ಕನ್ನಡಪ್ರಭ ವಾರ್ತೆ ಅರಕಲಗೂಡು
ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಶಾಸಕ ಎ. ಮಂಜು ತಿಳಿಸಿದರು.ತಾಲೂಕು ಆಡಳಿತ ಪಟ್ಟಣದ ಶಿಕ್ಷಕರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಳಿತಕ್ಕೊಳಗಾದವರು, ನೊಂದವರು, ಬಡವರ ಪರ ಧ್ವನಿ ಎತ್ತಿ ಹೋರಾಟ ನಡೆಸಿದ್ದಲ್ಲದೆ ಸಂವಿಧಾನದಲ್ಲಿ ಪ್ರತಿಯೊಂದು ವರ್ಗಕ್ಕೂ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟರು. ಸಂವಿಧಾನ ನೀಡಿದ ಹಕ್ಕಿನಿಂದಾಗಿ ಸಾಮಾನ್ಯ ಮನುಷ್ಯನೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ. ಮಹೇಶ್ ಅಂಬೇಡ್ಕರ್ ಬದುಕು ಮತ್ತು ವಿಚಾರಗಳ ಕುರಿತು ಪ್ರಧಾನ ಭಾಷಣ ಮಾಡಿದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಹಾಗೂ ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಂತರ್ಜಾತಿ ವಿವಾಹವಾದವರಿಗೆ ಪ್ರೋತ್ಸಾಹಧನದ ಬಾಂಡ್ ವಿತರಿಸಲಾಯಿತು. ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯರಾದ ಅನಿಕೇತನ್, ಕೃಷ್ಣಯ್ಯ, ಎಚ್.ಎಸ್.ರಶ್ಮಿ, ಹೂವಣ್ಣ, ತಹಸೀಲ್ದಾರ್ ಕೆ.ಸಿ ಸೌಮ್ಯ, ತಾಪಂ ಇಒ ಡಿ.ಡಿ ಪ್ರಕಾಶ್, ಸಿಪಿಐ ಕೆ.ಎಂ. ವಸಂತ್, ಬಿಇಒ ಕೆ.ಪಿ.ನಾರಾಯಣ್, ಪಪಂ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್, ಟಿಎಚ್‌ಒ ಡಾ.ಪುಷ್ಪಲತಾ ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಮುನ್ನ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇಟ್ಟು ಕಾರ್ಯಕ್ರಮದ ವೇದಿಕೆವರೆಗೆ ಮೆರವಣಿಗೆ ನಡೆಸಲಾಯಿತು.