ಸ್ಥಳೀಯ ಸಂಸ್ಥೆ ನೌಕರರಿಗೆ ಆರ್ಥಿಕ ಇಲಾಖೆಯಿಂದಲೇ ವೇತನ ನೀಡಿ

KannadaprabhaNewsNetwork | Published : Apr 18, 2025 12:37 AM

ಸಾರಾಂಶ

Pay salaries to local government employees from the finance department itself

-ಶಿವಮೊಗ್ಗದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಆಗ್ರಹ

----ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಸರ್ಕಾರದ ಆರ್ಥಿಕ ಇಲಾಖೆ ವತಿಯಿಂದಲೇ ವೇತನ ನೀಡಬೇಕು ಎಂದು ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಹೇಳಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಲಿಕೆ ಸೇರಿದಂತೆ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ನೌಕರರಿಗೆ ಎಸ್.ಎಫ್.ಸಿ. ವೇತನ ನಿಧಿಯಲ್ಲಿ ಶೇ.20 ರಿಂದ ಶೇ.15ರವರೆಗೆ ಅನುದಾನ ಕಡಿತ ಮಾಡಲಾಗಿದೆ. ವ್ಯತ್ಯಾಸದ ಮೊತ್ತವನ್ನು ಸ್ಥಳೀಯ ಸಂಸ್ಥೆಗಳ ನಿಧಿಯಿಂದಲೇ ಬಳಸಿ ವೇತನ ಪಾವತಿಸುವಂತೆ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ. ಆದರೆ, ಇದು ಸರಿಯಲ್ಲ, ಜನರ ತೆರಿಗೆ ಹಣವನ್ನು ಅಭಿವೃದ್ಧಿಗೆ ಮಾತ್ರ ಬಳಸಬೇಕಾಗುತ್ತದೆ. ಆ ಹಣವನ್ನು ವೇತನ ಎಂದು ಪರಿಗಣಿಸುವುದು ಸರಿಯಲ್ಲ. ಆದ್ದರಿಂದ, ಈಗಿರುವ ಸರ್ಕಾರದ ಆರ್ಥಿಕ ಇಲಾಖೆಯ ಅನುದಾನದಲ್ಲಿಯೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

7ನೇ ವೇತನ ಆಯೋಗದ ಸೌಲಭ್ಯವನ್ನು ಸ್ಥಳೀಯ ಸಂಸ್ಥೆಯ ನೌಕರರಿಗೂ ಆರ್ಥಿಕ ಇಲಾಖೆಯಿಂದಲೇ ಪಾವತಿಸಲು ಅನುದಾನ ಬಿಡುಗಡೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕೇಂದ್ರ ಕಚೇರಿಯ ಆದೇಶದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯೂ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ನೌಕರರು ಇಂದಿನಿಂದ ಹಂತಹಂತವಾಗಿ ಹೋರಾಟವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಗುರುವಾರದಿಂದ ಬಲತೋಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡುತ್ತಿದ್ದೇವೆ. ಈಗಾಗಲೇ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ತಿಳಿಸಿದ್ದೇವೆ. ನಮ್ಮ ಹಂತ ಹಂತದ ಹೋರಾಟದಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಯುಕ್ತರಿಗೆ ಮನವಿ ನೀಡುತ್ತೇವೆ. ವಿವಿಧ ಸಂಘಟನೆಗಳ ಜೊತೆಗೂಡಿ ಸಾರ್ವಜನಿಕರು ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡುತ್ತೇವೆ.

ಮೇ.೨೫ರ ತನಕವು ನಾವು ನಮ್ಮ ಹೋರಾಟವನ್ನು ಶಾಂತಿಯುತವಾಗಿ ಕರ್ತವ್ಯಕ್ಕೆ ಹಾಜರಾಗಿಯೇ ಮಾಡುತ್ತೇವೆ ಎಂದರು.

ಮೆ.25ರೊಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಮೇ 26ರಿಂದ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಅಂದು ಸಾಂದರ್ಭಿಕ ರಜೆಹಾಕಿ ಹೋರಾಟವನ್ನು ಆರಂಭಿಸುತ್ತೇವೆ. ಎಲ್ಲಾ ಕೆಲಸಗಳನ್ನು ನಿಲ್ಲಿಸುತ್ತೇವೆ. ಇಲ್ಲಿಯವರೆಗೆ ಅವಕಾಶ ಕೊಡದೇ ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ನಮಗೂ ಸಿಗಬೇಕು. ವಿಮಾ ಯೋಜನೆ ಜಾರಿಯಾಗಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಂಕಷ್ಟ ಭತ್ಯೆ ನೀಡಬೇಕು. ಎರವಲು ಸೇವೆ ವಾಪಸ್‌ ಪಡೆಯಬೇಕು. ಆರೋಗ್ಯ ಸಂಜೀವಿನಿ, ಮನೆ ಬಾಡಿಗೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು ಎಂಬುದು ನಮ್ಮ ಇತರ ಬೇಡಿಕೆಗಳಾಗಿವೆ ಎಂದರು.

ಗೋಷ್ಠಿಯಲ್ಲಿ ಪದಾಧಿಕಾರಿ ಡಿ. ಮೋಹನ್ ಕುಮಾರ್, ಎಸ್.ಜಿ.ಮಂಜಣ್ಣ, ನಾಗೇಶ್, ಮಧುನಾಯ್ಕ್, ಮಾರುತಿ, ರೇಣುಕಮ್ಮ, ಸುಲೇಮಾನ್, ಕುಮಾರ್, ಸಂತೋಷ್, ಕೆ.ಮಂಜಣ್ಣ, ವೆಂಕಟಮ್ಮ, ಲೋಹಿತ್‌ಯಾದವ್, ವಸಂತ್‌ಕುಮಾರ್ ಇದ್ದರು.

--

ಪೋಟೋ:ಶಿವಮೊಗ್ಗದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಮಾತನಾಡಿದರು.

17ಎಸ್‌ಎಂಜಿಕೆಪಿ06

Share this article