ಹಾಸ್ಟೆಲ್‌ಗಳ ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಿ: ನಲಿನ್ ಅತುಲ್

KannadaprabhaNewsNetwork | Published : Jul 21, 2024 1:25 AM

ಸಾರಾಂಶ

ಕೊಪ್ಪಳ ನಗರದ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕ್ರೈಸ್ ವಸತಿ ಶಾಲೆಗಳ ಕಾಯಂ, ಹೊರಸಂಪನ್ಮೂಲ ಡಿ-ಗ್ರೂಪ್ ಸಿಬ್ಬಂದಿಗೆ ಅಡುಗೆ ತಯಾರಿಸುವ ಮತ್ತು ಸ್ವಚ್ಛತೆ ಕಾಪಾಡುವ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಕೊಪ್ಪಳ: ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಕ್ರೈಸ್ ವಸತಿ ಶಾಲೆಗಳ ಕಾಯಂ, ಹೊರಸಂಪನ್ಮೂಲ ಡಿ-ಗ್ರೂಪ್ ಸಿಬ್ಬಂದಿಗೆ ಅಡುಗೆ ತಯಾರಿಸುವ ಮತ್ತು ಸ್ವಚ್ಛತೆ ಕಾಪಾಡುವ ಕುರಿತು ಜರುಗಿದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಹಾಸ್ಟೆಲ್ ವಾರ್ಡನ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ. ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಹಾಸ್ಟೆಲ್ ಮಕ್ಕಳ ಉತ್ತಮ ಶಿಕ್ಷಣ ನೀಡುವ ಜತೆಗೆ ಅವರ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳಿಗೆ ನೀಡುವ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ, ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಹಿನ್ನೆಲೆಯಲ್ಲಿ ತರಬೇತಿಯಲ್ಲಿ ಆರೋಗ್ಯ ಮತ್ತು ಆಹಾರ ಸುರಕ್ಷತಾ ಅಂಕಿತ ಇಲಾಖೆಯ ಅಧಿಕಾರಿಗಳು ನೀಡುವ ಕ್ರಮಗಳನ್ನು ಸರಿಯಾಗಿ ತಿಳಿದುಕೊಂಡು ಅವುಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಯಾವುದೇ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ತಾಲೂಕು ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಹಾಸ್ಟೆಲ್ ವ್ಯವಸ್ಥೆ ಪರಿಶೀಲನೆಗಾಗಿ ಡಿಸಿ ಹಾಗೂ ತಾವು ಅನಿರೀಕ್ಷಿತವಾಗಿ ಭೇಟಿ ನೀಡಲಿದ್ದು, ಈ ವೇಳೆ ಯಾವುದೇ ರೀತಿಯ ಲೋಪ ಕಂಡರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡುವುದು, ಡೆಂಘೀ, ಚಿಕನ್‌ಗೂನ್ಯ ರೋಗಗಳಿಂದ ಆರೋಗ್ಯ ರಕ್ಷಣೆ ಕುರಿತು ತಿಳಿಸಿದರು.

ಆಹಾರ ಸುರಕ್ಷತಾ ಇಲಾಖೆಯ ಕೃಷ್ಣ ಆಹಾರ ಸುರಕ್ಷತೆಯ ಬಗ್ಗೆ ವಿವರವಾಗಿ ತರಬೇತಿ ನೀಡಿದರು. ಶಶಿಧರ ನಿರೂಪಿಸಿದರು. ಕಾರ್ಯಾಗಾರದಲ್ಲಿ ವಿವಿಧ ವಸತಿ ಶಾಲೆಗಳು, ವಸತಿ ನಿಲಯಗಳ ನಿಲಯ ಪಾಲಕರು, ಕಾಯಂ, ಹೊರಸಂಪನ್ಮೂಲ ಡಿ-ಗ್ರೂಪ್ ಸಿಬ್ಬಂದಿ ಇತರರಿದ್ದರು.

ಸಂವಿಧಾನ ಪುಸ್ತಕ ಉಡುಗೊರೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್ ಇತ್ತೀಚೆಗೆ ಜಿಲ್ಲೆಯ ಕ್ಷೇತ್ರ ಭೇಟಿ ವೇಳೆ ಕುಕನೂರು ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ವಸತಿ ನಿಲಯದ ನಿಲಯ ಪಾಲಕರಿಗೆ ಸಂವಿಧಾನ ಕಿರು ಪುಸ್ತಕವನ್ನು ಜಿಪಂ ಸಿಇಒ ರಾಹುಲ್‌ ರತ್ನಂ ಪಾಂಡೆ ವಿತರಣೆ ಮಾಡಿದರು.

Share this article