ಮಹಾವೀರರ ಸಂದೇಶದಿಂದ ಶಾಂತಿ, ಸಮಾಧಾನ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್

KannadaprabhaNewsNetwork |  
Published : Mar 31, 2026, 02:45 AM IST
ಪೋಟೊ-೩೦ ಎಸ್.ಎಚ್.ಟಿ. ೧ಕೆ- ತಹಸೀಲ್ದಾರ ಕೆ. ರಾಘವೇಂದ್ರ ರಾವು ಮಹಾವೀರ ಜಯಂತಿ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. | Kannada Prabha

ಸಾರಾಂಶ

ಅಹಿಂಸಾ ಪರಮೋ ಧರ್ಮ ಎಂದು ಜಗತ್ತಿಗೆ ಶಾಂತಿ ಸಾರಿದ ಜೈನ ಧರ್ಮದ ೨೪ನೇ ತೀರ್ಥಂಕರ ಭಗವಾನ್ ಮಹಾವೀರರ ಜಯಂತಿ ಎಲ್ಲ ಸಮುದಾಯದವರು ಒಗ್ಗೂಡಿ ಆಚರಣೆ ಮಾಡಬೇಕು. ಅವರ ಸರಳತೆ ಮೈಗೂಡಿಸಿಕೊಳ್ಳಬೇಕು.

ಶಿರಹಟ್ಟಿ: ಮಹಾವೀರರ ಅವರ ಸರಳ ಮತ್ತು ಸತ್ಯನಿಷ್ಠ ಜೀವನ ಹಾಗೂ ತತ್ವ ಸಿದ್ಧಾಂತ ನಮಗೆಲ್ಲ ಆದರ್ಶವಾಗಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ಸೋಮವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅಹಿಂಸಾ ಪರಮೋ ಧರ್ಮ ಎಂದು ಜಗತ್ತಿಗೆ ಶಾಂತಿ ಸಾರಿದ ಜೈನ ಧರ್ಮದ ೨೪ನೇ ತೀರ್ಥಂಕರ ಭಗವಾನ್ ಮಹಾವೀರರ ಜಯಂತಿ ಎಲ್ಲ ಸಮುದಾಯದವರು ಒಗ್ಗೂಡಿ ಆಚರಣೆ ಮಾಡಬೇಕು. ಅವರ ಸರಳತೆ ಮೈಗೂಡಿಸಿಕೊಳ್ಳಬೇಕು ಎಂದರು.ಮಹಾವೀರರು ತ್ಯಾಗ, ಅಹಿಂಸಾ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿ ಬದುಕಿದರು. ಅವರು ಲೋಕದಲ್ಲಿನ ಆಸೆ- ಆಕಾಂಕ್ಷೆಗಳನ್ನು ತ್ಯಜಿಸಿ, ಶಾಂತಿ ಮತ್ತು ಆತ್ಮಜ್ಞಾನವನ್ನು ಮುಖ್ಯವೆಂದು ಬೋಧಿಸಿದರು. ಎಲ್ಲ ಜೀವಿಗಳ ಮೇಲೂ ದಯೆ ತೋರಿಸಬೇಕು. ಎಲ್ಲ ಸಂದರ್ಭದಲ್ಲೂ ಸತ್ಯವನ್ನು ಪಾಲಿಸಬೇಕು. ಕಷ್ಟಗಳಲ್ಲಿಯೂ ಶಾಂತವಾಗಿರಬೇಕು. ಇಂದಿನ ವೇಗದ ಜೀವನದಲ್ಲಿ ಮಹಾವೀರರ ಸರಳತೆಯನ್ನು ಅನುಸರಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಸಮತೋಲನ ನೀಡುತ್ತದೆ ಎಂದರು.ಭಗವಾನ್ ಮಹಾವೀರರು ೪ನೇ ಶತಮಾನದಲ್ಲಿ ಉದಾತ್ತ ಕುಟುಂಬದಲ್ಲಿ ಜನಿಸಿದರು. ಅವರ ಜೀವಿತಾವಧಿಯಲ್ಲಿ ಭಗವಾನ್ ಮಹಾವೀರರನ್ನು ವರ್ಧಮಾನ್ ಎಂದು ಕರೆಯಲಾಗುತ್ತಿತ್ತು. ಗೌತಮ ಬುದ್ಧನಂತೆ ಮಹಾವೀರರು ತಮ್ಮ ನೆಮ್ಮದಿಯ ಮನೆಯನ್ನು ತೊರೆದು ಪ್ರಪಂಚದಲ್ಲಿ ಸತ್ಯವನ್ನು ಕಂಡುಕೊಳ್ಳಲು ಹೊರಪ್ರಪಂಚದಿಂದ ಆಶ್ರಯ ಪಡೆದರು ಎಂದರು.ಮುಖಂಡ ಶಿವನಗೌಡ ಪಾಟೀಲ ಮಾತನಾಡಿ, ಜೈನ ಧರ್ಮದ ಮೂಲ ಆಚಾರ ವಿಚಾರಗಳಲ್ಲಿ ಇಂದು ಕೂಡ ಯಾವುದೇ ಬದಲಾವಣೆಗಳು ಆಗಿಲ್ಲ. ಬದುಕುವ ಹಕ್ಕು ಎಲ್ಲ ಜೀವಿಗಳಿಗೂ ಸಮಾನವಾಗಿದೆ. ತಾವೂ ಬದುಕಿ ಇತರ ಜೀವಿಗಳಿಗೂ ಬದುಕಲು ಸಮಾನ ಅವಕಾಶ ನೀಡುವ ಜೈನ ಧರ್ಮ ಶ್ರೇಷ್ಠ ಧರ್ಮವಾಗಿದೆ ಎಂದರು.

ತಹಸೀಲ್ದಾರ್ ಕಾರ್ಯಾಲಯದ ಶಿರಸ್ತೇದಾರ ಎಚ್.ಜೆ. ಬಾವಿಕಟ್ಟಿ, ವಿನೋದ ಪಾಟೀಲ, ಶಿವರಾಜ ಜಾಧವ ಸೇರಿ ಅನೇಕ ಸಿಬ್ಬಂದಿ ಇದ್ದರು.

ಶಾಂತಿ, ಸಹಜೀವನ ಸಂದೇಶ ಸಾರಿದ ಸಂತ

ಮುಳಗುಂದ: ಭಗವಾನ್ ಮಹಾವೀರರು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಐದು ಮಹತ್ವದ ತತ್ವಗಳನ್ನು ಸಾರಿದ್ದು, ಇವು ಮಾನವ ಜೀವನಕ್ಕೆ ಮಾರ್ಗದರ್ಶಕವಾಗಿವೆ ಎಂದು ಆರ್.ಎನ್. ದೇಶಪಾಂಡೆ ಕಾಲೇಜಿನ ಪ್ರಾ. ರಮೇಶ ಕಲ್ಲನಗೌಡರ ತಿಳಿಸಿದರು.ಪಟ್ಟಣದ ದೇಶಪಾಂಡೆಯವರ ವಾಡೆಯಲ್ಲಿ ಸೋಮವಾರ ಸಂಜೆ ಜೈನ ಸಮಾಜದಿಂದ ನಡೆದ ಭಗವಾನ್ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಭಗವಾನ್ ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದು, ಅವರ ಜಯಂತಿ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಮಾನವೀಯ ಮೌಲ್ಯಗಳು, ಶಾಂತಿ ಮತ್ತು ಸಹಜೀವನದ ಸಂದೇಶವನ್ನು ಸಮಾಜಕ್ಕೆ ಸಾರುವ ಮಹತ್ವದ ದಿನವಾಗಿದೆ ಎಂದರು.

ಈ ವೇಳೆ ಡಾ. ಎಸ್.ಸಿ. ಚವಡಿ, ಸಾಹಿತಿ ಬಿ.ಎಂ. ಹರಪನಹಳ್ಳಿ ಸೇರಿದಂತೆ ಇತರರು ಮಾತನಾಡಿದರು. ಪಪಂ ಮಾಜಿ ಸದಸ್ಯರಾದ ಎನ್.ಆರ್. ದೇಶಪಾಂಡೆ, ಐ.ಎಂ. ಶೇಖ, ಎಸ್.ಸಿ. ಬಡ್ನಿ, ಮಹಾದೇವಪ್ಪ ವಿಜಾಪುರ ಸೇರಿದಂತೆ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನಕ್ಕೆ ಶಕ್ತಿ, ಪ್ರೋತ್ಸಾಹ ನೀಡುವ ನಾಟಕ
ಬದುಕಿನ ಪಾವಿತ್ರ್ಯ ಕಾಪಾಡಲು ಅಧ್ಯಾತ್ಮ ಅವಶ್ಯ: ಡಾ. ಕರಿಬಸವ ರಾಜೇಂದ್ರ ಶ್ರೀಗಳು