ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಧ್ಯರಾತ್ರಿ ಕೋಟೆ ಬೀದಿ ಚಿನ್ನೇಗೌಡರ ಮನೆ ಎದುರು 44 ಅಡಿ ಉದ್ದದ ತವಸದ ಮರ(ಸಿಡಿ) ಸಿದ್ಧಪಡಿಸಿ ಅದಕ್ಕೆ ಹೂವು ಹಾಗೂ ಬಲೂನುಗಳನ್ನು ಕಟ್ಟಿ ಶೃಂಗರಿಸಲಾಯಿತು. ನಂತರ ಗಂಗಾಮತಸ್ಥ ಬೀದಿಯ ಪಟ್ಟಲದಮ್ಮ ದೇವಸ್ಥಾನದಲ್ಲಿದ್ದ ಸಿಡಿರಣ್ಣನ ಗೊಂಬೆಯನ್ನು ತಂದು ಸಿಡಿ ಮರಕ್ಕೆ ಕಟ್ಟಲಾಯಿತು.
ಸಿಡಿ ಎಳೆಯಲು ಸಿದ್ದಾರ್ಥ ನಗರದಿಂದ ನೀಡಲಾಗಿದ್ದ ಹಗ್ಗವನ್ನು ಕಟ್ಟಿದ ನಂತರ ಸಿಡಿರಣ್ಣನಿಗೆ ಪೂಜೆ ಸಲ್ಲಿಸಿ ಸಿಡಿ ಎಳೆಯಲು ಚಾಲನೆ ನೀಡಲಾಯಿತು. ಸಿಡಿ ಸಾರಂಗಪಾಣಿ ದೇವಸ್ಥಾನ ರಸ್ತೆ, ಗಂಗಾಧರೇಶ್ವರಸ್ವಾಮಿ ದೇವಸ್ಥಾನ ರಸ್ತೆ, ಕಾಳಮ್ಮನಗುಡಿ ದೇವಸ್ಥಾನದ ರಸ್ತೆ, ಪೇಟೆ ಬೀದಿ, ಗಂಗಾಮತ ಬಡಾವಣೆಯ ಪ್ರಮುಖ ರಸ್ತೆ ಮೂಲಕ ಸಂಚರಿಸಿ ಬೆಳಗ್ಗೆ ಪಟ್ಟಣದ ದೊಡ್ಡಕೆರೆ ಬಳಿ ಇರುವ ಪಟ್ಟಲದಮ್ಮನ ದೇವಾಲಯದ ಬಳಿಗೆ ಸಂಪ್ರದಾಯದಂತೆ ಮೂರು ಸುತ್ತು ತಿರುಗಿಸಿದ ನಂತರ ಸಿಡಿ ಹಬ್ಬವನ್ನು ಅಂತಿಮ ಗೊಳಿಸಲಾಯಿತು. ಸಿಡಿಹಬ್ಬಕ್ಕೆ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತರು ಹಣ್ಣು ಜವನ ಎಸೆದು ಧನ್ಯತೆ ಮೆರೆದರು.ಶನಿವಾರ ಬೆಳಗ್ಗೆ 10ಗಂಟೆ ವೇಳೆಗೆ ದೇವಸ್ಥಾನ ಆವರಣಕ್ಕೆ ಬಂದ ಸಿಡಿ ಬಂಡಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಪಟ್ಟಲದಮ್ಮನ ಹಾಗೂ ವಳಗೆರೆ ಹುಚ್ಚಮ್ಮ ದೇವರ ದರ್ಶನ ಪಡೆದುಕೊಂಡರು. ಮಾಜಿ ಶಾಸಕ ಕೆ.ಅನ್ನದಾನಿ ಸಹ ಮುಖಂಡರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು.
ಶನಿವಾರ ಬೆಳಗ್ಗೆ 11.30ರ ವೇಳೆಗೆ ಬೀದಿಯ ಅಡ್ಡೆನಿಂಗಯ್ಯನ ಕೇರಿಯ ರಘು ಮೊದಲಿಗರಾಗಿ ಕೊಂಡ ಹಾದರು. ನಂತರ ಹರಕೆ ಹೊತ್ತ ಸುಮಾರು 50ಕ್ಕೂ ಅಧಿಕ ಮಂದಿ ಸರದಿ ಸಾಲಿನಲ್ಲಿ ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು. ಕೊಂಡೋತ್ಸವದ ಮೂಲಕ ಸಿಡಿಹಬ್ಬಕ್ಕೆ ತೆರೆ ಬಿದ್ದಿದೆ.
ಲಕ್ಷಾಂತರ ಮಂದಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ಹಾಗೂ ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ಸಿಪಿಐ ಬಿ.ಎಸ್.ಶ್ರೀಧರ್, ಬಸವರಾಜು ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.