ಪಾವಗಡ ರಿಯಲ್ ಎಸ್ಟೇಟ್‌ ಅಕ್ರಮ ಚಟುವಟಿಕೆಗೆ ಬ್ರೇಕ್!

KannadaprabhaNewsNetwork | Updated : Jun 26 2025, 12:38 PM IST

ತಾಲೂಕಿನ ಕಣಿವೇನಹಳ್ಳಿ ಸರ್ವೆ ನಂ.131ರಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರಿಗಳು ನಡೆಸುತ್ತಿದ್ದ ಅಕ್ರಮ ಚಟುವಟಿಕೆಗೆ ಕೊನೆಗೂ ಬ್ರೇಕ್ ಬಿದ್ದಿದೆ.  

 ಪಾವಗಡ :  ತಾಲೂಕಿನ ಕಣಿವೇನಹಳ್ಳಿ ಸರ್ವೆ ನಂ.131ರಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರಿಗಳು ನಡೆಸುತ್ತಿದ್ದ ಅಕ್ರಮ ಚಟುವಟಿಕೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಸಂಬಂಧಪಟ್ಟ ಇಲಾಖೆಗಳ ಯಾವುದೇ ಅನುಮತಿ ಪಡೆಯದೆ ಬೆಟ್ಟ ಗುಡ್ಡ ಅಗೆದು, ಬಂಡೆ ಸ್ಫೋಟಿಸಿ ಬೃಹತ್ ಯಂತ್ರ ಬಳಸಿ ಭೂಮಿಯನ್ನು ಸಮತಟ್ಟು ಮಾಡುತ್ತಿರುವುದನ್ನು ಕಂಡ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದರು. ಸದರಿ ಜಮೀನಿಗೆ ಸಂಬಂಧಪಟ್ಟ ಎಲ್ಲ ವಿವರಗಳನ್ನು ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದಾರೆ.

ಮುಖ್ಯ ರಸ್ತೆಯ ಪಕ್ಕದಲ್ಲೇ ಕಳೆದ ನಾಲ್ಕೈದು ತಿಂಗಳಿನಿಂದ ಕಾಮಗಾರಿ ಜೋರಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆ, ಪೊಲೀಸರಾಗಲಿ ಚಕಾರವೆತ್ತಿರಲಿಲ್ಲ. ಆದರೀಗ ಜಿಲ್ಲಾಕೇಂದ್ರದಿಂದ ಬಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಚಟುವಟಿಕೆಗೆ ತಡೆಯೊಡ್ಡಿದ್ದು ಈಗಾಗಲೇ ನಡೆದಿರುವ ಅಕ್ರಮ ಗಣಿಗಾರಿಕೆಯನ್ನು ಅಂದಾಜಿಸಿ ದಂಡ ವಿಧಿಸುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಆಗಮಿಸಿದ್ದ ಭೂವಿಜ್ಞಾನಿ ತೇಜಸ್ವಿನಿ, ಕಾವ್ಯ ಮತ್ತು ತಂಡ ತಹಸೀಲ್ದಾರ್ ವರದರಾಜು, ಭೂದಾಖಲೆಗಳ ಸಹಾಯಕ ನಿರ್ದೇಶಕ ರವಿಕುಮಾರ್ ಹಾಗೂ ಸೂಪರ್‌ ವೈಜರ್‌ ವೆಂಕಟೇಶ್‌ ಪ್ರಸಾದ್‌ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ನೈಸರ್ಗಿಕವಾದ ಬೆಟ್ಟ ನೆಲಸಮ ಹಾಗೂ 70 ಎಕರೆ ಪೈಕಿ 30 ಎಕರೆ ಸರ್ಕಾರಿ ಖರಾಜು ಒತ್ತುವರಿಯಾಗಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು,ನಷ್ಟವಾಗಿದೆ ಎಂದು ಆರೋಪಿಸಿ ಕಳೆದ 15 ದಿನಗಳ ಹಿಂದಷ್ಟೆ ಸಾಮಾಜಿಕ ಕಾರ್ಯಕರ್ತ ವೀರ್ಲಗೊಂದಿ ನರಸಿಂಹಯ್ಯ ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಭೂವಿಜ್ಞಾನ ಇಲಾಖೆಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಅಕ್ರಮ ಒತ್ತುವರಿ ತೆರವು ಹಾಗೂ ಏಕಾಏಕಿ ಬೆಟ್ಟ ಧ್ವಂಸ ವಿಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಕ್ರಮವಹಿಸುವಂತೆ ಸಾಮಾಜಿಕ ಹೋರಾಟಗಾರ ಎಎಪಿಯ ಜಿಲ್ಲಾಧ್ಯಕ್ಷ ಜಯರಾಮಪ್ಪ, ಎಎಪಿ ಸಂಘಟನೆ ಕಾರ್ಯದರ್ಶಿ ಎನ್‌.ರಾಮಾಂಜಿನಪ್ಪ ಹಾಗೂ ಕನ್ನಮೇಡಿ ಕೃಷ್ಣಮೂರ್ತಿ ಅಗತ್ಯ ದಾಖಲೆ ಸಮೇತ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಉಪವಿಭಾಗಧಿಕಾರಿ ಮತ್ತು ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದ್ದರು.

ಗಣಿಗಾರಿಕೆಯ ವಿಚಾರವಾಗಿ ಭೂ ಮಾಲೀಕರು, ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ಹೀಗಾಗಿ ಲೇಔಟ್‌ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಹಸೀಲ್ದಾರ್‌ಗೆ ಅದೇಶಿಸಿದರು.

ಭೂ ಮಾಲೀಕರು ಅನಧಿಕೃತ ಗಣಿಗಾರಿಕೆ ನಡೆಸಿದ್ದು ಕಂಡುಬಂದಿದ್ದು ಗಣಿಗಾರಿಕೆ ಕುರಿತು ಇಲಾಖೆಯಿಂದ ಪರವಾನಿಗೆ ಪಡೆದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಿದ್ದೇವೆ. ಒತ್ತುವರಿಯ ಸರ್ಕಾರಿ ಖರಾಬು ಜಮೀನಿನಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು, ಈ ಸಂಬಂಧ ಗಣಿಗಾರಿಕೆಯಲ್ಲಿ ನಿರತರಾದ ಭೂ ಮಾಲೀಕರಿಗೆ ನೋಟಿಸ್‌ ನೀಡಿ, ನಷ್ಟಕ್ಕೆ ಸಂಬಂಧಪಟ್ಟಂತೆ ದಂಡ ವಿಧಿಸುವುದಾಗಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ವಿಜ್ಞಾನಿಗಳಾದ ತೇಜಸ್ನಿನಿ ತಿಳಿಸಿದರು.

ಮುಖಂಡ ರಾಮಾಂಜಿನಪ್ಪ ಮಾತನಾಡಿ, ಕಣಿವೇನಹಳ್ಳಿ ಸ.ನಂ.131ರಲ್ಲಿ ಒಟ್ಟು 79.29 ಎ/ಗು ಜಮೀನಿನ ಪೈಕಿ 39-29 ಎಕರೆ ಪ್ರದೇಶವನ್ನು ದುರ್ಬಳಕೆ ಮಾಡಿಕೊಂಡಿದ್ದು ಇಟಾಜಿ, ಜೆಸಿಬಿಗಳ ಬೃಹತ್ ಯಂತ್ರಗಳ ಮೂಲಕ ಬೆಟ್ಟೆ ಗುಡ್ಡಗಳನ್ನು ನೆಲ ಸಮಗೊಳಿಸಿದ್ದಕ್ಕೆ ತನಿಖೆ ನಡೆಸುವಂತೆ ಮನವಿ ಮಾಡಿದ ಮೇರೆಗೆ, ಜಿಲ್ಲಾ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂತಸ ತಂದಿದೆ ಎಂದರು.

ನರಸಿಂಹಯ್ಯ ಮಾತನಾಡಿ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮವಹಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದೇ ಸರ್ವೆ ನಂಬರಿನಲ್ಲಿ 39 ಎಕರೆ ಸರ್ಕಾರಿ ಖರಾಬು ಅಕ್ರಮ ಒತ್ತುವರಿಯಾಗಿದ್ದು ಪರಿಶೀಲಿಸಿ ಕೂಡಲೇ ತೆರವುಗೊಳಿಸಿ ಸಾರ್ವಜನಿಕ ಜನೋಪಯೋಗಿ ಕೆಲಸಕ್ಕೆ ಈ ಜಾಗ ಬಳಕೆ ಮಾಡುವಂತೆ ಒತ್ತಾಯಿಸಿದರು.

ಭೂಮಾಲೀಕ ಕುಮಾರ್ ಎಂಬುವರು ತಮ್ಮ ಬಳಿಯಿದ್ದ ದಾಖಲಾತಿಯನ್ನು ಅಧಿಕಾರಿಗಳಿಗೆ ತೋರಿಸಿ, ತಾವು ಖರೀದಿಸಿ, ಜಿಲ್ಲಾಧಿಕಾರಿಯವರಿಂದ ಭೂಪರಿವರ್ತನೆ ಆದೇಶ ಪಡೆದುಕೊಂಡಿರುವ 33 ಎಕರೆ ಜಮೀನು ಸಮತಟ್ಟು ಮಾಡುತ್ತಿರುವುದ್ದೇವೆ. ಅನುಮತಿ ಪಡೆದುಕೊಳ್ಳಬೇಕೆಂಬ ವಿಷಯ ತಮಗೆ ತಿಳಿಯದೆಂದು ವಾದಿಸಿದರು.

ಸದರಿ ಜಮೀನಿಗೆ ಸಂಬಂಧಿಸಿದಂತೆ ಪೂರ್ತಿ ವಿವರಗಳನ್ನು ಒದಗಿಸುವಂತೆ ಭೂದಾಖಲೆಗಳ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದೇವೆ. ಅವುಗಳನ್ನು ಪರಿಶೀಲಿಸಿ ಸರ್ಕಾರಿ ಜಮೀನು ಕಬಳಿಕೆಯಾಗಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

ವರದರಾಜು ತಹಸೀಲ್ದಾರ್ .

Read more Articles on