ಪೌರಕಾರ್ಮಿಕರ 6 ವರ್ಷಗಳ ಪಿಎಫ್ ಹಣ ಪಾವತಿಸಿ

KannadaprabhaNewsNetwork |  
Published : Oct 29, 2026, 02:00 AM IST
ಪೌರಕಾರ್ಮಿಕರ 6 ವರ್ಷಗಳ ಪಿಎಫ್ ಹಣ ಪಾವತಿಸಲು ಒತ್ತಾಯಿಸಿ ಬುಧವಾರ ಪಜಾ, ಪಪಂ ಪೌರಕಾರ್ಮಿಕರ ಮತ್ತು ನೌಕರರ ಸಂಘದಿಂದ ಇಪಿಎಫ್‌ಒ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಹು-ಧಾ ಮಹಾನಗರ ಪಾಲಿಕೆಯ ಸುಮಾರು 1,800 ಪೌರಕಾರ್ಮಿಕರಿಗೆ 2020ರಿಂದ 2026ರ ವರೆಗಿನ ಅವಧಿಯ 5ರಿಂದ 6 ವರ್ಷಗಳ ಭವಿಷ್ಯ ನಿಧಿ (ಪಿಎಫ್) ವಂತಿಗೆ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡದೇ ವಂಚಿಸಿದ್ದಾರೆ.

ಹುಬ್ಬಳ್ಳಿ:

ಹು-ಧಾ ಮಹಾನಗರ ಪಾಲಿಕೆಯ ಸುಮಾರು 1,800 ಪೌರಕಾರ್ಮಿಕರಿಗೆ 2020ರಿಂದ 2026ರ ವರೆಗಿನ ಅವಧಿಯ 5ರಿಂದ 6 ವರ್ಷಗಳ ಭವಿಷ್ಯ ನಿಧಿ (ಪಿಎಫ್) ವಂತಿಗೆ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡದೇ ವಂಚಿಸಿದ್ದಾರೆ ಎಂದು ಆರೋಪಿಸಿ, ಪಜಾ, ಪಪಂ ಪೌರಕಾರ್ಮಿಕರ ಮತ್ತು ನೌಕರರ ಸಂಘದಿಂದ ಬುಧವಾರ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದರು.

ಪಾಲಿಕೆಯ ಆಯುಕ್ತರು ಹಾಗೂ ವಲಯ ಕಚೇರಿ ಸಂಖ್ಯೆ 1ರಿಂದ 12ರ ವರೆಗಿನ ಅಧಿಕಾರಿಗಳು ಪೌರಕಾರ್ಮಿಕರ ಮಾಸಿಕ ಪಿಎಫ್ ವಂತಿಗೆ ಹಣವನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿಸದೆ ವಂಚಿಸಿದ್ದಾರೆ. ಪಾಲಿಕೆಯ ಎಚ್‌ಡಿಎಂಸಿ ಕೋಡ್‌ ಸಂಖ್ಯೆ GBHBL0050946000 ಅಡಿಯಲ್ಲಿ ನೋಂದಾಯಿತರಾಗಿರುವ ಸುಮಾರು 1,800 ಪೌರಕಾರ್ಮಿಕರು ಪ್ರಸ್ತುತ ಪಾಲಿಕೆಯ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಪಿಎಫ್ ಖಾತೆಗಳನ್ನು ಪರಿಶೀಲಿಸಿದಾಗ, ಕಳೆದ ಐದರಿಂದ ಆರು ವರ್ಷಗಳ ವಂತಿಗೆ ಹಣ ಜಮೆಯಾಗದಿರುವುದು ಗಮನಕ್ಕೆ ಬಂದಿದೆ. ಇದರಿಂದ ಪೌರಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ, ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ತಮ್ಮ ಸೇವಾ ಜ್ಯೇಷ್ಠತೆ ಕಳೆದುಕೊಳ್ಳುವ ಆತಂಕವೂ ಎದುರಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಡ್ಡಿ, ದಂಡ ಸಹಿತ ವಸೂಲಿಗೆ ಆಗ್ರಹ:

ನೌಕರರ ಭವಿಷ್ಯ ನಿಧಿ ಮತ್ತು ಇತರ ನಿಬಂಧನೆಗಳ ಕಾಯ್ದೆ-1952ರ ಸೆಕ್ಷನ್‌ 7ಎ ಅಡಿಯಲ್ಲಿ ತುರ್ತಾಗಿ ವಿಚಾರಣೆ ಕೈಗೊಂಡು, ಬಾಕಿ ಉಳಿಸಿಕೊಂಡಿರುವ ಪಿಎಫ್ ವಂತಿಗೆ ಹಣವನ್ನು ಬಡ್ಡಿ ಹಾಗೂ ದಂಡ ಸಹಿತ ವಸೂಲಿ ಮಾಡಿ ಪೌರಕಾರ್ಮಿಕರ ಖಾತೆಗಳಿಗೆ ಜಮೆ ಮಾಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಪೌರಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಈ ಸಮಸ್ಯೆ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೊಟಬಾಗಿ, ಅನಿತಾ ಈನಗೊಂದಿ, ಪವನ ಸಗಬಾಳ, ಲಕ್ಷ್ಮೀ ಬೇತಾಪಲ್ಲಿ, ನರಸಿಂಹ ಮಾದರ, ಸುನೀಲ ದೊಡ್ಡಮನಿ, ಮಹೇಶ ಮಾದರ, ನಾಗೇಶ ಚುರುಮುರಿ, ನಾಗರಾಜ ದೊಡ್ಡಮನಿ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್