ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಗಡಿ ವಿವಾದದ ಸೂಕ್ಷ್ಮ ಹಾಗೂ ಭಾವನಾತ್ಮಕ ಹಿನ್ನೆಲೆಯ ನಡುವೆ ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ. ಮೇ 13ರಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಕನ್ನಡಪರ ನಿರ್ಣಯ ಮಂಡನೆಯಾಗಿ ಅಂಗೀಕಾರವಾಗುತ್ತದೆಯೇ ಎಂಬ ಪ್ರಶ್ನೆ ಕನ್ನಡಪರ ಸಂಘಟನೆಗಳು, ರಾಜಕೀಯ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.ಈಗಾಗಲೇ ಹಲವು ಕನ್ನಡಪರ ಸಂಘಟನೆಗಳು ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸ್ಪಷ್ಟ ಸಂದೇಶ ಸಾರುವ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಜೊತೆಗೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ಮಹಾಜನ ಆಯೋಗದ ವರದಿಯೇ ಅಂತಿಮ ಎಂದು ಘೋಷಿಸುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಬೇಕೆಂದು ಆಗ್ರಹಿಸಿ ಮೇಯರ್ ಮತ್ತು ಉಪಮೇಯರ್ ಅವರಿಗೆ ಮನವಿ ಪತ್ರ ಸಲ್ಲಿಸಿವೆ.
2005ರ ವಿವಾದಾತ್ಮಕ ನಿರ್ಣಯ ಮತ್ತೆ ಚರ್ಚೆಗೆ:ಈ ಬೆಳವಣಿಗೆಗೆ 2005ರಲ್ಲಿ ನಡೆದ ಘಟನೆ ಮತ್ತೆ ಕಾರಣವಾಗಿದೆ. ಆಗಿನ ಮೇಯರ್ ವಿಜಯ ಮೋರೆ ಅವರ ಅವಧಿಯಲ್ಲಿ ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಬಾಲ್ಕಿ, ಬೀದರ ಸೇರಿದಂತೆ ಗಡಿಭಾಗದ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಪಾಲಿಕೆಯಲ್ಲಿ ವಿವಾದಾತ್ಮಕ ನಿರ್ಣಯ ಅಂಗೀಕರಿಸಲಾಗಿತ್ತು.ಆ ನಿರ್ಣಯ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಪರ ಸಂಘಟನೆಗಳು ಅದನ್ನು ನಾಡದ್ರೋಹಿ ನಿರ್ಣಯ ಎಂದು ತೀವ್ರವಾಗಿ ಖಂಡಿಸಿದ್ದವು. ರಾಜ್ಯ ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರಸೀಡ್ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಪಾಲಿಕೆಯಲ್ಲಿ ಕನ್ನಡ ಭಾಷಿಕ ಸದಸ್ಯರ ಪ್ರಾಬಲ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ, ಆ ನಿರ್ಣಯಕ್ಕೆ ಪ್ರತಿಕ್ರಿಯೆಯಾಗಿ ಕನ್ನಡಪರ ನಿರ್ಣಯ ಅಂಗೀಕರಿಸಬೇಕು ಎಂಬ ಒತ್ತಡ ಮತ್ತೆ ಜೋರಾಗಿದೆ. ಕಳೆದ ಸಾಮಾನ್ಯ ಸಭೆಯಲ್ಲಿಯೇ ಈ ವಿಷಯ ಚರ್ಚೆಗೆ ಬರಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಸಭೆಯಲ್ಲಿ ಈ ಕುರಿತು ಯಾವುದೇ ಪ್ರಸ್ತಾಪವಾಗದೇ ಉಳಿದಿತ್ತು. ಇದರಿಂದ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ, ಪಾಲಿಕೆಯ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದವು.ಇದೀಗ ಮತ್ತೊಮ್ಮೆ ಸಾಮಾನ್ಯ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಬಾರಿ ನಿರ್ಣಯ ಮಂಡನೆಯಾಗುತ್ತದೆಯೇ ಅಥವಾ ಮತ್ತೆ ಮುಂದೂಡಲಾಗುತ್ತದೆಯೇ ಎಂಬ ಚರ್ಚೆ ಆರಂಭವಾಗಿದೆ. ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯಕ್ಕೆ ಸ್ಥಾನ ಸಿಗುತ್ತದೆಯೇ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.ಕನ್ನಡ ಸಂಘಟನೆಗಳ ಒತ್ತಡ ಹೆಚ್ಚಳ:
ಬೆಳಗಾವಿಯ ವಿವಿಧ ಕನ್ನಡಪರ ಸಂಘಟನೆಗಳು ಕಳೆದ ಕೆಲವು ದಿನಗಳಿಂದ ನಿರಂತರ ಸಭೆ ನಡೆಸುತ್ತಿವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಅಧಿಕೃತವಾಗಿ ಪಾಲಿಕೆ ಸಭೆಯ ಮೂಲಕ ದೇಶಕ್ಕೆ ಸಾರಬೇಕು ಎಂದು ಆಗ್ರಹಿಸುತ್ತಿವೆ. ಅಲ್ಲದೆ, ಗಡಿ ವಿವಾದದ ವಿಷಯದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ನಿಲುವನ್ನು ಮತ್ತೊಮ್ಮೆ ದೃಢಪಡಿಸಬೇಕೆಂದು ಒತ್ತಾಯಿಸುತ್ತಿವೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಭೆ ದಿನದಂದು ಪಾಲಿಕೆ ಎದುರು ಪ್ರತಿಭಟನೆ ಅಥವಾ ಧರಣಿ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.ಗಡಿ ವಿವಾದದ ವಿಚಾರ ಬೆಳಗಾವಿಯಲ್ಲಿ ಯಾವಾಗಲೂ ರಾಜಕೀಯ ಹಾಗೂ ಸಾಮಾಜಿಕವಾಗಿ ಸೂಕ್ಷ್ಮ ವಿಷಯವಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಕನ್ನಡಪರ ಸಂಘಟನೆಗಳ ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ರಾಜಕೀಯ ಸಂಘರ್ಷದ ನಡುವೆ, ಪಾಲಿಕೆ ಸಭೆಯ ನಿರ್ಣಯಕ್ಕೆ ವಿಶೇಷ ಮಹತ್ವ ಬಂದಿದೆ. ಪಾಲಿಕೆಯಲ್ಲಿ ಪ್ರಸ್ತುತ ಕನ್ನಡಪರ ಸದಸ್ಯರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಿರ್ಣಯ ಅಂಗೀಕಾರದ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಆದರೆ ಸಭೆಯಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.ನಿರ್ಣಯದತ್ತ ನಿರೀಕ್ಷೆ:
ಗಡಿ ವಿವಾದದ ಇತಿಹಾಸ, ಕನ್ನಡಪರ ಸಂಘಟನೆಗಳ ಒತ್ತಡ, ಪಾಲಿಕೆಯ ಇಂದಿನ ರಾಜಕೀಯ ಪರಿಸ್ಥಿತಿ ಹಾಗೂ ಸಾರ್ವಜನಿಕರ ಭಾವನೆಗಳನ್ನು ಗಮನಿಸಿದರೆ, ಮೇ 13ರ ಸಾಮಾನ್ಯ ಸಭೆ ಕೇವಲ ಆಡಳಿತಾತ್ಮಕ ಸಭೆಯಾಗಿ ಉಳಿಯದೇ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ತಿರುವು ಪಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕಾರವಾಗುತ್ತಾ? ಎಂಬ ಪ್ರಶ್ನೆಗೆ ಉತ್ತರ ಸಿಗುವ ಕ್ಷಣದತ್ತ ಇದೀಗ ಬೆಳಗಾವಿ ಮಾತ್ರವಲ್ಲ, ಇಡೀ ರಾಜ್ಯ ಕಾತರದಿಂದ ಕಾಯುತ್ತಿದೆ.ಕನ್ನಡಪರ ಸಂಘಟನೆಗಳು ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕರಿಸುವಂತೆ ಮನವಿ ಸಲ್ಲಿಸಿವೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
- ಪ್ರೀತಿ ಕಾಮಕರ, ಮೇಯರ್.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕರಿಸುವಂತೆ ಈಗಾಗಲೇ ಕನ್ನಡಪರ ಸಂಘಟನೆಗಳು ಮನವಿ ಸಲ್ಲಿಸಿವೆ. ಈ ನಿಟ್ಟಿನಲ್ಲಿ ಮೇಯರ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿತ್ತು. ಆದರೆ, ಕಳೆದ ಸಭೆಯಲ್ಲಿ ಈ ಕುರಿತು ಯಾವುದೇ ವಿಷಯ ಪ್ರಸ್ತಾಪವಾಗಲಿಲ್ಲ. ಈ ಸಭೆಯಲ್ಲಾದರೂ ಕನ್ನಡಪರ ನಿರ್ಣಯ ಅಂಗೀಕರಿಸಬೇಕು.- ಅಶೋಕ ಚಂದರಗಿ,
ಕನ್ನಡಪರ ಹೋರಾಟಗಾರ.