ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಸಂಬಂಧ ಪವಿತ್ರಾಗೌಡಳ ಭದ್ರತಾ ಉಸ್ತುವಾರಿ ಹೊತ್ತಿದ್ದ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅವರಿಗೆ ವಿವರಣೆ ಕೇಳಿ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮೆಮೋ ಕೊಟ್ಟಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡಳನ್ನು ಬಂಧಿಸಿದ್ದ ಪೊಲೀಸರು, ತನಿಖೆ ಸಲುವಾಗಿ ಆಕೆಯನ್ನು 10 ದಿನ ಕಸ್ಟಡಿಗೆ ಪಡೆದಿದ್ದರು. ಆ ವೇಳೆ ಆಕೆ ತುಟಿಗಳಿಗೆ ಲಿಪ್‌ಸ್ಟಿಕ್ ಹಾಕಿಕೊಂಡು ಮೇಕಪ್ ಮಾಡಿಕೊಂಡಿದ್ದಳು. ಪವಿತ್ರಾ ತುಟಿಗಳಿಗೆ ಲಿಪ್‌ಸ್ಟಿಕ್ ಹಾಕಿಕೊಂಡಿದ್ದ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದವು. ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಗಿರೀಶ್ ಅವರು, ಕಸ್ಟಡಿಯಲ್ಲಿದ್ದಾಗ ಕೊಲೆ ಪ್ರಕರಣದ ಆರೋಪಿಗೆ ಲಿಪ್‌ಸ್ಟಿಕ್ ಸೇರಿ ಸೌಂದರ್ಯವರ್ಧಕ ಬಳಸಲು ಅವಕಾಶ ಕೊಟ್ಟಿದ್ದು ಹೇಗೆ ಎಂಬ ಕುರಿತು ವಿವರಣೆ ನೀಡುವಂತೆ ಪಿಎಸ್‌ಐಗೆ ಮೆಮೋ ಕೊಟ್ಟಿದ್ದಾರೆ. ಆದರೆ ಇದುವರೆಗೆ ಮೆಮೋಗೆ ಪಿಎಸ್ಐ ಉತ್ತರ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.ಬಟ್ಟೆ ಬದಲಾಯಿಸುವಾಗ ಲಿಪ್‌ಸ್ಟಿಕ್:
ಅಲ್ಲದೆ ಕೊಲೆ ಪ್ರಕರಣದ ಮಹಜರ್‌ಗೆ ಪವಿತ್ರಾಗೌಡಳನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಆಗ ರೆಸ್ಟ್ ರೂಂಗೆ ಹೋಗುವುದಾಗಿ ಹೇಳಿ ಮಲಗುವ ಕೋಣೆಗೆ ಹೋಗಿದ್ದಾಗ ಮುಖ ತೊಳೆದು ಲಿಪ್‌ಸ್ಟಿಕ್ ಹಾಕಿಕೊಂಡಿರಬಹುದು. ಹೀಗಾಗಿ ಆಕೆ ಯಾವ ಸಂದರ್ಭದಲ್ಲಿ ಲಿಪ್‌ಸ್ಟಿಕ್ ಹಾಕಿಕೊಂಡಿದ್ದಳು ಎಂಬುದು ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.