ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯ ಎಸೆದ ಪ್ರವಾಸಿಗರು: ದಂಡ ವಿಧಿಸಿದ ಪಿಡಿಒ

KannadaprabhaNewsNetwork |  
Published : May 17, 2026, 02:30 AM IST
ಸಾರ್ವಜನಿಕರ  | Kannada Prabha

ಸಾರಾಂಶ

ತಾಲೂಕಿನ ಸಾಣೂರು ಗ್ರಾಮ ಪಂಚಾಯಿತಿ ಸ್ವಚ್ಛತಾ ನಿಯಮ ಉಲ್ಲಂಘಿಸಿದ ಪ್ರವಾಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ರಸ್ತೆ ಬದಿಯಲ್ಲಿ ಊಟದ ಬಳಿಕ ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಗಲೀಜು ಮಾಡಿದ ಪ್ರವಾಸಿಗರನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಟ್ಟು ಹಿಡಿದು ದಂಡ ವಿಧಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಕಳ: ತಾಲೂಕಿನ ಸಾಣೂರು ಗ್ರಾಮ ಪಂಚಾಯಿತಿ ಸ್ವಚ್ಛತಾ ನಿಯಮ ಉಲ್ಲಂಘಿಸಿದ ಪ್ರವಾಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ರಸ್ತೆ ಬದಿಯಲ್ಲಿ ಊಟದ ಬಳಿಕ ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಗಲೀಜು ಮಾಡಿದ ಪ್ರವಾಸಿಗರನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಟ್ಟು ಹಿಡಿದು ದಂಡ ವಿಧಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಎರಡು ವಾಹನಗಳಲ್ಲಿ ಕೊಪ್ಪಳದಿಂದ ಬಂದಿದ್ದ ಪ್ರವಾಸಿಗರು ಸಾಣೂರು ಹೆದ್ದಾರಿ ಬದಿಯ ಅವಿನಾಶ ನಿವಾಸದ ಸಮೀಪ ಊಟ ಮುಗಿಸಿ ಪ್ಲಾಸ್ಟಿಕ್ ಕಸವನ್ನು ರಸ್ತೆ ಬದಿಯಲ್ಲೇ ಎಸೆದು ತೆರಳಲು ಯತ್ನಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರು ತಕ್ಷಣ ಪ್ರವಾಸಿಗರನ್ನು ತಡೆದು ದಂಡ ವಿಧಿಸಲು ಮುಂದಾದರು.

ಆದರೆ ಪ್ರವಾಸಿಗರು ‘ನಮ್ಮ ಊರಿನಲ್ಲಿ ಈ ರೀತಿ ಪದ್ಧತಿ ಇಲ್ಲ, ನೀವು ಬೋರ್ಡ್ ಹಾಕಿಲ್ಲ, ನಾವು ದಂಡ ಕೊಡುವುದಿಲ್ಲ’ ಎಂದು ವಾಗ್ವಾದ ನಡೆಸಿದರೆಂದು ತಿಳಿದುಬಂದಿದೆ. ಇದರಿಂದ ಕಠಿಣ ನಿಲುವು ತಾಳಿದ ಅಧಿಕಾರಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ, ಪ್ರಕರಣವನ್ನು ಕಾರ್ಕಳ ನಗರ ಠಾಣೆಯ ಗಮನಕ್ಕೆ ತಂದರು.

ಸ್ಥಳೀಯ ಸಾಮಾಜಿಕ ಮುಖಂಡ ಏರ್ನಡ್ಕ ವಿಶ್ವನಾಥ್ ಶೆಟ್ಟಿ ಸೇರಿದಂತೆ ಹಲವಾರು ಗ್ರಾಮಸ್ಥರು ಪಂಚಾಯತ್ ಕ್ರಮಕ್ಕೆ ಬೆಂಬಲ ಸೂಚಿಸಿದರು. “ದಂಡ ವಿಧಿಸಿದಾಗ ಮಾತ್ರ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡುತ್ತದೆ” ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.

ಇದಾದ ಬಳಿಕ ಪ್ರವಾಸಿಗರು ದಂಡ ತಪ್ಪಿಸಲು ಪ್ರಯತ್ನಿಸಿದ ಘಟನೆ ಕೂಡ ನಡೆಯಿತು. ಪಂಚಾಯಿತಿ ಅಧಿಕಾರಿಗಳು ಠಾಣೆಗೆ ತೆರಳುತ್ತಿದ್ದ ವೇಳೆ, ಪ್ರವಾಸಿಗರ ವಾಹನವು ಫುಲ್ಕೇರಿ ಬೈಪಾಸ್ ವೃತ್ತದಿಂದ ಪಡುಬಿದ್ರೆ ಕಡೆಗೆ ವೇಗವಾಗಿ ಚಲಿಸಿ ತಪ್ಪಿಸಿಕೊಳ್ಳಲು ಯತ್ನಿಸಿದೆ ಎಂದು ಹೇಳಲಾಗಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಗಲೀಜು ಮಾಡಿದ ಸ್ಥಳದ ಫೋಟೋ ಮತ್ತು ವಿಡಿಯೋ ದಾಖಲಿಸಿಕೊಂಡಿದ್ದು, ಅದನ್ನು ಆಧಾರವನ್ನಾಗಿ ಮಾಡಿಕೊಂಡು ನಗರ ಠಾಣೆಗೆ ದೂರು ಸಲ್ಲಿಸಿದರು.

ಪೊಲೀಸ್ ಠಾಣಾಧಿಕಾರಿ ಮುರಳಿಧರ ನಾಯಕ್ ಅವರು, ಐಪಿಸಿ ಕಾಯ್ದೆಯಡಿ ಗರಿಷ್ಠ ₹500 ದಂಡ ವಿಧಿಸುವ ಅವಕಾಶವಿದೆ ಎಂದು ತಿಳಿಸಿದ ಬಳಿಕ, ಪಂಚಾಯಿತಿ ಅಧಿಕಾರಿಗಳು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ವಿಷಯ ತರಲಾಯಿತು.

ಅಧಿಕಾರಿಗಳ ಸೂಚನೆಯಂತೆ ಉಡುಪಿ ಕಡೆಗೆ ತೆರಳುತ್ತಿದ್ದ ಪ್ರವಾಸಿಗರ ವಾಹನವನ್ನು ರಾತ್ರಿ ಸುಮಾರು 8 ಗಂಟೆಗೆ ತಡೆದು ನಿಲ್ಲಿಸಲಾಯಿತು. ಕೊನೆಗೆ ಪಂಚಾಯತ್ ಕಾಯ್ದೆಯಡಿ ಪ್ರವಾಸಿಗರಿಗೆ ₹2000 ದಂಡ ವಿಧಿಸಲಾಗಿದ್ದು, ಸ್ಕ್ಯಾನರ್ ಮೂಲಕ ಹಣ ಪಾವತಿಸಿಕೊಂಡು ರಶೀದಿ ನೀಡಲಾಯಿತು.

ಸಾಣೂರು ಗ್ರಾಮ ಪಂಚಾಯಿತಿ ಕೈಗೊಂಡ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಆಡಳಿತಾಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳ ಸ್ವಚ್ಛತಾ ಜಾಗೃತಿ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಿರಿಜನ ಹಾಡಿಯಲ್ಲಿ ಅನಧಿಕೃತ ಚರ್ಚ್: ತಮಿಳುನಾಡು ಮೂಲದ ಮಂದಿ ವಶಕ್ಕೆ
ಕಾರಿಂಜ ಸಹಿತ ಎರಡು ದೇವಸ್ಥಾನಕ್ಕೆ ಸಿಡಿಲಾಘಾತ