರೂಪಿಸಿದರು.

--------------

ಪೋಟೋ ಕ್ಯಾಪ್ಸನ್

ಬಸವಕೇಂದ್ರ ಮುರುಘಾಮಠದಲ್ಲಿ ನಡೆದ ಅನುಭಾವ ಶ್ರಾವಣ ಶರಣ ಚಿಂತನ ಮಾಲಿಕೆ ಕಾರ್ಯಕ್ರಮಲ್ಲಿ ಪ್ರಾಧ್ಯಾಪಕ ಡಾ.ಬಿ.ವಿ.ಮಂಜುನಾಥ ಮಾತನಾಡಿದರು.

----ಫೋಟೋ ಪೈಲ್ ನೇಮ್-22ಸಿಟಿಡಿ1-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು: ಡಿಸಿಎಂ ಪರಮೇಶ್ವರ್ ಭೇಟಿ
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಲಹೆ