ಕನ್ನಡಪ್ರಭವಾರ್ತೆ ಚಿತ್ರದುರ್ಗಉರ್ದು ಭಾಷೆ ಬೆಳೆಸಿ ಅಭಿವೃದ್ಧಿಪಡಿಸುವುದಕ್ಕಾಗಿ ಉರ್ದು ಅಕಾಡೆಮಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉರ್ದುವಿನಲ್ಲಿ ಜರ್ನಲಿಜಂ ಮಾಡುವರಿಗೆ ಅಕಾಡೆಮಿಯಿಂದಲೇ ಶುಲ್ಕ ಪಾವತಿ ಮಾಡಲಾಗುವುದೆಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮಹಮದ್ ಅಲಿಖಾಜಿ ತಿಳಿಸಿದರು.ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯಿಂದ ಬಡಾ ಮಕಾನ್ ಜಿಸ್ತಿಯಾ ಶಾದಿಮಹಲ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಮುಶಾಯಿರಾ (ಕವಿಗೋಷ್ಠಿ) ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಹಾವಳಿಯಿಂದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಅದಕ್ಕಾಗಿ ಮಕ್ಕಳು ಓದಿನ ಕಡೆ ಹೆಚ್ಚು ಗಮನ ಕೊಡುವಂತೆ ಶಿಕ್ಷಕರು ಹಾಗೂ ಪೋಷಕರು ನಿಗಾವಹಿಸಬೇಕು. ಉರ್ದು ಶಿಕ್ಷಕರು ತಮ್ಮ ಮಕ್ಕಳಲ್ಲಿ ಒಬ್ಬರನ್ನಾದರೂ ಉರ್ದು ಶಾಲೆಗೆ ಸೇರಿಸಿದಾಗ ಮಾತ್ರ ಉರ್ದು ಭಾಷೆ ಉಳಿಯಲು ಸಾಧ್ಯ ಎಂದರು. ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್‍ಪಾಷ ಮಾತನಾಡಿ, ಚಿತ್ರದುರ್ಗದಲ್ಲಿ ಉರ್ದು ಶಾಲೆಗಳ ಸಂಖ್ಯೆ ಕಡಿಮೆಯಿದೆ. ಕರ್ನಾಟಕದಲ್ಲಿ ಕನ್ನಡದ ವಾತಾವರಣಕ್ಕೆ ಎಲ್ಲರೂ ಒಗ್ಗಿಕೊಂಡಿರುವುದರಿಂದ ಕನ್ನಡವನ್ನೇ ಜಾಸ್ತಿ ಮಾತನಾಡುತ್ತಾರೆ. ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಉರ್ದು ಕವಿಗೋಷ್ಠಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಉರ್ದು ಕೇವಲ ಮುಸ್ಲಿಂ ಭಾಷೆಯಲ್ಲ. ದೇಶದ ಐಕ್ಯತೆ ಬೆಸೆಯುವ ಸಾಧನವಾಗಿ ಕೆಲಸ ಮಾಡುತ್ತಿದೆ. ಉರ್ದು ಕೇವಲ ಒಂದು ಸಮುದಾಯಕ್ಕೆ ಸೇರಿದ ಭಾಷೆಯೆಂದು ತಿಳಿಯುವುದು ತಪ್ಪು. ಉರ್ದು ಮಾತನಾಡುವ ಎಲ್ಲರೂ ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಬಹಳಷ್ಟು ಮಕ್ಕಳು ಉರ್ದು ಶಾಲೆಯಲ್ಲಿ ಓದಲು ಪೋಷಕರು ಹಾಗೂ ಗುರುಗಳ ಪ್ರೋತ್ಸಾಹವಿದೆ. ನಾನು ಕೂಡ ಒಂದರಿಂದ ಏಳನೇ ತರಗತಿವರೆಗೆ ಉರ್ದು ಶಾಲೆಯಲ್ಲಿ ಓದಿದ್ದೇನೆ. ಇದಕ್ಕೆ ನಮ್ಮ ತಂದೆ-ತಾಯಿ. ಶಿಕ್ಷಕರು ಕಾರಣ ಎಂದು ಸ್ಮರಿಸಿದರು.ಗೋಕಾಕ್ ವರದಿ ಜಾರಿಗಿಂತ ಮುಂಚೆ ಉರ್ದು ಶಾಲೆಯಲ್ಲಿ ಕನ್ನಡ ಕಲಿಯಲು ಅವಕಾಶವಿರಲಿಲ್ಲ. ಚಳವಳಿ ನಂತರ ಉರ್ದು ಶಾಲೆಯಲ್ಲಿ ಕನ್ನಡ ಕಲಿಯಲು ಅವಕಾಶವಾಯಿತು. ಇದರಿಂದ ಕನ್ನಡ ಮತ್ತು ಉರ್ದು ಭಾಷೆಗಳು ಸಾಮರಸ್ಯದ ಸಂಕೇತವಾಗಿ ಉಳಿದುಕೊಂಡಿವೆ. ಜಿಲ್ಲೆಯಲ್ಲಿರುವ ಪ್ರತಿಯೊಂದು ವಕ್ಫ್ ಸಂಸ್ಥೆಗಳಲ್ಲಿ ಉರ್ದು ಗ್ರಂಥಾಲಯ ತೆರೆದು ಒಳ್ಳೆ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಒದಗಿಸಿ ಮಕ್ಕಳು ಹಾಗೂ ವಯಸ್ಕರಲ್ಲಿ ಓದುವ ಹವ್ಯಾಸ ಬೆಳೆಸಬೇಕೆಂದು ಉರ್ದು ಅಕಾಡೆಮಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ, ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೆ.ಯಕ್ಬಾಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಸಾಧಿಕ್‍ವುಲ್ಲಾ, ಬಡಾಮಕಾನ್ ಮುತುವಲ್ಲಿ ಸೈಯದ್ ಮುಜೀಬ್, ನಾಯಕನಹಟ್ಟಿಯ ಹಜರತ್ ಆರೀಫುಲ್ಲಾ ಶಾ ಖಾದ್ರಿ ವೇದಿಕೆಯಲ್ಲಿದ್ದರು.