ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸೇರಿದಂತೆ ಮಲೆನಾಡು ಭಾಗದ ಸಾವಿರಾರು ರೈತರು ಮತ್ತು ನಿವೇಶನರಹಿತ ಬಡ ಕುಟುಂಬಗಳು ಸರ್ಕಾರದ ನಿರ್ಲಕ್ಷ್ಯದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಎಸ್‌ ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಜ್ ಕಟ್ಟೆ ಹೇಳಿದ್ದಾರೆ.

ಮಂಗಳವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಲೆತಲಾಂತರದಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರು ಇಂದು ತಮ್ಮದೇ ಜಮೀನಿನಲ್ಲಿ ಅತಿಕ್ರಮಣದಾರರಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳು ವರ್ಷಗಳಿಂದ ಬಾಕಿ ಉಳಿದಿದ್ದರೂ ಅವುಗಳ ವಿಲೇವಾರಿ ನಡೆಯದೆ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ ಎಂದರು.ಬಗರ್ ಹುಕುಂ ಸಮಿತಿಗಳ ನಿಷ್ಕ್ರಿಯತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದರು.ಇದೇ ವೇಳೆ ಕುಮ್ಕಿ ಹಕ್ಕಿನ ಹೆಸರಿನಲ್ಲಿ ನಡೆಯುತ್ತಿರುವ ಭೂ ಅನ್ಯಾಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಕೆಲ ಪ್ರಭಾವಿಗಳು ಎಕರೆಗಟ್ಟಲೆ ಸರ್ಕಾರಿ ಭೂಮಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರೆ, ಇನ್ನೊಂದೆಡೆ ಬಡ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಲು ಐದು ಸೆಂಟ್ಸ್ ಜಾಗವೂ ಸಿಗದಿರುವುದು ದುರಂತ ಎಂದು ಹೇಳಿದರು.ಅಕ್ರಮ ಕುಮ್ಕಿ ಭೂಮಿಯನ್ನು ವಶಪಡಿಸಿಕೊಂಡು ಬಡವರಿಗೆ ಹಂಚಬೇಕು ಹಾಗೂ ಸ್ಥಳ ಪರಿಶೀಲನೆ ನಡೆಸದೆ ಅರ್ಜಿ ತಿರಸ್ಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಒಂದು ವೇಳೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಎಸ್‌ಡಿಪಿಐ ರೈತರನ್ನು ಮತ್ತು ಜನಸಾಮಾನ್ಯರನ್ನು ಸಂಘಟಿಸಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಎಸ್ ಡಿಪಿಐ ಮುಖಂಡರಾದ ಅಕ್ಬರ್ ಬೆಳ್ತಂಗಡಿ, ಅಶ್ರಫ್ ತಲಪಾಡಿ, ಹನೀಪ್ ಪುಂಜಾಲಕಟ್ಟೆ, ಇನಾಸ್ ರೋಡ್ರಿಗಸ್ ಉಪಸ್ಥಿತರಿದ್ದರು.