ಧಾರವಾಡ: ಎಲ್ಲ ವೈರುಧ್ಯಗಳನ್ನು ಮರೆತು ಕೂಡಿ ಬಾಳಲು ಪ್ರಯತ್ನಿಸಬೇಕು ಎಂದು ಭಾರತೀಯ ಸಕಲ ಧರ್ಮ ಸಿದ್ಧಾಂತಗಳು ಬಯಸುತ್ತವೆ. ಆಗ ಅಂಕುರಿಸುವ ಭಾವೈಕ್ಯದ ಬದುಕಿನಿಂದ ಮನುಕುಲಕ್ಕೆ ನೆಮ್ಮದಿ ಸಾಧ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಚಿಂತನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಧರ್ಮ ಮತ್ತು ಸಮಾಜ ಛಿದ್ರವಾಗಲು ಯಾರೂ ಅವಕಾಶ ಕೊಡಬಾರದು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮದ ವಿಶಾಲ ವಿಚಾರಗಳನ್ನು ಅರ್ಥ ಮಾಡಿಕೊಂಡಾಗ ಎಲ್ಲಿಯೂ ದ್ವಂದ್ವಗಳು ಹುಟ್ಟಿಕೊಳ್ಳುವುದಿಲ್ಲ ಎಂದರು.
ರಂಭಾಪುರಿ ಪೀಠದ ಶಾಖಾಮಠವಾಗಿರುವ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಾಚೀನತೆ ಬಸವ ಪೂರ್ವ ಯುಗಕ್ಕೆ ಸೇರಿದ್ದಾಗಿದೆ. ಈ ನಿಟ್ಟಿನಲ್ಲಿ ವೀರಶೈವ ಧರ್ಮದ ಚಾರಿತ್ರಿಕ ಘನತೆ ಇಲ್ಲಿ ಎದ್ದು ಕಾಣುತ್ತದೆ. ಇಂತಹ ಎಲ್ಲ ಸಪ್ರಮಾಣ ಸಂಗತಿಗಳನ್ನು ಮರೆಮಾಚಲು ನಡೆದಿರುವ ವ್ಯವಸ್ಥಿತ ಪ್ರಯತ್ನಗಳ ವಿಚಾರಗಳನ್ನು ಯಾರೂ ಸ್ವೀಕರಿಸಬಾರದು ಎಂದೂ ಜಗದ್ಗುರುಗಳು ಸ್ಪಷ್ಟಪಡಿಸಿದರು.ಶ್ರೀಮಠದ ಶಾಂತಲಿಂಗ ಶಿವಾಚಾರ್ಯರು ಮಾತನಾಡಿದರು. ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ಧೇಶ್ವರಮಠದ ಕಾಡಸಿದ್ಧೇಶ್ವರ ಸ್ವಾಮೀಜಿ, ಮಹಾರಾಷ್ಟ್ರದ ಡಾ. ಅಭಿನವ ಬಸವಲಿಂಗ ಸ್ವಾಮೀಜಿ, ಕಲಬುರ್ಗಿಯ ಪರ್ವತೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಡಾ. ಸತೀಶ ಗುರೂಜಿ, ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ನಾಡಿನ ವಿವಿಧ ಮಠಗಳ ಮಠಾಧೀಶರು ಇದ್ದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಶಿವಲೀಲಾ ಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಮಂಜುನಾಥ ಮಕ್ಕಳಗೇರಿ, ಅಮ್ಮಿನಬಾವಿ ಗ್ರಾಪಂ ಅಧ್ಯಕ್ಷರಾದ ನೀಲವ್ವ ತಿದಿ, ಪದ್ಮಾವತಿ ದೇಸಾಯಿ, ಕಾಮಣಿ ವೈದ್ಯ ಡಾ. ನಿತಿನ್‌ಚಂದ್ರ ಹತ್ತಿಕಾಳ ಮತ್ತಿತರರು ಇದ್ದರು. ಶಂಕರ ಯಡಳ್ಳಿ ಭರತನಾಟ್ಯ ಪ್ರದರ್ಶನ ನೀಡಿದರು. ನಂತರ ದಾಸೋಹ ಸೇವೆ ನಡೆಯಿತು.