ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲ ಸೌಕರ್ಯಗಳಿದ್ದರೂ ಜನರಲ್ಲಿ ನೆಮ್ಮದಿ ಕಾಣುತ್ತಿಲ್ಲ. ಜೀವನದಲ್ಲಿ ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಅಭಿಪ್ರಾಯಪಟ್ಟರು.ತಾಲೂಕಿನ ಶರಣಕ್ಷೇತ್ರ ವಡವಡಗಿಯ ನಂದಿಮಠದ ಗುರುವೀರಸಿದ್ಧ ಶಿವಯೋಗಿಗಳ ೭೫ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳ ತೃತೀಯ ಪುಣ್ಯಾರಾಧನೆಯಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನ ಹಾಗೂ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ಚಾತ್ಯ ದೇಶಗಳಲ್ಲಿ ಮಠಮಾನ್ಯಗಳನ್ನು ನಾವು ಕಾಣುವುದಿಲ್ಲ. ಭಾರತ ದೇಶದಲ್ಲಿ ಮಾತ್ರ ಕಾಣುತ್ತೇವೆ. ಮಠಗಳು ಅಧ್ಯಾತ್ಮ ಮೂಲಕ ಜನರಿಗೆ ಶಿಕ್ಷಣ ಮುಟ್ಟಿಸುವ ಕಾರ್ಯ ಮಾಡುವುದರಿಂದ ನೆಮ್ಮದಿ ಸಿಗುತ್ತಿದೆ. ಅನೇಕ ಮಠಗಳಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಹ ಸಿಗುವುದನ್ನು ಕಾಣುತ್ತೇವೆ. ಇಲ್ಲಿನ ನಂದಿಮಠವು ಸಾಕಷ್ಟು ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಈ ಭಾಗದಲ್ಲಿ ಶ್ರೀಮಠ ಪ್ರೀತಿ ಗಳಿಸಿದೆ. ಶ್ರೀಮಠದ ಪೀಠಾಧಿಪತಿಗಳು ಸಹ ಭಕ್ತರನ್ನು ಪ್ರೇಮದಿಂದ ಕಾಣುವ ಮೂಲಕ ಅವರ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜಾತ್ರಾಮಹೋತ್ಸವದಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಂದಿಸಿರಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ವಿವಿಧ ಕ್ಷೇತ್ರದಲ್ಲಿ ಗುರುತರ ಸೇವೆ ಮಾಡುವವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರವು ಬಹುಮುಖ್ಯವಾಗಿದೆ. ಇಂದು ಸರಿಯಾದ ಸಂಸ್ಕಾರ ಸಿಗದೇ ಇರುವುದರಿಂದಾಗಿ ಜನರ ಬಾಂಧವ್ಯ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಸಂಸ್ಕಾರ ಸಿಗುವಂತೆ ಮಾಡುವುದು ಇಂದು ತುಂಬಾ ಅಗತ್ಯವಿದೆ. ಈ ದಿಶೆಯತ್ತ ಪಾಲಕರು ಗಮನ ಹರಿಸಬೇಕೆಂದರು.ನಂದಿಸಿರಿ ಪ್ರಶಸ್ತಿ ಸ್ವೀಕರಿಸಿದ ಚಾಣಕ್ಯ ಅಕಾಡೆಮಿಯ ಮುಖ್ಯಸ್ಥ ಎನ್.ಎಂ.ಬಿರಾದಾರ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಕಡೆಗೆ ಗಮನ ಹರಿಸಬೇಕು. ಜೀವನದಲ್ಲಿ ಅಂಕ ಮುಖ್ಯವಾಗದೇ ಒಳ್ಳೆಯ ಶಿಕ್ಷಣ ಮುಖ್ಯವಾಗಬೇಕಿದೆ. ಒಳ್ಳೆಯ ಶಿಕ್ಷಣ ಸಿಕ್ಕರೆ ತಾನಾಗಿಯೇ ಅವರು ಉತ್ತಮ ನಾಗರಿಕರಾಗಿ ಏನಾದರೂ ಸಾಧನೆ ಮಾಡುತ್ತಾರೆ. ಮಕ್ಕಳು ಒಂದು ವೇಳೆ ಮೊಬೈಲ್ ಹಿಡಿಯುತ್ತಿದ್ದರೆ ಮುಲಾಜಿಲ್ಲದೇ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಅದನ್ನು ಬಿಡಿಸುವ ಪ್ರಯತ್ನ ಪಾಲಕರು ಮಾಡಬೇಕು. ಮಕ್ಕಳಿಗಿಂತ ಯಾವುದು ದೊಡ್ಡದಲ್ಲ. ಅವರನ್ನು ಸತ್ಪ್ರಜೆ ಮಾಡಲು ಪಾಲಕರು ಶ್ರಮಿಸಬೇಕೆಂದು ವಿನಂತಿಸಿದ ಅವರು, ನಾನು ಇದುವರೆಗೂ ನನ್ನ ಅಕಾಡೆಮಿಯಿಂದ ತರಬೇತಿ ಪಡೆದ ೨೬ ಸಾವಿರ ಜನರಿಗೆ ಉದ್ಯೋಗ ಲಭಿಸಿದೆ. ಇಲ್ಲಿನ ಶ್ರೀಮಠದ ಶ್ರೀಗಳು ಸಹ ನೊಂದ ಭಕ್ತರಿಗೆ ತಮ್ಮ ಭವಿಷ್ಯವಾಣಿಯಿಂದ ಸೂಕ್ತವಾದ ಮಾರ್ಗದರ್ಶನ ನೀಡುತ್ತಿದ್ದಾರೆ. ಜೋತಿಷ್ಯವು ಒಂದು ವಿಜ್ಞಾನವಾಗಿದೆ. ಇದರ ಅಧ್ಯಯನವು ನಮಗೆ ತಿಳುವಳಿಕೆ ನೀಡುತ್ತದೆ. ತಮ್ಮ ಜೀವನದಲ್ಲಿಯೂ ಶ್ರೀಮಠದ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಗಳು ನನ್ನ ಕೈ ನೋಡಿ ಜೋತಿಷ್ಯ ಹೇಳಿದಂತೆ ಆಗಿರುವುದನ್ನು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ವೀರಸಿದ್ದ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ದಾನ-ಧರ್ಮ ಗುಣ ಮೈಗೂಡಿಸಿಕೊಂಡರೆ ಅವರ ಜೀವನ ಉತ್ತಮವಾಗಿರುತ್ತದೆ. ನಮ್ಮ ಶ್ರೀಮಠದ ಗುರುಗಳ ಶಕ್ತಿ ದೊಡ್ಡದು. ಭಕ್ತರಿಗೆ ಶ್ರೀಮಠದ ಆಸ್ತಿಯಾಗಿದ್ದಾರೆ. ಇದರಿಂದಾಗಿ ಭಕ್ತರಿಂದ ಮಠವು ಬೆಳೆಯುತ್ತಿದೆ. ಶ್ರೀಮಠಕ್ಕೆ ಅನೇಕ ಭಕ್ತರು ಸಾಕಷ್ಟು ಸಹಾಯ-ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಅವರ ಸೇವೆ ಸ್ಮರಣಾರ್ಹ ಎಂದರು.ವಡವಡಗಿ ಗ್ರಾಮಕ್ಕೆ ಬರುವ ರಸ್ತೆ ದುರಸ್ತಿಗಾಗಿ ಶಾಸಕರ ಗಮನಕ್ಕೆ ತಂದಾಗ ಅವರು ಅದನ್ನು ಡಾಂಬರೀಕರಣ ಮಾಡುವ ಮೂಲಕ ಜನರಿಗೆ ತುಂಬಾ ಅನುಕೂಲ ಮಾಡಿಕೊಟ್ಟಿದ್ದಾರೆ. ಗ್ರಾಮದಲ್ಲಿ ಸಿಸಿ ರಸ್ತೆ ಸಹ ಮಾಡುವ ಭರವಸೆ ಶಾಸಕರು ಭರವಸೆ ನೀಡಿದ್ದಾರೆ. ದೇವರಹಿಪ್ಪರಗಿ ಕ್ಷೇತ್ರದಲ್ಲಿ ಶಾಸಕ ರಾಜುಗೌಡ ಪಾಟೀಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ನಂದಿಸಿರಿ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಡಾ.ಸಿದ್ದಪ್ಪ ಬಿದರಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಾಂತಪ್ಪ ಶಿರಶ್ಯಾಡ(ಕೃಷಿ), ಎನ್.ಎಂ.ಬಿರಾದಾರ(ಶಿಕ್ಷಣ), ಐ.ಸಿ.ಪಟ್ಟಣಶೆಟ್ಟಿ(ಸಮಾಜಸೇವೆ), ಮಹಾದೇವ ಬಸರಕೋಡ(ಸಾಹಿತ್ಯ), ಮೌಲಾಸಾಬ ಜಾಗೀರದಾರ(ಕಲಾ), ಡಾ.ಸಿದ್ದಪ್ಪ ಬಿದರಿ(ಜಾನಪದ), ಬಸವರಾಜ ನಂದಿಹಾಳ(ಪತ್ರಿಕಾಕ್ಷೇತ್ರ) ಇವರಿಗೆ ಶ್ರೀಮಠದಿಂದ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾನ್ನಿಧ್ಯವನ್ನು ಕೊಲ್ಹಾರದ ಕಲ್ಲಿನಾಥದೇವರು, ದೇವರಹಿಪ್ಪರಗಿಯ ಮಡಿವಾಳೇಶ್ವರ ಸ್ವಾಮೀಜಿ, ಚಡಚಣದ ಷಡಕ್ಷರ ಸ್ವಾಮೀಜಿ, ಸುರಪುರದ ಪ್ರಭುಲಿಂಗ ಸ್ವಾಮೀಜಿ, ಹಳೆಪೇಟೆಯ ಶ್ರೀಗಳು, ಸಂಗಮನಾಥ ದೇವರು, ನಿರಂಜನದೇವರು ವಹಿಸಿದ್ದರು. ಮುಖಂಡರಾದ ಬಸವರಾಜ ಡೆಂಗಿ, ಗುರನಗೌಡ ಪಾಟೀಲ ಇತರರು ಇದ್ದರು. ಮಂಜುನಾಥ ಬಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ವೈ.ಎಸ್.ಗಂಗಶೆಟ್ಟಿ ನಿರೂಪಿಸಿದರು. ಶೇಖರಗೌಡ ಉದಾನಗೌಡರ ವಂದಿಸಿದರು. ಇದೇ ಸಂದರ್ಭದಲ್ಲಿ ಇಟಗಾ ಗ್ರಾಮದ ದತ್ತಪ್ಪ ಪೂಜಾರಿ, ಭೀಮರಾಯ ಪೂಜಾರಿ ಕುಟುಂಬಸ್ಥರು ಶ್ರೀಮಠದ ವೀರಸಿದ್ಧ ಸ್ವಾಮೀಜಿಗಳಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿದರು. ಬಸವರಾಜ ಗಂಗಶೆಟ್ಟಿ, ಸಿದ್ದನಗೌಡ ಪಾಟೀಲ, ದೇವಾನಂದ ಹೂಗಾರ ಸೇರಿದಂತೆ ವಿವಿಧ ಭಕ್ತರಿಂದ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ನಂತರ ಜರುಗಿದ ಜಾನಪದ ಹಬ್ಬ ಜರುಗಿತು.