ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿ ಆರಂಭವಾದ ಬೆಳಗಾವಿ ಒನ್ ಕೇಂದ್ರಗಳು ಈಗ ಸಾರ್ವಜನಿಕರ ಅಸಮಾಧಾನದ ಕೇಂದ್ರಗಳಾಗಿ ಪರಿಣಮಿಸುತ್ತಿವೆ. ಸರ್ವರ್ ಸಮಸ್ಯೆ, ನಿಧಾನಗತಿಯ ಸೇವೆ, ತಾಂತ್ರಿಕ ದೋಷ ಹಾಗೂ ನಿರ್ವಹಣೆಯ ಕೊರತೆಯಿಂದ ಜನರು ಪ್ರತಿದಿನ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಬಿಲ್‌, ನೀರಿನ ಬಿಲ್‌, ಆಸ್ತಿ ತೆರಿಗೆ ಪಾವತಿ, ಜಾತಿ-ಆದಾಯ ಪ್ರಮಾಣಪತ್ರ, ವಿವಿಧ ಅರ್ಜಿಗಳು, ಶುಲ್ಕ ಪಾವತಿ ಸೇರಿದಂತೆ ನಿತ್ಯದ ಅಗತ್ಯ ಸೇವೆಗಳಿಗಾಗಿ ಜನರು ಬೆಳಗ್ಗೆಯೇ ಕೇಂದ್ರಗಳಿಗೆ ಆಗಮಿಸುತ್ತಾರೆ. ಆದರೆ ಕೌಂಟರ್ ಮುಂದೆ ನಿಂತವರಿಗೆ ಸಿಗುವ ಉತ್ತರ ಮಾತ್ರ ಒಂದೇ. ಸರ್ವರ್ ಇಲ್ಲ… ಸ್ವಲ್ಪ ಕಾಯಿರಿ… ಇಲ್ಲದಿದ್ದರೆ ನಾಳೆ ಬನ್ನಿ ಎನ್ನುವುದು.ಈ ಸಮಸ್ಯೆಯಿಂದ ಹೆಚ್ಚು ತೊಂದರೆ ಅನುಭವಿಸುವವರು ದಿನಗೂಲಿ ಕಾರ್ಮಿಕರು, ವೃದ್ಧರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು. ಒಂದು ಪ್ರಮಾಣಪತ್ರಕ್ಕಾಗಿ ಅಥವಾ ಬಿಲ್ ಪಾವತಿಗಾಗಿ ಕೆಲಸ ಬಿಟ್ಟು ಬಂದವರಿಗೆ, ದಿನವಿಡೀ ಕಾಯಿಸಿಕೊಂಡು ಕೊನೆಯಲ್ಲಿ ಸರ್ವರ್ ಡೌನ್ ಎನ್ನುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನ, ಪ್ರವೇಶ ಅರ್ಜಿ ಹಾಗೂ ದಾಖಲಾತಿಗಳಿಗಾಗಿ ಪ್ರಮಾಣಪತ್ರ ಪಡೆಯಲು ಪರದಾಡಿದರೆ, ವೃದ್ಧರು ಪಿಂಚಣಿ ಹಾಗೂ ಇತರೆ ಸೇವೆಗಳಿಗಾಗಿ ಸಾಲಿನಲ್ಲಿ ನಿಂತು ಬೇಸತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.ಒಂದೆಡೆ ಸರ್ಕಾರ ಡಿಜಿಟಲ್ ಆಡಳಿತ, ಇ-ಗವರ್ನನ್ಸ್‌, ಸ್ಮಾರ್ಟ್ ಸೇವೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಆದರೆ ತಳಮಟ್ಟದಲ್ಲಿ ಮೂಲಭೂತ ತಾಂತ್ರಿಕ ವ್ಯವಸ್ಥೆಯೇ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ, ಆ ಘೋಷಣೆಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಸರ್ವರ್ ಸಮಸ್ಯೆ ಉಂಟಾದಾಗ ಜನರಿಗೆ ಮುಂಚಿತ ಮಾಹಿತಿ ನೀಡುವ ವ್ಯವಸ್ಥೆಯೂ ಬಹುತೇಕ ಕೇಂದ್ರಗಳಲ್ಲಿ ಇಲ್ಲ. ಪರಿಣಾಮ, ಜನರು ಗಂಟೆಗಟ್ಟಲೆ ಕಾಯ್ದು ನಂತರ ನಿರಾಶೆಯಿಂದ ಹಿಂದಿರುಗಬೇಕಾಗುತ್ತಿದೆ.ಪದೇಪದೇ ಸರ್ವರ್ ಡೌನ್ ಆಗುವುದು, ನಿಧಾನಗತಿಯ ಇಂಟರ್‌ನೆಟ್ ಸಂಪರ್ಕ, ತಾಂತ್ರಿಕ ಸಿಬ್ಬಂದಿ ಕೊರತೆ, ಬ್ಯಾಕಪ್ ವ್ಯವಸ್ಥೆಯ ಅಭಾವ, ಜನಸಂದಣಿಗೆ ತಕ್ಕ ಮೂಲಸೌಕರ್ಯದ ಕೊರತೆ, ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದಿರುವುದು ಹೀಗೆ ಮೂಲಭೂತ ಸಮಸ್ಯೆಗಳು ಬೆಳಗಾವಿ ಒನ್‌ ಕೇಂದ್ರವನ್ನು ಕಾಡುತ್ತಿವೆ.ಸರ್ವರ್ ಸಾಮರ್ಥ್ಯ ಹೆಚ್ಚಿಸುವುದು, ತಾಂತ್ರಿಕ ತಂಡವನ್ನು ಸದಾ ಸಿದ್ಧವಾಗಿಡುವುದು, ಸೇವೆ ಸ್ಥಗಿತವಾದಾಗ ತಕ್ಷಣ ಮಾಹಿತಿ ನೀಡುವುದು ಹಾಗೂ ಜನಸಂದಣಿ ನಿಯಂತ್ರಣಕ್ಕೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಜೊತೆಗೆ ಪ್ರತಿಯೊಂದು ಕೇಂದ್ರದಲ್ಲೂ ಡಿಜಿಟಲ್ ಡಿಸ್‌ಪ್ಲೆ ಮೂಲಕ ಸರ್ವರ್ ಸ್ಥಿತಿ, ಸೇವೆಗಳ ಲಭ್ಯತೆ ಮತ್ತು ನಿರೀಕ್ಷಿತ ಸಮಯದ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.ಜನರಿಗೆ ಸುಲಭ ಸೇವೆ ನೀಡಬೇಕಾದ ಕೇಂದ್ರಗಳೇ ಜನರ ಸಮಯ, ಶ್ರಮ ಮತ್ತು ಸಹನೆಯನ್ನು ಪರೀಕ್ಷಿಸುವ ಸ್ಥಿತಿಗೆ ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ವರ್ ಸಮಸ್ಯೆ ಎಂಬ ನೆಪ ಪದೇಪದೇ ಕೇಳಿಬರುತ್ತಿರುವುದು ಈಗ ಸಾಮಾನ್ಯ ತಾಂತ್ರಿಕ ದೋಷದ ಮಿತಿಯನ್ನು ಮೀರಿ, ಜನಸೇವೆಯ ಮೇಲಿನ ನಿರ್ಲಕ್ಷ್ಯದ ಸಂಕೇತವಾಗಿ ಪರಿಣಮಿಸುತ್ತಿದೆ. ಜನರು ಸರ್ಕಾರಿ ಸೇವೆ ಪಡೆಯಲು ಬರುತ್ತಾರೆ, ಸಮಸ್ಯೆಗಳನ್ನು ಅನುಭವಿಸಲು ಅಲ್ಲ. ಬೆಳಗಾವಿ ಒನ್ ಕೇಂದ್ರಗಳ ಕಾರ್ಯವೈಖರಿಯಲ್ಲಿ ತ್ವರಿತ ಸುಧಾರಣೆ ಆಗದಿದ್ದರೆ, ಡಿಜಿಟಲ್ ಆಡಳಿತದ ಮೇಲಿನ ಸಾರ್ವಜನಿಕರ ನಂಬಿಕೆಗೆ ಧಕ್ಕೆಯಾಗುವ ಸಾಧ್ಯತೆ ಇದೆ.